Advertisement

ಶಾರದಾ ವಿದ್ಯಾನಿಕೇತನದಲ್ಲಿ ಬೆಳೆದು ಉಣ್ಣುವ ಪಾಠ

01:03 AM Jun 12, 2018 | Team Udayavani |

ತಲಪಾಡಿ: ಶಾಲಾ ಕಾಲೇಜು ಗಳು ಕೃಷಿಯತ್ತ ಮುಖ ಮಾಡುವುದು ಇತ್ತೀಚಿನ ದಿನಗಳ ಉತ್ತಮ ಬೆಳವಣಿಗೆ. ಈ ಮೂಲಕ ಮಕ್ಕಳಿಗೆ ಕೃಷಿ ಸಂಸ್ಕೃತಿಯ ಪರಿಚಯ ಕಾರ್ಯ ನಡೆಯುತ್ತಿದೆ. ಇಲ್ಲೊಂದು ಶಾಲೆ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ಸಾವಯವ ಕೃಷಿಯನ್ನು ಒಂದು ವಿಷಯವಾಗಿ ಅಳವಡಿಸಿಕೊಂಡು ಕಡ್ಡಾಯ ಕೃಷಿ ಶಿಕ್ಷಣಕ್ಕೆ ಮುಂದಾಗಿದೆ.

Advertisement

ತಲಪಾಡಿಯ ದೇವಿನಗರದಲ್ಲಿರುವ ಶಾರದಾ ವಿದ್ಯಾನಿಕೇತನ ಪಬ್ಲಿಕ್‌ ಶಾಲೆಯ 5ನೇ ತರಗತಿಯಿಂದ 10ನೇ ತರಗತಿವರೆಗಿನ ಸುಮಾರು 900 ವಿದ್ಯಾರ್ಥಿಗಳು ಕೃಷಿ ಪಾಠದ ಲಾಭ ಪಡೆಯಲಿದ್ದಾರೆ. ಪ್ರತೀ ತರಗತಿಗೂ ಪಠ್ಯಕ್ರಮವನ್ನು ಕೃಷಿ ವಿಜ್ಞಾನಿಗಳ ಸಹಕಾರದೊಂದಿಗೆ ಶಾಲಾ ಆಡಳಿತ ರಚಿಸಿದೆ. ಒಂದು ತರಗತಿಯಲ್ಲಿ ಥಿಯರಿ ಮತ್ತು ಎರಡು ತರಗತಿಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಪ್ರತ್ಯೇಕ ಪರೀಕ್ಷೆಯೂ ಇದ್ದು, ಪ್ರತೀ ವಿದ್ಯಾರ್ಥಿಗೆ ಥಿಯರಿ ಮತ್ತು ಪ್ರಾಯೋಗಿಕ ಕಾರ್ಯಕ್ಕೆ ಅಂಕ ನಿಗದಿಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಸುಷ್ಮಾ ದಿನಕರ್‌ ಹೇಳಿದ್ದಾರೆ.

ಕೃಷಿ ಪದವೀಧರರಿಂದ ಪಾಠ
ಕೃಷಿ ಪಾಠಕ್ಕೆಂದೇ ಇಲ್ಲಿ ಏಳು ಮಂದಿ ಕೃಷಿ ಪದವೀಧರರಿದ್ದಾರೆ. ಕೃಷಿ ವಿಜ್ಞಾನ ಸ್ನಾತಕೋತ್ತರ ಪದವೀಧರ ಒಬ್ಬರು ಉಪನ್ಯಾಸಕರು ಥಿಯರಿ ತರಗತಿ ನಡೆಸಿದರೆ, ಆರು ಮಂದಿ ಕೃಷಿ ಪದವೀಧರರು ಪ್ರಾಯೋಗಿಕ ಶಿಕ್ಷಣ ನೀಡಲಿದ್ದಾರೆ.

ಕೃಷಿ ಪಾಠದ ಪ್ರಥಮ ಹಂತ
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕೃಷಿ ಪಾಠಕ್ಕೆ ಚಾಲನೆ ನೀಡಿದ್ದು, ಪ್ರಥಮ ಹಂತದಲ್ಲಿ ವಿದ್ಯಾರ್ಥಿಗಳು ಮೂರೂವರೆ ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಿದ್ದಾರೆ. ಹೈನುಗಾರಿಕೆ, ಸಾವಯವ ಕೃಷಿ, ಹೂದೋಟ ನಿರ್ಮಾಣ, ಹಣ್ಣುಹಂಪಲು ಕೃಷಿ, ಭತ್ತದ ಕೃಷಿಯ ಕುರಿತು ಪಠ್ಯಗಳಿವೆ. ಪ್ರಾಯೋಗಿಕ ತರಬೇತಿ ನೀಡಲು ಕೃಷಿ ಭೂಮಿ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಭೂಮಿಯನ್ನು ಬಳಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ವಿವೇಕ್‌ ತಂತ್ರಿ ಹೇಳಿದ್ದಾರೆ.

ಮಕ್ಕಳಿಗೆ ತಾವು ತಿನ್ನುವ ಉಣ್ಣುವ ಪ್ರತಿ ವಸ್ತುವಿನ ಬಗ್ಗೆ ಜ್ಞಾನ ಅಗತ್ಯ. ಆಹಾರ ವಸ್ತುಗಳನ್ನು ಹೇಗೆ ಬೆಳೆಯಲಾಗುತ್ತದೆ ಮತ್ತು ರೈತರ ಬವಣೆ ಇಂತಹ ಶಿಕ್ಷಣದಿಂದ ಅರ್ಥವಾಗಲು ಸಾಧ್ಯ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಇನ್ನಷ್ಟು ವೈಜ್ಞಾನಿಕವಾಗಿ ಕೃಷಿ ಸಂಸ್ಕೃತಿಯ ಕುರಿತು ಆಸಕ್ತಿ ಮೂಡಿಸಲು ಯೋಜನೆ ರೂಪಿಸಲಾಗಿದೆ.
– ಪ್ರೊ| ಎಂ.ಬಿ. ಪುರಾಣಿಕ್‌, ಅಧ್ಯಕ್ಷರು, ಶಾರದಾ ಸಮೂಹ ಸಂಸ್ಥೆಗಳು ಮಂಗಳೂರು

Advertisement

ಪಟ್ಟಣದವರಾದ ಕಾರಣ ಯಾವ ತರಕಾರಿ ಹೇಗೆ ಬೆಳೆಯುತ್ತದೆ ಎಂಬ ಅರಿವು ನಮಗಿಲ್ಲ. ಕೃಷಿ ಪಾಠ ಪ್ರಾರಂಭಿಸಿದ್ದರಿಂದ ಇವೆಲ್ಲ ವಿಚಾರಗಳ ಕುರಿತು ತಿಳಿಯಲು ಸಹಕಾರಿಯಾಗಲಿದೆ. ಸಾವಯವ ಕೃಷಿಯನ್ನು ಆರಂಭಿಸಿದ್ದು, ನಾವು ಬೆಳೆದ ಫಸಲನ್ನು ಸವಿಯುವ ತವಕದಲ್ಲಿದ್ದೇವೆ.
– ದೃಶ್ಯಾ, ವಿದ್ಯಾರ್ಥಿನಿ,

— ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next