Advertisement
ಈಶ್ವರನಗರವೆನ್ನುವುದು ಮಣಿಪಾಲಕ್ಕಿಂತಲೂ ದೊಡ್ಡ ಜಂಕ್ಷನ್ ಆಗಿ ಪರಿವರ್ತಿತವಾಗಿದೆ. ಸಾಕಷ್ಟು ಅಪಾರ್ಟ್‌ಮೆಂಟ್‌ಗಳು, ಶಾಲಾ ಕಾಲೇಜುಗಳು, ಕಾಲೋನಿಗಳು ಈಶ್ವರನಗರದ ಸುತ್ತಮುತ್ತ ಇದೆ. ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಎಂಐಟಿ ಕೂಡ ಇಲ್ಲಿಗೆ ಸಮೀಪದಲ್ಲೇ ಇದೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳು ಮತ್ತು ಬೇರೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಇದೇ ಬಸ್ ನಿಲ್ದಾಣದ ಮೂಲಕ ತಮ್ಮ ವಿದ್ಯಾಸಂಸ್ಥೆಗಳ ಕಡೆಗೆ ತೆರಳುತ್ತಾರೆ. ಈಗ ಇರುವ ದ್ವಿಪಥ ರಸ್ತೆಯಲ್ಲಿಯೇ ವಾಹನ ಸಂಚಾರದ ಒತ್ತಡದಿಂದಾಗಿ ವಿದ್ಯಾರ್ಥಿಗಳು ರಸ್ತೆ ದಾಟಲು ಪರದಾಡುತ್ತಾರೆ. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲೇ ವಾಹನ ಒತ್ತಡ ಅಧಿಕವಿರುವುದರಿಂದ ರಸ್ತೆ ದಾಟುವುದು ಕೂಡ ಕಷ್ಟಕರವಾಗಿದೆ.
ಈಗಾಗಲೇ ರಾ.ಹೆ. 169ಎಯ ಅಗಲೀಕರಣ ಕಾಮಗಾರಿ ಆರಂಭಗೊಂಡಿದೆ. ಇಲ್ಲಿಗೆ ಅಂಡರ್ ಪಾಸ್ ನೀಡದೇ ಹೋದಲ್ಲಿ ಭವಿಷ್ಯದಲ್ಲಿ ಇದು ಹಲವು ಅಪಘಾತಗಳಿಗೆ ಆಹ್ವಾನ ನೀಡುತ್ತದೆ. ಚತುಷ್ಪಥವಾದ ಬಳಿಕ ಇಲ್ಲಿ ವಾಹನಗಳ ವೇಗ ಕೂಡ ಹೆಚ್ಚಿರುವುದರಿಂದ ಸಾರ್ವಜನಿಕರು ರಸ್ತೆ ದಾಟುವ ಭರದಲ್ಲಿ ಅಪಘಾತಕ್ಕಿಡಾಗುವ ಸಾಧ್ಯತೆ ಇದೆ. ಇನ್ನು ಕೆಲವು ವಿದ್ಯಾರ್ಥಿಗಳು ಅತೀವೇಗ ಅಜಾಗರೂಕತೆಯಿಂದ ಚಾಲನೆ ಮಾಡುವುದರಿಂದ ರಸ್ತೆ ದಾಟುವವರು ಜೀವ ಕೈಯಲ್ಲಿ ಹಿಡಿದು ದಾಟುತ್ತಾರೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಸಂದರ್ಭ ಕಲ್ಯಾಣಪುರ, ಅಂಬಲಪಾಡಿ ಜಂಕ್ಷನ್ ಅನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡದೇ ಇರುವುದರಿಂದ ಈ ಪ್ರದೇಶಗಳು ಅಪಘಾತ ವಲಯವಾಗಿ ಏರ್ಪಟ್ಟಿದೆ. ಈಶ್ವರನಗರದಲ್ಲಿ ಅಂಡರ್‌ಪಾಸ್ ನೀಡದೇ ಹೋದಲ್ಲಿ ಇದು ಕೂಡ ಅಪಘಾತ ವಲಯವಾಗಿ ಮಾರ್ಪಾಡಾಗುತ್ತದೆ. ಅಂಡರ್‌ಪಾಸ್‌ಗೆ ಕೇಂದ್ರದಿಂದ ಅನುಮತಿ ಬೇಕು
ಅಂಡರ್‌ಪಾಸ್ ಅಗತ್ಯದ ಕುರಿತು ಕಾಮಗಾರಿ ಸಂಬಂಧಪಟ್ಟ ಅಧಿಕಾರಿಯನ್ನು ಉದಯವಾಣಿ ಮಾತನಾಡಿಸಿದಾಗ, ಈಗ ಆಗಿರುವ ಟೆಂಡರ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಮಾತ್ರ ಆದೇಶ ಇದೆ. ಯಾವುದೇ ಪಾದಚಾರಿ ಅಂಡರ್ ಪಾಸ್ ನಿರ್ಮಾಣಕ್ಕೆ ಅವಕಾಶ ಇಲ್ಲ. ಜನರು ಅಂಡರ್‌ಪಾಸ್ ಬೇಕೆಂದು ಸರಕಾರಕ್ಕೆ ಮನವಿ ಮಾಡಿದಲ್ಲಿ ಕೇಂದ್ರ ಸರಕಾರಕ್ಕೆ ಹೋಗಿ, ಅಲ್ಲಿಂದ ಅನುಮತಿ ನೀಡಬೇಕಾಗುತ್ತದೆ ಎಂದರು.
Related Articles
ಇಲ್ಲಿನ ಸುತ್ತಮುತ್ತ ಶಾಲೆಗಳಿಗೆ ಮತ್ತು ಬೇರೆ ಶಾಲಾ ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಸಂಚಾರ ಮಾಡುತ್ತಾರೆ. ಈಗಲೇ ಇಲ್ಲಿ ರಸ್ತೆ ಸಂಚಾರ ಕಷ್ಟಕರವಾಗಿದೆ. ರಸ್ತೆ ವಿಸ್ತರಣೆಯ ಬಳಿಕ ವಾಹನಗಳ ವೇಗ ಅಧಿಕವಾಗಿರುವುದರಿಂದ ರಸ್ತೆ ದಾಟುವುದು ಕ್ಲಿಷ್ಟಕರವಾಗಲಿದೆ. ಆದ್ದರಿಂದ ಇಲ್ಲಿ ನಮಗೆ ಅಂಡರ್‌ಪಾಸ್ ಅಗತ್ಯವಿದೆ. ನಮಗೆ ದೊಡ್ಡ ಅಂಡರ್ ಪಾಸ್ ಬೇಕಾಗಿಲ್ಲ. ವಿದ್ಯಾರ್ಥಿಗಳು ಸರಾಗವಾಗಿ ಅತ್ತಿನಿಂದಿತ್ತ ಸಂಚರಿಸಲು ಅನುಕೂಲಕರವಾದರೆ ಸಾಕು.
-ರಮೇಶ್ ನಾಯಕ್, ಸ್ಥಳೀಯರು
Advertisement
ಪಾದಚಾರಿ ಮೇಲ್ಸೇತುವೆ ನೀಡಲು ಸಾಧ್ಯಈಶ್ವರನಗರದಲ್ಲಿ ಪಾದಚಾರಿ ಅಂಡರ್‌ಪಾಸ್ ನಿರ್ಮಾಣ ಎನ್ನುವುದು ಪ್ರಸಕ್ತ ಸನ್ನಿವೇಶದಲ್ಲಿ ಕಷ್ಟಕರ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಗೊಂಡಿದೆ. ಪಾದಚಾರಿ ಮೇಲ್ಸೇತುವೆ ನೀಡಲು ಸಾಧ್ಯತೆ ಇದೆ. ಈ ಬಗ್ಗೆ ಪರಾಮರ್ಶಿಸುತ್ತೇವೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್,
ಜಿಲ್ಲಾಧಿಕಾರಿ ಸ್ಥಳೀಯರಲ್ಲಿ ಮಾತುಕತೆ
ಈಗ ಇರುವ ಯೋಜನೆಯಲ್ಲಿ ಅಂಡರ್‌ಪಾಸ್‌ಗೆ ಅವಕಾಶ ಇಲ್ಲ. ಅಂಡರ್‌ಪಾಸ್ ಆವಶ್ಯಕತೆ ಕುರಿತು ನಾನು ಸ್ಥಳೀಯರಲ್ಲಿ ಮಾತನಾಡುತ್ತೇನೆ.
– ಶೋಭಾ
ಕರಂದ್ಲಾಜೆ, ಸಂಸದರು
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಹರೀಶ್ ಕಿರಣ್ ತುಂಗ ಸಾಸ್ತಾನ