Advertisement

ಮಂಗಳೂರು-ಚೆನ್ನೈ ವಿದ್ಯುತ್‌ ರೈಲು ಸಂಚಾರ ಆರಂಭ

10:28 AM Apr 01, 2017 | Team Udayavani |

ಮಂಗಳೂರು: ಶೋರ್ನೂರು- ಮಂಗಳೂರು ರೈಲು ಮಾರ್ಗದಲ್ಲಿ  2016- 17ನೇ ಆರ್ಥಿಕ ವರ್ಷದ ಕೊನೆಯ ದಿನವಾದ ಮಾ. 31ರಂದು ಎಲೆಕ್ಟಿಕ್‌ ಎಂಜಿನ್‌ ಅಳವಡಿಸಿದ ಚೆನ್ನೈ- ಮಂಗಳೂರು- ಚೆನ್ನೈ ಸೂಪರ್‌ಫಾಸ್ಟ್‌  ರೈಲು ಓಡುವುದರೊಂದಿಗೆ ಈ ಮಾರ್ಗವು ವಿದ್ಯುತ್‌ ರೈಲು ಸಂಚಾರಕ್ಕೆ ಮುಕ್ತಗೊಂಡಿತು. 

Advertisement

ಎಲೆಕ್ಟ್ರಿಕ್‌ ಎಂಜಿನ್‌ ಅಳವಡಿಸಿ ಬೆಳಗ್ಗೆ  9.05ಕ್ಕೆ ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ತಲುಪಿದ್ದ  ಈ ರೈಲು ಸಂಜೆ 16.20ಕ್ಕೆ  ಚೆನ್ನೈಗೆ ಮರು ಪ್ರಯಾಣ ಬೆಳೆಸಿದೆ. ಮುಂದಿನ ದಿನಗಳಲ್ಲಿ  ಈ ರೈಲು ಎಲೆಕ್ಟ್ರಿಕ್‌ ಎಂಜಿನ್‌ ಮೂಲಕವೇ ಓಡಾಟ ನಡೆಸಲಿದೆ. ಇದು ಈ ಮಾರ್ಗದಲ್ಲಿ  ಸಂಚರಿಸಿದ ಮೊದಲ ವಿದ್ಯುತ್‌ ರೈಲು ಎಂಬ ಕೀರ್ತಿಗೆ ಪಾತ್ರವಾಗಿದೆ. 

ಚೆರ್ವತ್ತೂರು- ಮಂಗಳೂರು ನಡುವಣ 91 ಕಿ. ಮೀ. ಉದ್ದದ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಇತ್ತೀಚೆಗೆ ಪೂರ್ಣಗೊಂಡಿದ್ದು, ಮಾ. 11ರಂದು ಬೆಂಗಳೂರು ದಕ್ಷಿಣ ವೃತ್ತದ ರೈಲ್ವೇ ಸುರಕ್ಷತಾ ಆಯುಕ್ತ (ಸಿ.ಆರ್‌.ಎಸ್‌.) ಕೆ.ಎ. ಮನೋಹರನ್‌ ಅವರು ಪರೀಕ್ಷಾರ್ಥ ರೈಲು ಓಡಿಸಿ ಕಾಮಗಾರಿಯ ಗುಣಮಟ್ಟವನ್ನು  ಪರಿಶೀಲಿಸಿ ಎಲ್ಲವೂ ಸರಿಯಾಗಿದೆ ಎಂದು ಪ್ರಮಾಣೀಕರಿಸಿದ್ದರು. 

ಶೋರ್ನೂರು- ಮಂಗಳೂರು ನಡುವಣ 315 ಕಿ.ಮೀ. ಉದ್ದದ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ 4 ವರ್ಷಗಳ ಹಿಂದೆ ಪ್ರಾರಂಭಗೊಂಡಿತ್ತು. ಮೊದಲ ಹಂತದಲ್ಲಿ  ಶೋರ್ನೂರು- ಕಲ್ಲಾಯಿ ನಡುವಣ 84 ಕಿ.ಮೀ. ಕಾಮಗಾರಿ 2015ರಲ್ಲಿ ಪೂರ್ತಿಗೊಂಡಿತ್ತು. ಎರಡನೇ ಹಂತದಲ್ಲಿ  ಕಲ್ಲಾಯಿ- ಚೆರ್ವತ್ತೂರು ನಡುವಣ 140 ಕಿ.ಮೀ. ಕಾಮಗಾರಿ 2016ರಲ್ಲಿ  ಹಾಗೂ ಮೂರನೇ ಹಂತದಲ್ಲಿ  ಚೆರ್ವತ್ತೂರು- ಮಂಗಳೂರು ನಡುವಣ 91 ಕಿ.ಮೀ. ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ 2017ರಲ್ಲಿ  ಪೂರ್ತಿಗೊಂಡಿದೆ. 

ಅಕ್ಟೋಬರ್‌ ಬಳಿಕ ವೇಗವರ್ಧನೆ
ಎಲೆಕ್ಟ್ರಿಕ್‌ ಎಂಜಿನ್‌ ಅಳವಡಿಸಿದ್ದರಿಂದ ತತ್‌ಕ್ಷಣಕ್ಕೆ ಈ ರೈಲಿನ ವೇಗವರ್ಧನೆ ಆಗುವುದಿಲ್ಲ. ಮಳೆಗಾಲದ ಬಳಿಕ ಮುಂದಿನ ಅಕ್ಟೋಬರ್‌ನಲ್ಲಿ ಹೊಸ ವೇಳಾಪಟ್ಟಿ ಬಂದಾಗ ವೇಗದಲ್ಲಿ ಹೆಚ್ಚಳವಾಗಿ ಪ್ರಯಾಣಿಕರಿಗೆ ಒಂದಷ್ಟು ಸಮಯದ ಉಳಿತಾಯ ಆಗುವ ಸಾಧ್ಯತೆ ಇದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಸದ್ಯದ ಮಟ್ಟಿಗೆ ಶೋರ್ನೂರಿನಲ್ಲಿ ಎಂಜಿನ್‌ ಬದಲಾಯಿಸುವ ಸಮಯ ಮಾತ್ರ ಉಳಿತಾಯವಾಗಲಿದೆ. ಇದುವರೆಗೆ ಈ ರೈಲು ಚೆನ್ನೈಯಿಂದ ಶೋರ್ನೂರು ತನಕ ಎಲೆಕ್ಟ್ರಿಕಲ್‌ ಎಂಜಿನ್‌ನಲ್ಲಿ ಹಾಗೂ ಆ ಬಳಿಕ ಡೀಸೆಲ್‌ ಎಂಜಿನ್‌ನಲ್ಲಿ ಓಡಾಡುತ್ತಿತ್ತು. ಈ ಎಂಜಿನ್‌ ಬದಲಾವಣೆಗೆ 10- 15 ನಿಮಿಷ ತಗುಲುತ್ತಿತ್ತು. ಇನ್ನು ಮುಂದೆ ಮಾರ್ಗ ಮಧ್ಯೆ ಎಂಜಿನ್‌ ಬದಲಾಯಿಸುವ ಆವಶ್ಯಕತೆ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next