Advertisement

ಮೂರು ಕೋರ್ಸ್‌ಗಳತ್ತಲೇ ವಿದ್ಯಾರ್ಥಿಗಳ ಚಿತ್ತ​​​​​​​

06:00 AM Aug 03, 2018 | Team Udayavani |

ಬೆಂಗಳೂರು : ಇಂಜಿನಿಯರಿಂಗ್‌ ಕಾಲೇಜಿಗಳು ವಿದ್ಯಾರ್ಥಿಗಳನ್ನು ಸೆಳೆಯಲು ತಂತ್ರಜ್ಞಾನ ಆಧಾರಿತ ಹೊಸ ಕೋರ್ಸ್‌ಗಳನ್ನು ಪರಿಚಯಿಸುತ್ತಿದ್ದರೂ, ಕಂಪ್ಯೂಟರ್‌ಸೈನ್ಸ್‌, ಮೆಕಾನಿಕಲ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

Advertisement

ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.  ಸರ್ಕಾರಿ ಕೋಟಾದಡಿ ಪ್ರಸಕ್ತ ಸಾಲಿನಲ್ಲಿ ಲಭ್ಯವಿದ್ದ 55,216 ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆಯ ಒಂದು ಮತ್ತು ಎರಡನೇ ಸುತ್ತು ಪೂರ್ಣಗೊಂಡಿದೆ.

ಮೊದಲ ಸುತ್ತಿನಲ್ಲಿ ಸಾಮಾನ್ಯ ಕೋಟಾದಡಿ 46,768, ಹೈದರಬಾದ್‌ ಕರ್ನಾಟಕ ಕೋಟಾದಡಿ 6,293 ಮತ್ತು ವಿಶೇಷ ವರ್ಗದ ಕೋಟಾದಡಿ 2,155 ಸೀಟು ಲಭ್ಯವಾಗಿತ್ತು.

ಎರಡನೇ ಸುತ್ತಿನಲ್ಲಿ ಸಾಮಾನ್ಯ, ಹೈ.ಕ ಮತ್ತು ವಿಶೇಷ ವರ್ಗದ ಕೋಟಾದಡಿ ಕ್ರಮವಾಗಿ 24,430, 1,292 ಹಾಗೂ 77 ಸೀಟುಗಳು ಅರ್ಹ ಅಭ್ಯರ್ಥಿಗಳಿಗೆ ಲಭ್ಯವಾಗಿತ್ತು. ಎರಡನೇ ಸುತ್ತು ಪೂರ್ಣಗೊಂಡಿದ್ದು, ಎರಡನೇ ಮುಂದುವರಿದ ಸುತ್ತಿನ ಆಪ್ಷನ್‌ ಎಂಟ್ರಿ ಆರಂಭವಾಗಿದೆ. ಸುಮಾರು 12 ಸಾವಿರ ಸೀಟುಗಳು ಸರ್ಕಾರಿ ಕೋಟಾದಡಿ ಲಭ್ಯವಿದೆ.

2ನೇ ಮುಂದುವರಿದ ಸುತ್ತಿನಲ್ಲಿ ಹಂಚಿಕೆಯಾಗಿ ಉಳಿದ ಸೀಟಗಳನ್ನು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದಕ್ಕಾಗಿ ಅಭ್ಯರ್ಥಿಗಳ ದಾಖಲೆ ಪರಿಶೀಲನೆಯೂ ನಡೆಯುತ್ತಿದೆ. ರಾಜ್ಯದ 215 ಇಂಜಿನಿಯರಿಂಗ್‌ ಕಾಲೇಜಿನಲ್ಲಿ  ಕಂಪ್ಯೂಟರ್‌ ಸೈನ್ಸ್‌, ಸಿವಿಲ್‌ ಇಂಜಿನಿಯರಿಂಗ್‌, ಎಲೆಕ್ಟ್ರಿಕಲ್ಸ್‌ ಮತ್ತು ಎಲೆಕ್ಟ್ರಾನಿಕ್ಸ್‌, ಕೆಮಿಕಲ್‌ ಇಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌, ಎರೋನೋಟಿಕಲ್‌ ಇಂಜಿನಿಯರಿಂಗ್‌, ಏರೋಸ್ಪೇಸ್‌ ಇಂಜಿನಿಯರಿಂಗ್‌, ಮೆಕಾನಿಕಲ್‌ ಇಂಜಿನಿಯರಿಂಗ್‌, ಎನ್ವಿರಾನ್‌ಮೆಂಟ್‌ ಸೈನ್ಸ್‌, ಮಾಹಿತಿ ತಂತ್ರಜ್ಞಾನ, ಅಟೋಮೊಬೈಲ್‌ ಇಂಜಿನಿಯರಿಂಗ್‌ ಹಾಗೂ ನ್ಯಾನೋ ಟೆಕ್ನಾಲಜಿ ಸೇರಿದಂತೆ ಅನೇಕ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಆಫ‌ರ್‌ ಮಾಡಲಾಗುತ್ತದೆ.

Advertisement

ಆದರೆ, ವಿದ್ಯಾರ್ಥಿಗಳ ಚಿತ್ತ ಮಾತ್ರ ಕಂಪ್ಯೂಟರ್‌ ಸೈನ್ಸ್‌, ಮೆಕಾನಿಕಲ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಕೋರ್ಸ್‌ಗಳ ಸುತ್ತವೇ ಕೇಂದ್ರೀತವಾಗಿದೆ.ಸಿವಿಲ್‌ ಇಂಜಿನಿಯರಿಂಗ್‌ ಕೋರ್ಸ್‌ಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಕಂಪ್ಯೂಟರ್‌ ವಿಜ್ಞಾನ, ಮೆಕಾನಿಕಲ್‌ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸೀಟು ಪಡೆದಿರುವ ಅಭ್ಯರ್ಥಿಗಳಲ್ಲಿ ಶೇ.75ಕ್ಕೂ ಹೆಚ್ಚಿನವರು ಈ 3 ಕೋರ್ಸ್‌ಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಾಧಿಕಾರದ ಮೂಲಗಳು ಖಚಿತಪಡಿಸಿವೆ.

ಹೆಚ್ಚುವರಿ ಸೀಟು ಲಭ್ಯ : ವೃತ್ತಿಪರ ಕಾಲೇಜುಗಳಲ್ಲಿ ಇಂಜಿನಿಯರಿಂಗ್‌ ಸೀಟುಗಳನ್ನು ವಿದ್ಯಾರ್ಥಿಗಳಿಗೆ ಮುಕ್ತವಾಗಿ ಮಾರಾಟ ಮಾಡುತ್ತಿರುವುದು ಗೌಪ್ಯವಾಗಿ ಉಳಿದಿಲ್ಲ. ಸರ್ಕಾರಕ್ಕೆ ಸೀಟ್‌ ಮ್ಯಾಟ್ರಿಕ್‌ ನೀಡುವ ಮೊದಲೇ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡುವುದು ಉಂಟು. ಇತ್ತೀಚಿನ ವರ್ಷದಲ್ಲಿ ಇಂಜಿನಿಯರಿಂಗ್‌ ಸೀಟುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾದ ಸೀಟುಗಳಲ್ಲಿ ಭರ್ತಿಯಾಗದೇ ಉಳಿದ ಸೀಟುಗಳನ್ನು ಕಾಮೆಡ್‌-ಕೆಗೆ ನೀಡುತ್ತಾರೆ. ಅಲ್ಲಿಯೂ ಭರ್ತಿಯಾಗದ ಸೀಟುಗಳನ್ನು ಸರ್ಕಾರಿ ಕೋಟಾದಡಿ ಹಂಚಿಕೆ ಮಾಡಲು ಪ್ರಾಧಿಕಾರಕ್ಕೆ ಸಲ್ಲಿಸುತ್ತಾರೆ.ಮೊದಲ ಸುತ್ತಿನ ಸೀಟು ಹಂಚಿಕೆಯ ನಂತರ ರಾಜ್ಯದ ಸುಮಾರು 21 ಇಂಜಿನಿಯರಿಂಗ್‌ ಕಾಲೇಜುಗಳು 1,267 ಸೀಟುಗಳನ್ನು ಪ್ರಾಧಿಕಾರಕ್ಕೆ ಹಿಂದಿರುಗಿಸಿವೆ. ಇದರಲ್ಲಿ  ಸಿವಿಲ್‌ ಇಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌  ಕೋರ್ಸ್‌ಗಳ ಸೀಟು ಹೆಚ್ಚಿದೆ. ಎರಡನೇ ಮುಂದುವರಿದ ಸುತ್ತಿನಲ್ಲಿ ಇನ್ನಷ್ಟು ಸೀಟುಗಳು ವಿದ್ಯಾರ್ಥಿಗಳಿಗೆ ಸಿಗುವ ಸಾಧ್ಯತೆ ಇದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ಹೆಚ್ಚಿನ ಅಭ್ಯರ್ಥಿಗಳು ಕಂಪ್ಯೂಟರ್‌ ವಿಜ್ಞಾನ, ಮೆಕಾನಿಕಲ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಕೋರ್ಸ್‌ಗಳನ್ನು ಆಯ್ದುಕೊಂಡಿದ್ದಾರೆ. ಖಾಸಗಿ ಆಡಳಿತ ಮಂಡಳಿಗಳಿಂದ ತಡವಾಗಿ ಬಂದಿರುವ ಸೀಟುಗಳನ್ನು  ಸಿಇಟಿ ರ್‍ಯಾಂಕ್‌ ಮತ್ತು ಮೆರಿಟ್‌ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ.
– ಗಂಗಾಧರಯ್ಯ, ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next