Advertisement
ಶಾಲೆಯಲ್ಲಿ ಗದ್ದೆ..!1ನೇ ತರಗತಿಯಿಂದ 7ನೇ ತರಗತಿ ತನಕ ವಿದ್ಯಾಭ್ಯಾಸ ನೀಡುತ್ತಿರುವ ಬಾಳಿಲ ಶಾಲೆಯಲ್ಲಿ, ತರಕಾರಿ ತೋಟದಂತಹ ಹೊಸ ಹೊಸ ಪ್ರಯೋಗ ನಡೆಯುತ್ತದೆ. ಈ ಬಾರಿ ಆ ಸಾಲಿಗೆ ಗದ್ದೆ ಸೇರ್ಪಡೆಗೊಂಡಿದೆ. ಶಾಲಾ ಮೈದಾನದ ಒಂದು ಭಾಗದಲ್ಲಿ 3 ಸೆಂಟ್ಸ್ ಸ್ಥಳವನ್ನು ಹದ ಮಾಡಿ, ಗದ್ದೆಯ ರೂಪ ಕೊಡಲಾಯಿತು. ಅನಂತರ ಬೇಕಾದ ಪೋಷಕಾಂಶ, ನೀರು ಬಳಸಿ, ನೇಜಿ ನೆಡಲು ತಯಾರಿ ನಡೆಸಲಾಯಿತು. ಶಾಲಾ ಮಕ್ಕಳು, ಹೆತ್ತವರು, ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಕರು ಜತೆಗೂಡಿ ನೇಜಿ ನೆಟ್ಟರು. ಗುಲಾಬಿ ಅವರ ಪಾಡ್ದನದ ಸಾಲು ಉತ್ಸಾಹಕ್ಕೆ ಇಂಬು ನೀಡಿತ್ತು.
ಎಲ್ಲರೂ ಭಾಗಿ
ವೈಜ್ಞಾನಿಕ ಪದ್ದತಿ ಪ್ರಕಾರ ನಾಟಿ ಮಾಡಿ, ಗೊಬ್ಬರ, ನೀರು ಹಾಕಲಾಯಿತು. ಮುಂದಿನ 90 ದಿನಗಳ ಕಾಲ ಮಕ್ಕಳು, ಎಸ್‌ಡಿಎಂಸಿ, ಶಿಕ್ಷಕರು, ಪೋಷಕರು ನೇಜಿ ಬೆಳೆದು ಭತ್ತ ನೀಡುವ ತನಕದ ಬೆಳವಣಿಗೆ ಬಗ್ಗೆ ನಿಗಾ ಇಡಲಿದ್ದಾರೆ. ಔಷಧ ಸಿಂಪಡಣೆ, ಕಟಾವು ಇತ್ಯಾದಿ ಹಂತಗಳು ಕ್ರಮ ಬದ್ದವಾಗಿ ನಡೆಯಲಿದೆ. ನೆಲದ ಪ್ರೀತಿ
ಶಾಲೆಯಲ್ಲಿಯೇ ಗದ್ದೆ ನಿರ್ಮಿಸುವ ಮುಖ್ಯ ಉದ್ದೇಶ ಇಲ್ಲಿನ ಮಕ್ಕಳಲ್ಲಿ ನೆಲದ ಬಗ್ಗೆ ಪ್ರೀತಿ ತುಂಬುವುದಾಗಿದೆ. ಜತೆಗೆ ಅನ್ನದ ಹಿಂದಿನ ಶ್ರಮದ ಬಗ್ಗೆ ತಿಳಿಸುವುದಾಗಿದೆ. ಅದಕ್ಕಾಗಿ ಬೇರೆ ಗದ್ದೆಗಳಲ್ಲಿ ನಾಟಿ ಮಾಡುವ ಬದಲು, ಸ್ವತಃ ಶಾಲೆಯಲ್ಲಿಯೇ ಗದ್ದೆ ರಚಿಸಿ, 90 ದಿವಸಗಳ ಕಾಲ ಅದರ ಬೆಳವಣಿಗೆಯ ವಿವಿಧ ಹಂತಗಳನ್ನು ಮಕ್ಕಳು ಗಮನಿಸಬೇಕು ಎಂಬ ದೂರದೃಷ್ಟಿ ಇಲ್ಲಿನದ್ದು. ಇದೊಂದು ಉತ್ತಮ ಪ್ರಯತ್ನ ಅನ್ನುತ್ತಾರೆ ಅಕ್ಷರ ದಾಸೋಹದ ಅಧಿಕಾರಿ ಚಂದ್ರಶೇಖರ ಪೇರಾಲು.
Related Articles
ಭತ್ತದ ಬೇಸಾಯ ಇಳಿಮುಖ ಆಗುತ್ತಿರುವ ಹೊತ್ತಲ್ಲಿ, ಅದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ. ಪ್ರತಿ ಹಂತದ ಬೆಳವಣಿಗೆಯ ಬಗ್ಗೆ ಮಕ್ಕಳು ಅರಿತುಕೊಳ್ಳುವುದು, ನೆಲದ ಬಗ್ಗೆ ಆಸಕ್ತಿ ಮೂಡಿಸುವುದು ಇದರ ಉದ್ದೇಶವಾಗಿದೆ.
– ಜಾಹ್ನವಿ ಕಾಂಚೋಡು, ಅಧ್ಯಕ್ಷರು, ಎಸ್.ಡಿ.ಎಂ.ಸಿ., ಬಾಳಿಲ
Advertisement