ಬೆಳ್ತಂಗಡಿ: ಲಾೖಲ ಗ್ರಾಮದ ಬಜಕ್ಕಿರೆ ಸಾಲು ಎಂಬಲ್ಲಿ ಸೋಮಾವತಿ ನದಿಗೆ ಅನೇಕ ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಾಣದೆ. ಇತ್ತೀಚಿನ ಕೆಲವು ವರ್ಷಗಳಿಂದ ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಲು ಸಂಬಂಧಪಟ್ಟವರು ಮುಂದಾಗಿರಲಿಲ್ಲ. ಆದರೆ ಬೆಳ್ತಂಗಡಿ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಕೈಜೋಡಿಸಿದ್ದಾರೆ.
ಕಿಂಡಿ ಅಣೆ ಕಟ್ಟಿನಲ್ಲಿ ನೀರು ಸಂಗ್ರಹಗೊಳಿಸಿದರೆ ಅಂತರ್ಜಲ ವೃದ್ಧಿಗೆ, ನೀರಿನ ಸಮಸ್ಯೆಗೆ ಪರಿಹಾರ ಉಂಟಾಗುವುದನ್ನು ಮನಗಂಡು, ಆ್ಯನ್ಸ್ ಕ್ಲಬ್ ಬೆಳ್ತಂಗಡಿ, ಡೌನ್‌ಟೌನ್ ರೋಟರಿ ಸಂಸ್ಥೆ ಮಂಗಳೂರು, ಬೆಳ್ತಂಗಡಿಯ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಸಹಕಾರದಲ್ಲಿ ರವಿವಾರದಿಂದ ನೀರು ಸಂಗ್ರಹ ಯೋಜನೆಗೆ ಮುಂದಾಗಿದ್ದಾರೆ.
ಕಿಂಡಿ ಅಣೆಕಟ್ಟಿನಲ್ಲಿ ಮಳೆಗಾಲದಲ್ಲಿ ಸಿಲುಕಿಕೊಂಡಿದ್ದ ಮರಮಟ್ಟು, ಗಿಡಗಂಟಿ ಹಾಗೂ ಮರಳನ್ನು ತೆರವುಗೊಳಿಸಿ ಕಿಂಡಿ ಅಣೆಕಟ್ಟಿನ ಪ್ರದೇಶವನ್ನು ಸ್ವತ್ಛಗೊಳಿಸಿದ್ದಾರೆ. 800ರಷ್ಟು ಗೋಣಿಚೀಲಗಳಲ್ಲಿ ನೀರು ಸಂಗ್ರಹಕ್ಕೆ ಬೇಕಾಗುವಷ್ಟು ಮರಳನ್ನು ತುಂಬಿಸಿ ಇಡಲಾಗಿದೆ. ಅಣೆಕಟ್ಟಿಗೆ ಹಲಗೆ ಹಾಗೂ ಪ್ಲಾಸ್ಟಿಕ್ ಟರ್ಪಾಲನ್ನು ಹಾಕುವ ಕೆಲಸವನ್ನು ಶೀಘ್ರ ಪೂರ್ಣಗೊಳಿಸಿ ನೀರು ಸಂಗ್ರಹ ಗೊಳಿಸುವ ಕಾರ್ಯ ಪ್ರಾರಂಭಗೊಳ್ಳಲಿದೆ. ಕೊನೆಯ ಹಂತದ ಕಾಮಗಾರಿಗೆ ನಾಲ್ಕಾರು ನುರಿತ ಕಾರ್ಮಿಕರ ಅಗತ್ಯವಿದ್ದು, ಉಳಿದ ಎಲ್ಲ ಕೆಲಸಗಳನ್ನು ಸಹಕಾರ ನೀಡುವ ಸಂಘ-ಸಂಸ್ಥೆಗಳು ಒಟ್ಟಾಗಿ ನಿರ್ವಹಿಸುತ್ತಿವೆ. ಕಿಂಡಿ ಅಣೆಕಟ್ಟಿನ 4 ಕಿ.ಮೀ. ತನಕದ ವ್ಯಾಪ್ತಿಯ ನೀರಿನ ಸಮಸ್ಯೆಗೆ ಹೆಚ್ಚಿನ ಪರಿಹಾರ ದೊರಕಲಿದೆ. ಕಿಂಡಿ ಅಣೆಕಟ್ಟಿನ ಕೆಲಸ ನಿರ್ವಹಿಸದ ಕಾರಣ ಕೆಲವು ವರ್ಷಗಳಿಂದ ಇಲ್ಲಿನ ಪ್ರದೇಶಗಳಲ್ಲಿ ಫೆಬ್ರವರಿ ಕೊನೆಗೆ ನೀರಿನ ಮಟ್ಟದಲ್ಲಿ ಇಳಿಕೆ ಉಂಟಾಗುತ್ತಿತ್ತು. ಮಾರ್ಚ್ ಕೊನೆಯ ವಾರದ ಬಳಿಕ ನೀರಿನ ಸಮಸ್ಯೆ ಕಂಡು ಬರುತ್ತಿತ್ತು.
ವಿವಿಧೆಡೆಗಳಲ್ಲಿ ಯೋಜನೆ
ಮುಂದಿನ ದಿನಗಳಲ್ಲಿ ಉಂಟಾ ಗಬಹುದಾದ ನೀರಿನ ಸಮಸ್ಯೆಗೆ ತತ್‌ಕ್ಷಣದಿಂದ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ತಾಲೂಕಿನಾದ್ಯಂತ ನೀರು ಸಂಗ್ರಹ ಮಾಡುವ ಯೋಜನೆಗಳನ್ನು ರೂಪಿಸಿದೆ.
-ಬಿ.ಕೆ.ಧನಂಜಯ ರಾವ್, ಅಧ್ಯಕ್ಷರು, ರೋಟರಿ ಕ್ಲಬ್, ಬೆಳ್ತಂಗಡಿ.