ನವೀನ್ ಮತ್ತು ನವ್ಯ ಇಬ್ಬರೂ ಶ್ರೀಮಂತ ಕುಟುಂಬದಿಂದ ಬಂದ ಬಿ.ಟೆಕ್ ಸ್ಟೂಡೆಂಟ್ಸ್. ಅವಳು ಸಾಫ್ಟ್ವೇರ್ ಆದ್ರೆ, ಇವನು ಹಾರ್ಡ್‌ವೇರ್. ಇಬ್ಬರಿಗೂ ಪರಸ್ಪರ ಮದುವೆ ನಿಶ್ಚಯವಾಗುತ್ತಿದ್ದಂತೆ, ಇಬ್ಬರೂ ಕೂಡ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಲುವಾಗಿ ಮನೆಯವರ ಕಣ್ತಪ್ಪಿಸಿ ಲಾಂಗ್ ಜರ್ನಿ (ಡೇಟಿಂಗ್)ಗೆ ಹೊರಡುತ್ತಾರೆ. ಈ ಜರ್ನಿಯಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರಾ? ಮುಂದೆ ಮನೆಯವರು ನಿಶ್ಚಯಿಸಿದಂತೆ ಮದುವೆಯಾಗುತ್ತಾರಾ?
ಇದು ಈ ವಾರ ತೆರೆಗೆ ಬಂದಿರುವ “ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ ಚಿತ್ರದ ಕಥಾಹಂದರ. ಇನ್ನು ಚಿತ್ರದ ಬಿಡುಗಡೆಗೂ ಮುನ್ನ ತೆಲುಗಿನ ಖ್ಯಾತ ನಿರ್ದೇಶಕ ವೇಮುಗಂಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ಎಂದು ಕೊಂಚ ಹೆಚ್ಚಾಗಿಯೇ ಬಿಲ್ಡಪ್, ಪಬ್ಲಿಸಿಟಿ ತೆಗೆದುಕೊಂಡಿದ್ದ ಚಿತ್ರತಂಡ, ಚಿತ್ರದ ಪೋಸ್ಟರ್‌ಗಳಲ್ಲಿ ತೆಲುಗಿನ ಪ್ರತಿಷ್ಠಿತ “ನಂದಿ ಪ್ರಶಸ್ತಿ ವಿಜೇತ’ ನಿರ್ದೇಶಕ ಎಂದು ದಪ್ಪ ಅಕ್ಷರಗಳಲ್ಲಿ ಅಚ್ಚು ಹಾಕಿಸಿತ್ತು.
ಹೀಗೆ ಅಚ್ಚಾಗಿರುವುದನ್ನು ನೋಡಿ ನೀವೇನಾದರೂ ಚಿತ್ರಕ್ಕೆ ಹೋದರೆ, ನೀವು ಬೆಪ್ಪಾಗಿದ್ದೀರಿ ಎಂದೇ ಅರ್ಥ! ಒಂದು ಚಿತ್ರವನ್ನು ಅಸಮರ್ಪಕವಾಗಿ ನಿರ್ವಹಿಸಿದರೆ, ನಿರ್ದೇಶಕರ ಹಿಡಿತಕ್ಕೆ ಸಿಗದಿದ್ದರೆ, ಅಥವಾ ಕಥೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ತೆರೆಮೇಲೆ ಹೇಗೆಲ್ಲಾ ಕಾರಣಬಹುದು ಅನ್ನೋದಕ್ಕೆ ಇದು ಇತ್ತೀಚಿನ ಉದಾಹರಣೆ. ಸಿನಿ ನೋಡುವವರಿಗಿಂತಲೂ, ಸಿನಿಮಾ ಮಾಡುವುವವರು ಇಂಥ ಚಿತ್ರಗಳನ್ನು ನೋಡಬೇಕು.
ಚಿತ್ರದಲ್ಲಿ ಏನು ಮಾಡಬೇಕು ಅನ್ನುವುದಕ್ಕಿಂತ, ಏನೆಲ್ಲಾ ಮಾಡಬಾರದು ಎಂದು ತಿಳಿದುಕೊಂಡರೆ, ಮುಂದೆ ಇಂತಹ ಚಿತ್ರಗಳು ಥಿಯೇಟರ್‌ಗೆ ಬರುವುದಾದರೂ ತಪ್ಪುತ್ತದೆ. ಒಟ್ಟಿನಲ್ಲಿ “ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ಯಲ್ಲಿ ಸ್ಟೂಡೆಂಟ್ಸ್‌ಗಿಂತ ಪ್ರಯಾಸ ಪಡುವವರು ಆಡಿಯನ್ಸ್‌ಗಳು ಅನ್ನೋದರಲ್ಲಿ ಎರಡು ಮಾತಿಲ್ಲ. “ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ ಅತ್ತ ಕನ್ನಡವೂ ಅಲ್ಲದ, ಇತ್ತ ತೆಲುಗೂ ಅಲ್ಲದ ಸಮ್ಮಿಶ್ರ ಚಿತ್ರ(ನ್ನ)ಣ.
ಆ್ಯಕ್ಷನ್, ರೊಮ್ಯಾನ್ಸ್, ಸೆಂಟಿಮೆಂಟ್ ಹೀಗೆ ಚಿತ್ರದ ಯಾವ ದೃಶ್ಯಗಳಿಗೂ ಕಿಂಚಿತ್ತೂ ವ್ಯತ್ಯಾಸವಿರದಿರುವ ನಾಯಕ ಗೌತಮ್ ರಾಜ್, ನಾಯಕಿ ಕಿರಣ್ ಚಿತ್ತಾನಿ ಅಭಿನಯವಂತೂ ನಿರ್ದೇಶಕರಿಗೆ ಪ್ರೀತಿ. ಒಂದು ಹಂತದಲ್ಲಿ ಪೇಲವ ಅಭಿನಯದ ನೀಡುವುದರಲ್ಲಿ ಇಬ್ಬರೂ ಪೈಪೋಟಿಗೆ ಬಿದ್ದಂತಿದೆ ಎಂದೆನಿಸಿದರೂ ಅಚ್ಚರಿಯಿಲ್ಲ. ಇನ್ನು ಚಿತ್ರದಲ್ಲಿ ಸಾಯಿ ಕುಮಾರ್, ಬುಲೆಟ್ ಪ್ರಕಾಶ್,
ವಿಜಯ್ ಚೆಂಡೂರ್ ಹೀಗೆ ಸಾಲು ಸಾಲು ಅರ್ಥವಿರದ ವ್ಯರ್ಥ ಪಾತ್ರಗಳನ್ನು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ಸಲುವಾಗಿಯೇ ಚಿತ್ರಕ್ಕೆ ತೂರಿಸಿದಂತಿದೆ. ಯಾವ ಪಾತ್ರಗಳು ಯಾಕಿವೆ ಎಂಬುದನ್ನು ತಿಳಿದುಕೊಳ್ಳಲು ಹೊರಟರೆ, ನಿಮ್ಮ ತಲೆ ನೋವಿಗೆ ನೀವೆ ಕಾರಣರಾಗಬಹುದು. ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ “ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ಗೆ ಪೂರಕವಾಗುವ ಬದಲು ಮಾರಕವಾಗಿದ್ದೆ ಹೆಚ್ಚು.
ಚಿತ್ರ: ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ
ನಿರ್ದೇಶನ: ವೇಮುಗಂಟಿ
ನಿರ್ಮಾಣ: ಶಿವಾನಿ ಆರ್ಟ್ಸ್ ಮತ್ತು ಪಿ.ಎಸ್ ಮೂವೀ ಮೇಕರ್ಸ್
ತಾರಾಗಣ: ಗೌತಮ್ ರಾಜ್, ಕಿರಣ್ ಚಿತ್ತಾನಿ, ಸಾಯಿಕುಮಾರ್, ವಿಜಯ್ ಚೆಂಡೂರ್, ರವಿ ಕಿರಣ್, ಬುಲೆಟ್ ಪ್ರಕಾಶ್, ವೀಣಾ ಸುಂದರ್ ಮತ್ತಿತರರು
* ಜಿ.ಎಸ್ ಕಾರ್ತಿಕ ಸುಧನ್