ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮವನ್ನು ಇಲ್ಲಿನ ತೋಟಗಾರಿಕೆ ವಿವಿ ದತ್ತು ಪಡೆದಿದ್ದು, ಮಾದರಿ ಗ್ರಾಮವನ್ನಾಗಿ ರೂಪಿಸಲು ಹಲವು ಯೋಜನೆ ಹಾಕಿಕೊಂಡಿದೆ. ದತ್ತು ಪಡೆದ ಬಳಿಕ ಮೊದಲ ಕಾರ್ಯಕ್ರಮವಾಗಿ ಹಲಸಿನ ಆಂದೋಲನ ನಡೆಸಲಾಯಿತು. ರಾಜ್ಯಪಾಲರ ಹಾಗೂ ಕುಲಪತಿಗಳ ಆದೇಶದಂತೆ ರಾಜ್ಯದ ಪ್ರತಿ ವಿಶ್ವವಿದ್ಯಾಲಯಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ಒಂದು ಗ್ರಾಮದಲ್ಲಿ ವಿಶ್ವವಿದ್ಯಾಲಯದ ಮುಖ್ಯ ದ್ಯೇಯದ ಜ್ಞಾನ ಮತ್ತು ಪರಿಣತಿಯೊಂದಿಗೆ ಗ್ರಾಮವನ್ನು ಅಭಿವೃದ್ಧಿಪಡಿಸಿ ಮಾದರಿ ಗ್ರಾಮವನ್ನಾಗಿ ಮಾರ್ಪಾಡಿಸಲು ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೆರಕಲಮಟ್ಟಿ ಗ್ರಾಮ ದತ್ತು ಪಡೆಯಲಾಗಿದೆ.
ಗ್ರಾಮದಲ್ಲಿ ತೋಟಗಾರಿಕೆಯ ಅಭಿವೃದ್ಧಿಪರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರಾಥಮಿಕ ಹಂತದ ಸಮೀಕ್ಷೆಯನ್ನು ಬುಧವಾರ ಕೈಗೊಳ್ಳಲಾಯಿತು. ವಿವಿಯ ಮೂರನೇ ವರ್ಷದ ಸ್ನಾತಕ ವಿದ್ಯಾರ್ಥಿಗಳು ತಮ್ಮ ಪ್ರಾಯೋಗಿಕ ಕಲಿಕಾ ವಿಷಯದಲ್ಲಿ ತೊಡಗಿಸಿಕೊಳ್ಳಲು ಕೆರಕಲಮಟ್ಟಿ ಗ್ರಾಮದ ಪ್ರಾಥಮಿಕ ಹಂತದ ಸಮೀಕ್ಷೆಯಲ್ಲಿ ಕೆಲವು ರೈತರ ಮನೆಗಳಿಗೆ ಹಾಗೂ ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಗ್ರಾಮದಲ್ಲಿ ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಹಲಸಿನ ಆಂದೋಲನದಡಿ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಹಲಸಿನ ಮಹತ್ವ ಹಾಗೂ ಹಲಸಿನ ಬೆಳೆ ಉತ್ಪಾದನಾ ತಾಂತ್ರಿಕತೆ ತಿಳಿಸಿಕೊಟ್ಟರು. ಆಯ್ದ 20 ಕೃಷಿಕರಿಗೆ ಉತ್ಕೃಷ್ಠ ಹಲಸಿನ ತಳಿಯ ಸಸಿಗಳನ್ನು ವಿಶ್ವವಿದ್ಯಾಲಯದ ಪ್ರಾತ್ಯಕ್ಷಿಕೆಯ ಕಾರ್ಯಕ್ರಮದಡಿ ವಿತರಿಸಿದರು. ತೋಟಗಾರಿಕೆ ವಿವಿಯ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಹಾಗೂ ವಿಸ್ತರಣಾ ಮುಂದಾಳು ಡಾ| ಶಶಿಕುಮಾರ ಎಸ್. ಮಾತನಾಡಿ, ಹಲಸಿನ ಬೆಳೆಯು ನವ ಕಲ್ಪವೃಕ್ಷವಾಗಿದೆ. ಉಷ್ಣ ಹಾಗೂ ಸಮಶೀತೋಷ್ಣ ವಲಯದಲ್ಲಿ ಉತ್ತಮವಾಗಿ ಬೆಳೆಯಬಹುದೆಂದು ತಿಳಿಸಿದರು.
ಸಸಿ ನಾಟಿಯ 4 ವರ್ಷಗಳ ನಂತರದಲ್ಲಿ 25ರಿಂದ 30 ಕೆ.ಜಿ. ಗಾತ್ರದ ಹಣ್ಣುಗಳನ್ನು 25 ರಿಂದ 100ಸಂಖ್ಯೆ ಹಣ್ಣುಗಳನ್ನು ಪ್ರತಿ ಗಿಡದಿಂದ ಪಡೆಯಬಹುದಾಗಿದೆ. ಉತ್ತಮ ನಿರ್ವಹಣೆಯಿಂದ 6 ವರ್ಷಗಳ ನಂತರದಲ್ಲಿ 50ರಿಂದ 100ಕೆಜಿ. ಗಾತ್ರದ ಹಣ್ಣುಗಳನ್ನು, 100 ರಿಂದ 200 ಸಂಖ್ಯೆ ಹಣ್ಣು ಪ್ರತಿ ಗಿಡದಿಂದ ಪಡೆಯಬಹುದಾಗಿದೆ ಎಂದರು. ಸಹಾಯಕ ಪ್ರಾಧ್ಯಾಪಕ ಡಾ| ಶ್ರೀಪಾದ ವಿಶ್ವೇಶ್ವರ, ಡಾ| ವಾಸಿಂ ಎಮ್.ಎ. ಹಾಗೂ ಡಾ|ಲೀಲಾವತಿ ಅವರು 85 ಸ್ನಾತಕ ವಿದ್ಯಾರ್ಥಿಗಳ ಸಹಾಯದೊಂದಿಗೆ ಗ್ರಾಮದ ಪ್ರಾಥಮಿಕ ಸಮೀಕ್ಷೆ ಕೈಗೊಳ್ಳಲು ಸಹಕರಿಸಿದರು.
ಗ್ರಾಮದ ರೈತರು ಸಮೀಕ್ಷೆಯಲ್ಲಿ ಹಾಗೂ ಆಂದೋಲನದಲ್ಲಿ ಭಾಗವಹಿಸಿ ಹಲಸಿನ ಹಣ್ಣಿನ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಆಗುವ ಲಾಭಗಳಾದ ಮನುಷ್ಯನ ದೇಹದ ರೋಗದ ನಿರೋಧಕತೆ ಹೆಚ್ಚಿಸುವ, ಜೀರ್ಣ ಕ್ರಿಯೆ ಹೆಚ್ಚಿಸುವ, ಕ್ಯಾನ್ಸರ್ ರೋಗ ದೂರಮಾಡುವ, ಕಣ್ಣಿನ ಹಾಗೂ ಚರ್ಮದ ಆರೋಗ್ಯ ವೃದ್ಧಿಸುವ, ಅಧಿಕ ರಕ್ತದೊತ್ತಡ ನಿರ್ವಹಣೆ, ಅಸ್ಥಮಾ ಹಾಗೂ ಥೈರ್ಯಾಡ್ ಸಮಸ್ಯೆ ತಡೆಯುವ, ಮನುಷ್ಯನ ಮೊಳೆಗಳನ್ನು ಗಟ್ಟಿಗೊಳಿಸುವ ಹಾಗೂ ರಕ್ತಹೀನತೆ ಹೋಗಲಾಡಿಸುವ ಅದ್ಭುತ ಶಕ್ತಿಯನ್ನು ಹಲಸಿನ ಹಣ್ಣು ದೊರಕಿಸಿಕೊಡುತ್ತದೆ ಎಂದು ವಿವರಿಸಲಾಯಿತು. ಹಲಸಿನ ಆಂದೋಲನದಡಿ 2018-19 ರ ಸಾಲಿನಲ್ಲಿ ಇನ್ನು ಕೆಲವು ಆಯ್ದ ಗ್ರಾಮಗಳಲ್ಲಿ ಕೈಗೊಳ್ಳುವುದಾಗಿ ವಿವಿಯ ಅಧಿಕಾರಿಗಳು ತಿಳಿಸಿದರು.