Advertisement

ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಕಳಪೆ ಬೇಳೆ

05:48 PM Feb 18, 2022 | Team Udayavani |

ಸಿಂಧನೂರು: ಹುಳು ಮಿಶ್ರಿತ ತೊಗರಿ ಬೇಳೆಯನ್ನು ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ಆಯಾ ಶಾಲಾ ಮುಖ್ಯಸ್ಥರೇ ವಾಪಸ್‌ ಮಾಡಲಾರಂಭಿಸಿದ್ದಾರೆ.

Advertisement

ತಾಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ಬೇಕಾಗುವ ಬೇಳೆಯಲ್ಲೂ ನಡೆದ ವ್ಯವಹಾರ ಇಂತಹ ಬೆಳವಣಿಗೆಗೆ ಕಾರಣವಾಗಿದೆ.

ಆಯಾ ಶಾಲೆಗಳಿಗೆ ಆಹಾರ ನಾಗರಿಕ ಸರಬರಾಜು ನಿಗಮದಿಂದ ಪೂರೈಕೆಯಾಗಿದ್ದ ಬೇಳೆ ಗುಣಮಟ್ಟ ಸರಿಯಿಲ್ಲವೆಂದು ವಾಪಸ್‌ ಕಳಿಸಲಾಗಿದೆ. ಅದನ್ನು ಸ್ವೀಕರಿಸಿ, ಬೇರೆ ಬೇಳೆಯನ್ನು ಆಹಾರ ನಿಗಮದವರು ವರ್ಗಾಯಿಸಿ ಕೊಡಲಾರಂಭಿಸಿದ್ದಾರೆ.

ತಾಲೂಕಿನ 348 ಸರಕಾರಿ ಶಾಲೆಗಳಿಗೆ ಬಿಸಿಯೂಟಕ್ಕಾಗಿ 310 ಕ್ವಿಂಟಲ್‌ ತೊಗರಿ ಬೇಳೆಗೆ ಬೇಡಿಕೆಯಿದೆ. 54,084 ವಿದ್ಯಾರ್ಥಿಗಳು ಅಕ್ಷರ ದಾಸೋಹ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಕಲಬುರಗಿ ಶಿವಶಕ್ತಿ ಏಜೆನ್ಸಿಯವರ ಮೂಲಕ ತೊಗರಿ ಬೇಳೆಯನ್ನು ಪೂರೈಕೆ ಮಾಡಲಾಗಿದೆ. ಈ ಬೇಳೆಯನ್ನು ನೋಡುತ್ತಿದ್ದಂತೆ ತಾಲೂಕಿನ ಗೊಬ್ಬರಕಲ್‌, ಜವಳಗೇರಾ, ಸಿಂಗಾಪುರ ಶಾಲೆಯ ಸಿಬ್ಬಂದಿ, ಬಿಸಿಯೂಟಕ್ಕೆ ಬಳಸಲು ಸೂಕ್ತವಾಗಿಲ್ಲವೆಂದು ವಾಪಸ್‌ ಮಾಡಿದ್ದಾರೆ.

ಬದಲಾಯಿಸುತ್ತಿರುವ ಸಿಬ್ಬಂದಿ

Advertisement

ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿ ಹಂಚಿಕೆಯಾದ ತೊಗರಿ ಬೇಳೆಯ ಪೈಕಿ 140 ಚೀಲಗಳನ್ನು ತೆಗೆದು ಇರಿಸಲಾಗಿದೆ. 70 ಕ್ವಿಂಟಲ್‌ನ್ನು ಟೆಂಡರ್‌ ಪಡೆದುಕೊಂಡಿರುವ ಸಂಸ್ಥೆಗೆ ವಾಪಸ್‌ ಕಳುಹಿಸಲಾಗಿದೆ. ಶಾಲಾ ಸಿಬ್ಬಂದಿ ಇದನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಬೆಳಕಿಗೆ ಬಂದಿದೆ. ಈಗಾಗಲೇ ಶಾಲೆಗಳಿಗೆ ತಲುಪಿರುವ ದಾಸ್ತಾನು ವಾಪಸ್‌ ನೀಡುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. 1,400 ಕ್ವಿಂಟಲ್‌ ಬೇಳೆಯನ್ನು ಕೊಟ್ಟಿರುವ ಸಂಸ್ಥೆಗೆ ಇದರಿಂದ ಬಿಸಿ ತಟ್ಟಲಾರಂಭಿಸಿದೆ.

ಮಾರುಕಟ್ಟೆ ದರ ವ್ಯತ್ಯಾಸ

ಮುಕ್ತ ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿ ಮಾಡುತ್ತಿರುವ ತೊಗರಿ ಬೇಳೆಯ ಬೆಲೆ ಪ್ರತಿ ಕೆಜಿಗೆ 95-110 ರೂ. ದರವಿದೆ. ಆದರೆ, ಸರಕಾರದ ಅಕ್ಷರ ದಾಸೋಹ ಯೋಜನೆಗೆ ಪೂರೈಕೆ ಮಾಡುವ ಏಜೇನ್ಸಿಯವರು 84.50 ರೂ.ಗೆ ಸರಬರಾಜು ಮಾಡುತ್ತಿದ್ದಾರೆ. ಈ ಮಧ್ಯೆ ಉಳಿಕೆ ಮಾರ್ಗ ಅನುಸರಿಸಿದ ಪರಿಣಾಮ ಕಳಪೆ ಬೇಳೆ ಶಾಲೆಗಳಿಗೆ ತಲುಪಿವೆ.

ಆಹಾರ ನಿಗಮದ ಉಗ್ರಾಣದಲ್ಲಿ ಗೋಧಿ ಪಕ್ಕದಲ್ಲಿ ಬೇಳೆ ಇಟ್ಟಿರುವುದ ರಿಂದ ಹುಳು ಬಂದಿವೆ. ನಾನು ಭೇಟಿಗೆ ಹೋದಾಗ ಎಲ್ಲ ಕಡೆ ದೂರುಗಳಿಲ್ಲ. ಸಮಸ್ಯೆ ಇದ್ದ ಕಡೆಗಳಲ್ಲಿ ಆಹಾರ ನಿಗಮ ವ್ಯವಸ್ಥಾಪಕರು ತಕ್ಷಣವೇ ಬದಲಾವಣೆ ಮಾಡಿ ಕೊಟ್ಟಿದ್ದಾರೆ. -ಶರಣಪ್ಪ, ಸಹಾಯಕ ನಿರ್ದೇಶಕ, ಅಕ್ಷರ ದಾಸೋಹ ಯೋಜನೆ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next