Advertisement

ಸರಕಾರಿ ಶಾಲೆಗಳಲ್ಲಿ ದಾಖಲೆಯ ದಾಖಲಾತಿ !

11:43 PM Jul 24, 2021 | Team Udayavani |

“ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ವಿದ್ಯಾ ದೇಗುಲಕ್ಕೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿ, ಮಕ್ಕಳಿಗೆ ವಿದ್ಯೆಯೆಂಬ ಪಥದಲ್ಲಿ ಸಾಗುವಂತೆ ಮುನ್ನಡೆಸುವ ಹೆತ್ತವರು ಮತ್ತು ಆ ಹಾದಿಯಲ್ಲಿ ಸಾಗುವ ಮಕ್ಕಳ ಮನದಂಗಳದಲ್ಲಿ ಕನಸುಗಳು ನೂರೆಂಟಿರುತ್ತವೆ. ಕನಸುಗಳ ಬೆನ್ನತ್ತಿ ಹೊರಟ ಮಕ್ಕಳ ಹೆತ್ತವರು, ತಮ್ಮ ಮಗುವಿಗೆ ಸೂಕ್ತವಾದ ಶಾಲೆಯನ್ನು ಆಯ್ಕೆ ಮಾಡುವುದರಲ್ಲಿ ತಮ್ಮ ಓರಗೆಯವರೊಡನೆ ಪೈಪೋಟಿಗಿಳಿದಂತೆ ಯೋಚಿಸುವುದನ್ನೂ ಕೆಲವೆಡೆ ಕಾಣಬಹುದು. ಸುಮಾರು ಒಂದು ದಶಕದಿಂದ ಈಚೆಗೆ ಮಕ್ಕಳ ಹೆತ್ತವರು ಸಾಮಾನ್ಯವಾಗಿ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಿದರೆ ಮಾತ್ರ ಪರಿಪೂರ್ಣ ಶಿಕ್ಷಣ ಲಭಿಸುತ್ತದೆ ಎಂಬ ಮನಃಸ್ಥಿತಿಯನ್ನು ತಳೆದಿದ್ದರು. ಸರಕಾರಿ ಶಾಲೆಗಳು ಉತ್ತಮವಾಗಿದ್ದರೂ ಕೂಡ ಖಾಸಗಿ ಶಾಲೆಗಳತ್ತಲೇ ಅವರು ಚಿತ್ತ ಹರಿಸುತ್ತಿದ್ದರು.

Advertisement

ಆದರೆ ಇದೀಗ ಕಾಲ ಬದಲಾಗಿದೆ. “ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು’ ಎಂಬ ಮಾತು ಈಗ ಅಕ್ಷರಶಃ ನಿಜವಾಗುತ್ತಿದೆ. ಕಳೆದ ಸುಮಾರು ಒಂದೂವರೆ ವರ್ಷದಿಂದ ಕಾಡುತ್ತಿರುವ ಕೊರೊನಾ ಎಂಬ ಕಂಟಕವು ಜನಸಾಮಾನ್ಯರಿಗೆ ಬಹು ದೊಡ್ಡ ಹೊಡೆತ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಂತೂ ಮಕ್ಕಳಿಗೆ ಮುಖಾಮುಖೀ ಕಲಿಕೆಯು ಸಿಗದೆ ಅಗಾಧವಾದ ನಷ್ಟವಾಗಿದೆ. “ಇತಿಹಾಸವು ಮತ್ತೆ ಮರುಕಳಿಸುತ್ತದೆ’ ಎಂಬ ಮಾತೊಂದರಂತೆ ಶಾಲಾ ದಾಖಲಾತಿಯ ವಿಚಾರದಲ್ಲಿ ಮತ್ತೆ ಸರಕಾರಿ ಶಾಲೆಗಳು ದಾಖಲೆ ಬರೆಯುವ ಇತಿಹಾಸವು ಮರುಕಳಿಸುವಂತಿದೆ.

ಸುಮಾರು 70-80 ರ ದಶಕದಲ್ಲಿ ಎಲ್ಲರೂ ಸರಕಾರಿ ಶಾಲೆಗಳಲ್ಲಿ ಓದಿ, ಯಶಸ್ವಿ ಶಿಕ್ಷಣ ಪಡೆಯುತ್ತಿದ್ದರು. ಆದರೀಗ ಖಾಸಗಿ ಶಾಲೆಗಳ ದಾಖಲಾತಿಯ ಭರಾಟೆಯ ನಡುವೆಯೂ ಅದೇ ಸರಕಾರಿ ಶಾಲೆಗಳತ್ತ ಮಕ್ಕಳ ಹೆತ್ತವರು ಮತ್ತೆ ಮುಖ ಮಾಡುತ್ತಿದ್ದಾರೆ ಎಂಬುದು ಇತ್ತೀಚೆಗೆ ಬಿಡುಗಡೆಯಾದ 2021-22 ನೇ ಸಾಲಿನ ಶಾಲಾ ದಾಖಲಾತಿಯ ಅಂಕಿ ಅಂಶಗಳಿಂದ ಸಾಬೀತಾಗಿದೆ.

ಕೊರೊನಾದ ಭೀತಿಯಿಂದಾಗಿ ಹೆತ್ತವರ ಮನದಲ್ಲಿ ತಮ್ಮ ಮಕ್ಕಳು ದೂರದ ಖಾಸಗಿ ಶಾಲೆಗಳಲ್ಲಿ ಓದುವುದಕ್ಕಿಂತ ಮನೆಯ ಸಮೀಪದ ಸರಕಾರಿ ಶಾಲೆಗಳಲ್ಲಿ ಓದುವುದು ಉತ್ತಮ ಎಂಬ ಭಾವನೆ ಮೂಡಿಸಿದೆ. ಅದರೊಂದಿಗೆ ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್‌ ಕೊರತೆ ಉಂಟಾಗಿ ಖಾಸಗಿ ಶಾಲೆಗಳು ನೀಡುವ ಆನ್‌ಲೈನ್‌ ಶಿಕ್ಷಣಕ್ಕಾಗಿ ಪರದಾಡುವುದಕ್ಕಿಂತ ಮನೆಯ ಸಮೀಪದ ಸರಕಾರಿ ಶಾಲಾ ಶಿಕ್ಷಕರು ನೀಡುವ ವಿದ್ಯಾಗಮ ಶಿಕ್ಷಣ, ಮನೆ ಭೇಟಿಯಂಥವು ಮಕ್ಕಳಿಗೆ ಹೆಚ್ಚು ಉಪಯುಕ್ತ ಎಂಬ ಭಾವವು ಮಕ್ಕಳ ಹೆತ್ತವರಲ್ಲಿ ಮೂಡಿದೆ ಎಂದರೆ ತಪ್ಪಾಗಲಾರದು. ಅದಲ್ಲದೇ ಕೊರೊನಾ ತಂದಿಟ್ಟ ಲಾಕ್‌ ಡೌನ್‌ ಆರ್ಥಿಕವಾಗಿ ಕುಟುಂಬಗಳಿಗೆ ಬಹುದೊಡ್ಡ ಪೆಟ್ಟು ಕೊಟ್ಟಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಪಾವತಿಯು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಶುಲ್ಕದ ಹೊಡೆತಕ್ಕಿಂತ ಸರಕಾರಿ ಶಾಲೆಯ ಶಿಕ್ಷಣವು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಉಚಿತವಾಗಿ ದೊರೆಯುತ್ತದೆ ಎಂಬುದು ಅವರಿಗೆ ಮನದಟ್ಟಾದಂತಿದೆ.

ಸರಕಾರಿ ಶಾಲೆಗಳು ಕೊರೊನಾ ಕಾರಣದಿಂದ ಸುದೀರ್ಘ‌ ಕಾಲ ಮುಚ್ಚಿದ್ದರೂ ಶಾಲಾ ದಾಖಲಾತಿಯನ್ನು ಹೆಚ್ಚಿಸಲು ಹಲವು ಶಿಕ್ಷಕರು ಕಂಡುಕೊಂಡ ವಿನೂತನ ಯೋಜನೆಗಳು ಕೂಡ ಈ ವರ್ಷ ಅತೀ ಹೆಚ್ಚು ಮಕ್ಕಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸುವಲ್ಲಿ ಸಫ‌ಲವಾಗಿವೆ. ಹಲವೆಡೆ ಸ್ವತಃ ಶಾಲಾ ಶಿಕ್ಷಕರೇ ಶಾಲಾ ಗೋಡೆಗಳಿಗೆ ಬಣ್ಣದ ಚಿತ್ತಾರ ಬರೆದು ಸುಂದರವಾಗಿಸಿದ್ದರೆ ಕೆಲವೆಡೆ ದಾನಿಗಳ ಸಹಕಾರದಿಂದ ಗೋಡೆಗಳ ಚಿತ್ತಾರಗಳನ್ನು ಬರೆಸಿದ್ದಾರೆ. ಇನ್ನೂ ಕೆಲವೆಡೆ ಶಾಲಾ ಭೌತಿಕ ಸೌಲಭ್ಯವನ್ನು ಉನ್ನತೀಕರಿಸಿದ್ದಾರೆ. ಇದಲ್ಲದೇ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ಕೆಲವು ಸರಕಾರಿ ಶಾಲೆಗಳಲ್ಲಿ ಶಾಲಾ ಬಸ್‌ ಸೌಲಭ್ಯವನ್ನೂ ಒದಗಿಸಿರುವುದು ಅಭಿನಂದನೀಯ.ಇವೆಲ್ಲವೂ ಸರಕಾರಿ ಶಾಲೆಗಳ ಬಲವನ್ನು ವೃದ್ಧಿಸಿವೆ. ಶಾಲಾ ಎಸ್‌.ಡಿ.ಎಂ.ಸಿ. ಯವರು ಕೂಡ ಹೆತ್ತವರ ಮನವೊಲಿಸಿ ಶಾಲಾ ದಾಖಲಾತಿಯನ್ನು ಹೆಚ್ಚಿಸುವುದರಲ್ಲಿ ಯಶಸ್ವಿಯಾಗಿ¨ªಾರೆ. ಇವೆಲ್ಲವುಗಳಿಂದಾಗಿ ಸರಕಾರಿ ಶಾಲೆಗಳಿಗೆ ಆನೆಬಲ ಬಂದಂತಾಗಿದೆ ಎಂಬುದಂತೂ ದಿಟ. ಸಮಾಜದ ಅನೇಕ ಸಂಘ-ಸಂಸ್ಥೆಗಳು,ದಾನಿಗಳು ಸರಕಾರಿ ಶಾಲೆಗಳ ಅಭಿವೃದ್ಧಿಯತ್ತ ಗಮನ ಹರಿಸಿರುವುದು ಶಾಲೆ ಮತ್ತು ಸಮಾಜದ ನಡುವಿನ ಕೊಂಡಿಯನ್ನು ಗಟ್ಟಿಗೊಳಿಸಿದೆ.

Advertisement

ಸರಕಾರಿ ಶಾಲೆಗಳು ಮತ್ತೆ ಮಕ್ಕಳ ಕಲರವದಿಂದ ತುಂಬಿ ತುಳುಕುವಂತಾದರೆ ಅದು ಆ ಊರಿಗೆ ಊರ ಜನರಿಗೆ ಹೆಮ್ಮೆ. “ನಮ್ಮ ಸರಕಾರಿ ಶಾಲೆ, ನಮ್ಮ ಹೆಮ್ಮೆ’ ಎಂಬ ಮನಃಸ್ಥಿತಿಯು ಜನರಲ್ಲಿ ಮೂಡಿ, ಸರಕಾರಿ ಶಾಲೆಗಳ ಉನ್ನತೀಕರಣದಲ್ಲಿ ನಾಗರಿಕರು ಕೈಜೋಡಿಸಿದರೆ ಸರಕಾರಿ ಶಾಲೆಗಳು ಮತ್ತೆ ಉತ್ತುಂಗಕ್ಕೇರುವುದರಲ್ಲಿ ಸಂಶಯವಿಲ್ಲ. ಸರಕಾರಿ ಶಾಲೆಗಳಲ್ಲಿ ಬೋಧನಾ ಗುಣಮಟ್ಟ ಕಡಿಮೆ ಇದೆ ಎಂಬ ಮೌಡ್ಯವನ್ನು ಕಿತ್ತೂಗೆದು ಶಾಲಾ ಶಿಕ್ಷಣದಲ್ಲಿ ಮಕ್ಕಳ ಹೆತ್ತವರೂ ಭಾಗೀದಾರರಾಗಿ ಶಿಕ್ಷಕರೊಂದಿಗೆ ಕೈಜೋಡಿಸಿದರೆ, ಉತ್ಕೃಷ್ಟ ಗುಣಮಟ್ಟದೊಂದಿಗೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಶಿಕ್ಷಣವು ಲಭಿಸುವುದರಲ್ಲಿ ಎರಡು ಮಾತಿಲ್ಲ.

– ಭಾರತಿ ಎ., ಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next