Advertisement

ಗೋವಾ ಚಿತ್ರೋತ್ಸವದಲ್ಲಿ ಉಚಿತ ಪ್ರವೇಶ;ಸಮೂಹಸಂವಹನ ವಿದ್ಯಾರ್ಥಿಗಳಾಗಿದ್ದರೆ ಹೆಸರು ನೋಂದಾಯಿಸಿ

12:57 PM Nov 25, 2019 | Nagendra Trasi |

ಸಿನಿಮಾಸಕ್ತ ವಿದ್ಯಾರ್ಥಿಗಳು ಇಫಿ ಚಿತ್ರೋತ್ಸವವೂ ಸೇರಿದಂತೆ ದೇಶದ ವಿವಿಧೆಡೆ ನಡೆಯುವ ಚಿತ್ರೋತ್ಸವಗಳಲ್ಲಿ ಭಾಗವಹಿಸಲು ಹಲವು ಕಾರಣಗಳಿವೆ. ನ. 20ರಿಂದ 28ರವರೆಗೆ ನಡೆಯುವ ಈ ಚಿತ್ರೋತ್ಸವದಲ್ಲಿ ಸಿನಿಮಾ ಮತ್ತು ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ.

Advertisement

ವಿದ್ಯಾರ್ಥಿಗಳಲ್ಲಿ ಸಿನಿಮಾ ಬಗೆಗಿನ ಪ್ರೀತಿ ಮತ್ತು ಅರಿವು ಹೆಚ್ಚಿಸುವ ಸಲುವಾಗಿ ಇಫಿ ಈ ಸೌಲಭ್ಯವನ್ನು ಕಲ್ಪಿಸಿದೆ. ಅಂದರೆ, ಈ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕವಿರುವುದಿಲ್ಲ.ಇಫಿ ಚಿತ್ರೋತ್ಸವದಲ್ಲಿ ಬರೀ ಬಾಲಿವುಡ್‌ ಅಥವಾ ಇತರೆ ಪ್ರಾದೇಶಿಕ ಭಾಷೆಗಳ ಜನಪ್ರಿಯ ಚಲನ ಚಿತ್ರಗಳಷ್ಟೇ ಸಿಗುವುದಿಲ್ಲ. ಇಲ್ಲಿ ಬಹಳ ಮುಖ್ಯವಾಗಿ ಜಗತ್ತಿನ ವಿವಿಧ ದೇಶಗಳ ಪ್ರಶಸ್ತಿ ಪುರಸ್ಕೃತ ಚಿತ್ರಗಳು, ಹೊಸ ಅಲೆಯ ಚಿತ್ರಗಳು ವೀಕ್ಷಿಸಲು ಲಭ್ಯ.

ಇದರೊಂದಿಗೆ ಇನ್ನೂವಿಶೇಷವೆಂದರೆ, ಕಥೇತರ [ನಾನ್‌ ಫೀಚರ್‌] ವಿಭಾಗದಲ್ಲಿ ಸಾಕ್ಷ್ಯ ಚಿತ್ರಗಳನ್ನೂ ವೀಕ್ಷಿಸಬಹುದು. ವಿವಿಧ ಸಿನಿಮಾ ಶಾಲೆಗಳಿಂದ ಹೊರ ಬರುತ್ತಿರುವ ವಿಶಿಷ್ಟ ಪ್ರತಿಭೆಗಳ ಪ್ರದರ್ಶನವೂ ಇಲ್ಲಿದೆ.

ಯಾಕೆ ವಿದ್ಯಾರ್ಥಿಗಳು ಭಾಗವಹಿಸಬೇಕು?

ಇಫಿಯಷ್ಟೇ ಅಲ್ಲ, ದೇಶದ ಯಾವುದೇ ಭಾಗದಲ್ಲಿ ನಡೆಯುವ ಪ್ರಮುಖ ಚಿತ್ರೋತ್ಸವಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಹಲವು ಕಾರಣಗಳಿವೆ. ಪ್ರಮುಖವಾಗಿ ಅಲ್ಲಿ ಸಿಗುವ ಸಿನಿಮಾ ವೈವಿಧ್ಯ. ಇದರಿಂದ ಜಗತ್ತಿನ ಇಂದಿನ ಚಲನ ಚಿತ್ರಗಳ ಟ್ರೆಂಡ್‌ ತಿಳಿದುಕೊಳ್ಳಲು ಸಾಧ್ಯ.

Advertisement

ಮಾಸ್ಟರ್‌ ಕ್ಲಾಸಸ್‌

ಎರಡನೆಯದಾಗಿ ಅಲ್ಲಿ ನಡೆಯುವ ವಿವಿಧ ತರಬೇತಿಗಳು. ಈಗ ಇಫಿಯಲ್ಲಿ ಮಾಸ್ಟರ್‌ ಕ್ಲಾಸಸ್‌ ಎಂಬ ವಿಭಾಗವಿದೆ. ಚಿತ್ರೋತ್ಸವಕ್ಕೆ ಬಂದವರು ಬರೀ ಸಿನಿಮಾ ನೋಡಬೇಕೆಂದೇನೂ ಇಲ್ಲ. ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ನಡೆಯುವ ಮಾಸ್ಟರ್ಕ್ಲಾಸಸ್‌ ನಲ್ಲಿ ಭಾಗವಹಿಸಬಹುದು. ಅದರಲ್ಲಿ ಖ್ಯಾತ ಸಿನಿಮಾಕರ್ತರು ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳುವರು. ಸುಭಾಷ್‌ ಘಾಯ್‌ ನಿಂದ ಹಿಡಿದು ಹಲವರು ಇಂಥ ತರಗತಿಗಳಲ್ಲಿ ಪಾಲ್ಗೊಳ್ಳುವರು.

ಖ್ಯಾತರೊಂದಿಗೆ ಸಂಭಾಷಣೆ

ಪ್ರತಿ ಚಿತ್ರೋತ್ಸವದಲ್ಲೂ ಹಲವಾರು ಖ್ಯಾತ ನಿರ್ದೇಶಕರು, ಪರಿಣಿತರು ಪಾಲ್ಗೊಳ್ಳುವರು. ಅವರನ್ನು ಭೇಟಿಯಾಗಿ ಸಿನಿಮಾ ಬಗೆಗಿನ ತಮ್ಮ ಅಭಿಪ್ರಾಯ, ಸಂಶಯ ನಿವಾರಿಸಿಕೊಳ್ಳಲೂ ಒಂದು ಅವಕಾಶ.

ಚಿಮ್ಮುಹಲಗೆ

ಕೆಲವು ಪ್ರತಿಭೆಗಳಿಗೆ ಇದೊಂದು ಚಿಮ್ಮು ಹಲಗೆಯೂ ಸಹ. ಅಲ್ಲಿ ಭೇಟಿಯಾಗುವ ಖ್ಯಾತ ನಾಮರ ಸಂಪರ್ಕ ಪಡೆದು ಸಿನಮಾ ಕ್ಷೇತ್ರ ಪ್ರವೇಶಿಸಲೂ ಒಂದು ಕಿಂಡಿ ತೆರೆಯುವುದು ಇಲ್ಲಿಯೇ.

ಇಫಿ ಉತ್ಸವಕ್ಕೆ ನೋಂದಾಯಿಸಲು ಏನು ಮಾಡಬೇಕು ?

ಯಾವುದೇ ಸಿನಿಮಾ ಮತ್ತು ಸಮೂಹ ಮಾಧ್ಯಮ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ಹದಿನೆಂಟು ವರ್ಷ ವಯಸ್ಸಾಗಿರಬೇಕು. ಬಳಿಕ ಸಂಸ್ಥೆಯ ಮುಖ್ಯಸ್ಥರಿಂದ ಪತ್ರ [ bonafide certificate]ವನ್ನು ತರಬೇಕು, ವಿದ್ಯಾರ್ಥಿ ಪ್ರತಿನಿಧಿ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

ವಿದ್ಯಾರ್ಥಿ ಪ್ರತಿನಿಧಿಗಳಿಗೂ ಉಳಿದ ಪ್ರತಿನಿಧಿಗಳಿಗೆ ಸಿಗುವ ಸೌಲಭ್ಯದಂತೆಯೇ ಚಿತ್ರ ವೀಕ್ಷಣೆ, ಮಾಸ್ಟರ್‌ ಕ್ಲಾಸಸ್‌, ಕಾರ್ಯಾಗಾರ, ಉಚಿತ ವೈಫೈ, ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಸೌಕರ್ಯ ಲಭ್ಯ. ಅಂದ ಹಾಗೆ ವಿದ್ಯಾರ್ಥಿ ಪ್ರತಿನಿಧಿ ದಿನಕ್ಕೆ ಮೂರು ಸಿನಿಮಾಗಳನ್ನುವೀಕ್ಷಿಸಬಹುದು. ನೋಂದಣಿ ಮತ್ತು ಮಾಹಿತಿಗೆ ಈ ಲಿಂಕ್‌ [ಸಂಪರ್ಕಕೊಂಡಿ]ನ್ನು ಕ್ಲಿಕ್‌ ಮಾಡಿ

*ರೂಪರಾಶಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next