ಹೊಸದಿಲ್ಲಿ : ದಿಲ್ಲಿ ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯ ವೇಳೆ ಗಾಯತ್ರಿ ಮಂತ್ರವನ್ನು ಹಾಡುವಂತೆ ಶಿಕ್ಷಣ ಇಲಾಖೆ ತಾಕೀತು ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ದಿಲ್ಲಿ ಅಲ್ಪ ಸಂಖ್ಯಾಕರ ಮಂಡಳಿಯು ದಿಲ್ಲಿ ಶಿಕ್ಷಣ ಇಲಾಖೆಯ ಈ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದೆ.
ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯ ವೇಳೆ ಮಕ್ಕಳು ಗಾಯತ್ರಿ ಮಂತ್ರವನ್ನು ಹಾಡುವಂತೆ ಎನ್‌ಎಂಡಿಸಿ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿರುವುದಕ್ಕೆ ಕಾರಣ ತಿಳಿಸುವಂತೆ ನೊಟೀಸ್ ಜಾರಿ ಮಾಡಲಾಗಿದೆ.
ದಿಲ್ಲಿ ಅಲ್ಪಸಂಖ್ಯಾಕ ಆಯೋಗದ (ಡಿಎಂಸಿ) ಅಧ್ಯಕ್ಷ ಝಫ್ರುಲ್ಲ ಇಸ್ಲಾಮ್ ಖಾನ್ ಅವರು “ನಾರ್ತ್ ಡೆಲ್ಲಿ ಮುನಿಸಿಪಲ್ ಕಾರ್ಪೊರೇಶನ್ (ಎನ್‌ಎಂಡಿಸಿ) ತನ್ನ ಅಧೀನದ ಶಾಲೆಗಳಲ್ಲಿ ಪ್ರಾರ್ಥನೆಯ ವೇಳೆ ಮಕ್ಕಳು ಗಾಯತ್ರಿ ಮಂತ್ರವನ್ನು ಹಾಡುವಂತೆ ಕಡ್ಡಾಯಗೊಳಿಸಿರುವುದಕ್ಕೆ ಉತ್ತರ ಕೇಳಿ ನೊಟೀಸ್ ಜಾರಿ ಮಾಡಿದೆ ಎಂದು ಜಫ್ರುಲ್ಲಾ ಹೇಳಿದ್ದಾರೆ.
ಈ ನಡುವೆ ಎನ್‌ಎಂಡಿಸಿ ಅಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದು ‘ಶಾಲೆಗಳಲ್ಲಿ ಮಕ್ಕಳು ಗಾಯತ್ರಿ ಮಂತ್ರ ಹಾಡುವುದನ್ನು ಕಡ್ಡಾಯಗೊಳಿಸಲಾಗಿಲ್ಲ’ ಎಂದು ಹೇಳಿದೆ.
ಎನ್‌ಎಂಡಿಸಿ ದಿಲ್ಲಿಯಲ್ಲಿ ಸುಮಾರು 765 ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದೆ; ಇವುಗಳಲ್ಲಿ ಸುಮಾರು 2.20 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ.