ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ದೇಶದ ಇಸ್ರೋ ಸಂಸ್ಥೆಯನ್ನು ಇನ್ನಷು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ವಿಜ್ಞಾನಿಗಳ ಮೇಲಿದೆ ಎಂದು ಇಸ್ರೋ ನಿರ್ದೇಶಕ ಡಾ. ಎಂ.ಅಣ್ಣಾ ದೊರೈ ಹೇಳಿದರು.
ಜವಾಹರ್‌ಲಾಲ್ ನೆಹರು ತಾರಾಲಯ ಮತ್ತು ಇಸ್ರೋ ಸಹಯೋಗದಲ್ಲಿ ಮಂಗಳವಾರ ನಗರದ ನೆಹರು ತಾರಾಲಯದಲ್ಲಿ ಆಯೋಜಿಸಲಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ “ಆಸ್ಟ್ರೋ ಸ್ಯಾಟ್’ 3ಡಿ ಮಾದರಿಯ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. “ಆಸ್ಟ್ರೋಸ್ಯಾಟ್’ ಸೂಕ್ಷ್ಮ ಸಂವೇದಿಗಳು ದೂರದ ಭೌತ ಕಾರ್ಯಗಳು ಹಾಗೂ ವಿದ್ಯಮಾನಗಳ ಕುರಿತು ಮಾಹಿತಿ ಸಂಗ್ರಹಿಸಿ ಭೂಮಿಗೆ ರವಾನಿಸುತ್ತದೆ.
ಬೆಂಗಳೂರಿನ ಸಮೀಪದ ಬ್ಯಾಲಾಳನಲ್ಲಿರುವ ಇಂಡಿಯನ್ ಸ್ಪೇಸ್ ಸೈನ್ಸ್ ಡಾಟಾ ಸೆಂಟರ್‌ನಲ್ಲಿ ವಿಜ್ಞಾನಿಗಳ ಸಂಶೋಧನೆಗಾಗಿ ಮಾಹಿತಿ ಶೇಖರಿಸಿ ಇಡಲಾಗುತ್ತದೆ. ಇದು ಖಭೌತದ ಕುರಿತು ಹೆಚ್ಚಿನ ಅಧ್ಯಯನ, ಸಂಶೋಧನೆಗೆ ಇದು ಸಹಕಾರಿ ಎಂದರು.
ಜವಾಹರ್‌ಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ಮಾತನಾಡಿ, ಆಸ್ಟ್ರೋಸ್ಯಾಟ್ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ ಸೆ.28ಕ್ಕೆ ಎರಡು ವರ್ಷಗಳಾಗಿವೆ. ಈ ಹಿನ್ನೆಲೆ ಇಸ್ರೋ ಸಂಸ್ಥೆ ಸಹಯೋಗದಲ್ಲಿ 3ಡಿ ಮಾದರಿಯ
ಆಸ್ಟ್ರೋಸ್ಯಾಟ್ ಮತ್ತು ಅದನ್ನು ಹೊತ್ತೂಯ್ದ ರಾಕೆಟ್ ಮಾದರಿಯನ್ನು ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರದರ್ಶನಕ್ಕೆ ಇಡಲಾಗಿದೆ ಎಂದು ತಿಳಿಸಿದರು. ಇಸ್ರೋ ಸಂಸ್ಥೆ ಪ್ರಚಾರ ವಿಭಾಗದ ನಿರ್ದೇಶಕ ಡಾ.ದೇವಿಪ್ರಸಾದ್ ಕಾರ್ಣಿಕ್, ವಿಜ್ಞಾನಿ ಬಿ.ಆರ್.ಗುರುಪ್ರಸಾದ್ ಇತರರು ಇದ್ದರು.