Advertisement

ವಿದ್ಯಾರ್ಥಿಗಳು ಉತ್ತಮ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗೆ ಹಾಜರಾಗಿ: ಯು.ಟಿ. ಖಾದರ್‌

01:37 AM Mar 28, 2022 | Team Udayavani |

ಮಂಗಳೂರು: ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರಕಾರದ ಆದೇಶವನ್ನು ಗೌರವಿಸಿ, ಧಾರ್ಮಿಕ ಮುಖಂಡರು ಈಗಾಗಲೇ ನೀಡಿರುವ ಸಲಹೆಯನ್ನು ಮನ್ನಿಸಿ ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿ ಯಾವುದೇ ಮಾನಸಿಕ ಒತ್ತಡವಿಲ್ಲದೆ, ಆತ್ಮವಿಶ್ವಾಸದಿಂದ ಬರೆಯಿರಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್‌ ಕೋರಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಅತೀ ಮುಖ್ಯ. ಅದುದರಿಂದ ಪರೀಕ್ಷೆಯನ್ನು ಮಾತ್ರ ಯೋಚನೆಯಲ್ಲಿ ಇರಿಸಿಕೊಂಡು ಉತ್ತಮ ಅಂಕ ಗಳಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಎಲ್ಲ ಸರಕಾರಿ
ಶಾಲೆಗಳಲ್ಲಿ ಸರಕಾರ ನಿಗದಿಪಡಿಸಿರುವ ಸಮವಸ್ತ್ರ ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾಯ ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರ ಧರಿಸುವಂತೆ ಸರಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳು ನ್ಯಾಯಾಲಯ ಮತ್ತು ಸರಕಾರದ ಆದೇಶಕ್ಕೆ ಮನ್ನಣೆ ನೀಡಬೇಕು. ಹಿಜಾಬ್‌ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಶಿಕ್ಷಣ ಮುಖ್ಯ. ಅದರಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು ಎಲ್ಲರ ಜವಾಬ್ದಾರಿ. ಹೆತ್ತವರು ಕೂಡ ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಬೇಕು. ಅದೇ ರೀತಿ ಶಿಕ್ಷಣ ಸಂಸ್ಥೆಯವರು ಕೂಡ ವಿದ್ಯಾರ್ಥಿಗಳು ನೆಮ್ಮದಿಯಿಂದ ಪರೀಕ್ಷೆ ಬರೆಯುವ ವಾತಾವರಣ ನಿರ್ಮಿಸಬೇಕು ಎಂದು ಖಾದರ್‌ ಮನವಿ ಮಾಡಿದರು.

ಸ್ವಾಮೀಜಿಗಳ ಮೇಲೆ
ಸಿದ್ದರಾಮಯ್ಯಗೆ ಗೌರವ
ಸಿದ್ದರಾಮಯ್ಯ ಅವರು ಎಲ್ಲ ಧರ್ಮಗಳ ಧರ್ಮಗುರುಗಳು, ಸ್ವಾಮೀಜಿಗಳಿಗೆ ವಿಶೇಷ ಗೌರವ ನೀಡುತ್ತಾ ಬಂದಿದ್ದಾರೆ. ಎಲ್ಲ ಹಿರಿಯ ಸ್ವಾಮೀಜಿಗಳ ಜತೆ ಆತ್ಮೀಯತೆಯಿಂದ ಇದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮೂಢನಂಬಿಕೆ ಮಸೂದೆಗೆ ಸ್ವಾಮೀಜಿಗಳು ಬೇಡ ಎಂದಿದ್ದಕ್ಕೆ ಅದನ್ನು ಕೈಬಿಟ್ಟಿದ್ದರು. ಅರ್ಚಕರ ವೇತನ ಹೆಚ್ಚಳ, ದೇವಾಲಯ ನಿರ್ವಹಣೆಯ ಅನುದಾನವನ್ನು ಏರಿಕೆ ಮಾಡಿದ್ದರು. ಧಾರ್ಮಿಕ ಕ್ಷೇತ್ರಗಳಿಗೆ ಕೋಟ್ಯಂತರ ರೂ. ಅನುದಾನ ನೀಡಿದ್ದರು. ಸ್ವಾಮೀಜಿಗಳ ಎಲ್ಲ ಬೇಡಿಕೆಗಳಿಗೂ ಸ್ಪಂದಿಸಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿ ಯುದ್ದಕ್ಕೂ ಯಾವುದೇ ಸ್ವಾಮೀಜಿ ಪ್ರತಿಭಟನೆ ಮಾಡಿಲ್ಲ. ಆದರೆ ಬಿಜೆಪಿ ಅವಧಿಯಲ್ಲಿ ಸರಕಾರದ ವಿರುದ್ಧವೇ ಸ್ವಾಮೀಜಿಗಳು ಪ್ರತಿಭಟನೆ ಕೂರುವ ಪರಿಸ್ಥಿತಿ ಬಂದಿದೆ ಎಂದರು.

Advertisement

ಬಿಜೆಪಿಯವರು ಆಡಳಿತ ವೈಫಲ್ಯವನ್ನು ಮರೆಮಾಚಲು ಸಿದ್ದರಾಮಯ್ಯ ನವರ ಹೇಳಿಕೆ ತಿರುಚುತ್ತಿದ್ದಾರೆ ಎಂದು ಆರೋಪಿಸಿದರು. ವಧಾಗೃಹ ಸ್ವಚ್ಛತೆಗೆ ಕ್ರಮಕುದ್ರೋಳಿಯಲ್ಲಿರುವ ಆಡು-ಕುರಿ ವಧಾಗೃಹವನ್ನು ಅಭಿವೃದ್ಧಿಗೊ ಳಿಸಿ ಜನರಿಗೆ ಸ್ವಚ್ಛ ಮತ್ತು ಆರೋಗ್ಯಪೂರ್ಣ ಮಾಂಸ ದೊರಕುವಂತೆ ಮಾಡುವುದು ಮಹಾ ನಗರ ಪಾಲಿಕೆಯ ಜವಾಬ್ದಾರಿ. ಆದರೆ ಪ್ರಸ್ತುತ ಈ ವಧಾಗೃಹದ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಇಲ್ಲಿ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿದೆ. ಅದುದರಿಂದ ಮಂಡಳಿಯ ಸೂಚನೆಯಂತೆ ಸ್ವಚ್ಛತೆ ಕಾಮಗಾರಿ ಮಾಡಬೇಕು. ಇಲ್ಲದಿದ್ದರೆ ವಧಾ ಗೃಹವನ್ನು ಸ್ಥಳಾಂತರ ಮಾಡಬೇಕು ಎಂದು ಎಂದರು.

ನಾನು ಸಚಿವನಾಗಿದ್ದಾಗ ಆರೋಗ್ಯಪೂರ್ಣ ಮಾಂಸ ಪೂರೈಕೆಯ ಉದ್ದೇಶದಿಂದ ವಧಾಗೃಹ ನವೀಕರಣಕ್ಕೆ ಮುಂದಾದಾಗ ಬಿಜೆಪಿಯವರು ಅಪಪ್ರಚಾರ ಮಾಡಿದರು. ವಧಾಗೃಹವನ್ನೇ ಬಂದ್‌ ಮಾಡಬೇಕು ಎಂದಿದ್ದರು. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷಗಳೇ ಆದರೂ ಈಗಲೂ ಅದೇ ಪರಿಸ್ಥಿತಿಯಲ್ಲಿ ವಧಾಗೃಹವನ್ನು ಮುಂದುವರಿಸಿ ಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next