Advertisement

ವಿದ್ಯಾರ್ಥಿಗಳ ಕನಸು ನನಸಾಗಿಸಿ: ಪ್ರೊ|ಗಣೇಶ

11:59 AM Aug 13, 2017 | |

ಧಾರವಾಡ: ವಿದ್ಯಾರ್ಥಿಗಳು ಕಾಣುವ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹಿರಿಯ ಭಾಷಾತಜ್ಞ ಪದ್ಮಶ್ರೀ ಪ್ರೊ| ಗಣೇಶ ಎನ್‌. ದೇವಿ ಹೇಳಿದರು. ಜೆಎಸ್‌ಎಸ್‌ ಸನ್ನಿ ಧಿ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾ ಪಿ. ಹಂಚಿನಮನಿ ಸ್ವತಂತ್ರ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಂಘ, ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಈಗಿನ ಶಿಕ್ಷಣ ಪದ್ಧತಿ ಹಾಗೂ ಈ ಹಿಂದಿನ ಶಿಕ್ಷಣ ಪದ್ಧತಿಗೆ ಅಜಗಜಾಂತರ ವ್ಯತ್ಯಾಸವಿದೆ. ಎಲ್ಲ ವಿಷಯವನ್ನು ಎಲ್ಲರೂ ತಿಳಿದುಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು. ಇಂದು ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು ಮಾನಸಿಕ ಕ್ರೂರತೆ ನೀಡುವ ತಾಣಗಳಾಗಿವೆ.

ಅವುಗಳನ್ನು ಪರಿವರ್ತಿಸುವ ಜವಾಬ್ದಾರಿ ನಮ್ಮ ಯುವ ಜನಾಂಗದ ಮೇಲಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸಿ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಶಿಸ್ತು ಹಾಗೂ ಕ್ರಮಬದ್ಧವಾದ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಪರಿಸರ ಹಾಗೂ ನಿಸರ್ಗದ ಅಭಿವೃದ್ಧಿಗೆ ಜ್ಞಾನ ಬಳಕೆಯಾಗಬೇಕೇ ಹೊರತು ಅದರ ನಾಶಕ್ಕಲ್ಲ. ಯುದ್ಧ ನಡೆದರೆ ಅದರ ಪರಿಣಾಮ ಬಹಳಷ್ಟು ಗಂಭೀರವಾಗಲಿದೆ. ಇದೀಗ ಭಾರತ ಸೇರಿದಂತೆ ಅನೇಕ ದೇಶದಲ್ಲಿ ಅಸುರಕ್ಷಿತತೆ ತಾಂಡವಾಡುತ್ತಿದ್ದು, ಅಪರಾಧ ಹಾಗೂ ಅಪರಾಧ ಮನೋಭಾವನೆ ಗಣನೀಯವಾಗಿ ಹೆಚ್ಚುತ್ತಿದೆ.

ಇದನ್ನು ಬದಲಿಸಲು ನಾವೆಲ್ಲ ಮುಂದಾಗಬೇಕು. ಜಗತ್ತನ್ನು ಸಂತಸದತ್ತ ಕೊಂಡೊಯ್ಯಲು ಎಲ್ಲರೂ ಶ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಎಸ್‌.ಎ. ಜೋಶಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದ್ದು, ಮಕ್ಕಳ ಭವಿಷ್ಯ ರೂಪಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ.

Advertisement

ಮಕ್ಕಳಿಗೆ ಹಣ ಹಾಗೂ ಮೊಬೈಲ್‌ ನೀಡದೆ ಅವರ ಕಠಿಣ ಪರಿಶ್ರಮಕ್ಕೆ ಪ್ರೋತ್ಸಾಹಿಸಬೇಕು. ಜೀವನ ಮೌಲ್ಯಗಳು ಇಂದು ಕ್ಷೀಣಿಸುತ್ತಿದ್ದು, ಅವುಗಳನ್ನು ಕಲಿಸಬೇಕು ಎಂದು ಹೇಳಿದರು. ಕಾಲೇಜು ವಿದ್ಯಾರ್ಥಿ ಅಮೋಘ ಮಲಕಣ್ಣವರ ರಚಿಸಿದ “ಮಿಡಿದ ಮನ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. 

ಶಾಂತೇಶ ಎಜುಕೇಷನ್‌ ಸೊಸೈಟಿ ಕಾರ್ಯಾಧ್ಯಕ್ಷ ಪ್ರೊ| ಪಿ.ಆರ್‌. ಹಂಚಿನಮನಿ, ಕಾರ್ಯದರ್ಶಿ ಮನೋಜ ಹಂಚಿನಮನಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂದೇಶ ಗಡ್ಡಿ, ಪ್ರತಿಭಾ ಇದ್ದರು. ಶಾಲಿನಿ ಕನಕಾಪುರ ಸ್ವಾಗತಿಸಿದರು. ತರುಣ ಹಾಗೂ ಪೂರ್ವಿ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  

Advertisement

Udayavani is now on Telegram. Click here to join our channel and stay updated with the latest news.

Next