ಬಳ್ಳಾರಿ: ನಗರದ ವೀರಶೈವ ವಿದ್ಯಾವರ್ಧಕ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಉತ್ಸವದ ನಿಮಿತ್ತ ಸಂಘದ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳ ವಿವಿಧ ಜನಪದ ಕಲಾತಂಡ ಮೆರವಣಿಗೆ ನಗರದಲ್ಲಿ ಅದ್ಧೂರಿಯಾಗಿ ಶುಕ್ರವಾರ ನಡೆಯಿತು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆರಂಭವಾದ ಮೆರವಣಿಗೆಗೆ ವೀವಿ ಸಂಘದ ಅಧ್ಯಕ್ಷ ಉಡೇದ ಬಸವರಾಜ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಸಂಘದ ಅಧೀನದಲ್ಲಿನ ವಿವಿಧ 40 ವಿದ್ಯಾಸಂಸ್ಥೆಗಳ 2000 ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಸಮಾಳ, ನಂದಿಕೋಲು ಕುಣಿತ, ಡೊಳ್ಳು ಕುಣಿತ, ಪಟ್ಟಾ, ಪೂಜಾ ಕುಣಿತ, ಭೂತ, ಮಣಿಪುರಿ ನೃತ್ಯ, ಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳೊಂದಿಗೆ ಉತ್ಸವದ ಮೆರವಣಿಗೆ ನಡೆಯಿತು.
ಮೆರವಣಿಗೆಯು ಗಡಿಗಿ ಚನ್ನಪ್ಪ ವೃತ್ತ, ಬ್ರೂಸ್‌ಪೇಟೆ, ಎಚ್.ಆರ್.ಗವಿಯಪ್ಪ ವೃತ್ತದಿಂದ ಸಾಗಿ ವೀವಿ ಸಂಘದ ಹೀರದ ಸೂಗಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆವರಣದಲ್ಲಿ ಮುಕ್ತಯಗೊಂಡಿತು. ಫೆ.23 ಹಾಗೂ 24ರಂದು ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ.
ಸಂಘದ ಉಪಾಧ್ಯಕ್ಷ ಎಚ್.ಎಂ.ವೀರಭದ್ರಶರ್ಮಾ, ಕಾರ್ಯದರ್ಶಿ ಚೋರನೂರು ಟಿ.ಕೊಟ್ರಪ್ಪ, ಸಹ ಕಾರ್ಯದರ್ಶಿ ಕೆ.ವೀರೇಶಗೌಡ, ಕೋಶಾಧಿಕಾರಿ ಕೋಳೂರು ಮಲ್ಲಿಕಾರ್ಜುನಗೌಡ ಇನ್ನಿತರರಿದ್ದರು.