ಚಾಮರಾಜನಗರ: ವ್ಯಾಲಂಟೈನ್ಸ್ ಡೇ ಪ್ರಯುಕ್ತ ಹುಡುಗಿರ ಕಾಟದಿಂದ ತಪ್ಪಿಸಿಕೊಳ್ಳಲು ಐದು ದಿನಗಳ ರಜೆ ಬೇಕೆಂದು ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದ ಶೈಲಿಯಲ್ಲಿ ಇರುವ ಬರಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪ್ರಾಂಶುಪಾಲರಿಗೆ ಮುಜುಗರ ಉಂಟು ಮಾಡಿರುವ ಪ್ರಸಂಗ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಎಸ್. ಶಿವರಾಜು ಹೆಸರಿನಲ್ಲಿ ಈ ನಕಲಿ ರಜೆ ಪತ್ರವನ್ನು ಸೃಷ್ಟಿಸಲಾಗಿದೆ. ಈ ನಕಲಿ ಪತ್ರದ ಬಗ್ಗೆ ತನಿಖೆ ನಡೆಸುವಂತೆ ಪ್ರಾಂಶುಪಾಲರು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮಹದೇಶ್ವರ ಕಾಲೇಜಿನ ಪ್ರಾಂಶುಪಾಲರಿಗೆ ಎಂದು ಬರೆದಿರುವ ಪತ್ರದಲ್ಲಿ, ವಿಷಯ: ವಾಲಂಟೈನ್ಸ್ ಡೇ ಪ್ರಯುಕ್ತ ಐದು ದಿನಗಳ ಕಾಲ ರಜೆ ಕೋರಿ ಎಂದು ನಮೂದಿಸಲಾಗಿದೆ. ಬಳಿಕ, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಆಚರಿಸುತ್ತಿರುವ ವ್ಯಾಲಂಟೈನ್ಸ್ ಡೇಯಲ್ಲಿ ಹುಡುಗಿಯರ ಕಾಟವನ್ನು ತಡೆಯಲಾರದೆ 5 ದಿನಗಳವರೆಗೆ (14.02.21) ರಜೆ ಕೊಡಬೇಕೆಂದು ಪ್ರಾಂಶುಪಾಲರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬರೆಯಲಾಗಿದೆ. ತಮ್ಮ ವಿಶ್ವಾಸಿ ಶಿವರಾಜ್ ವಿಕ್ಟರ್. ದಿನಾಂಕ 9.02.21 ಎಂದು ಬರೆಯಲಾಗಿದೆ!
ಇದನ್ನೂ ಓದಿ:ಜೈ ಶ್ರೀರಾಮ್ ಘೋಷಣೆ ಕೂಗುವುದು ಬಂಗಾಳದಲ್ಲಿ ಅಪರಾಧವಾದ್ರೆ;…ಮಮತಾ ವಿರುದ್ಧ ಶಾ ಕಿಡಿ
ಇದಕ್ಕೆ ಪ್ರಿನ್ಸಿಪಾಲ್ ಸಹಿ ಹಾಗೂ ಕಾಲೇಜಿನ ಸೀಲ್ ಅನ್ನು ಕೆಳಗೆ ಒತ್ತಲಾಗಿದೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಹರಿದಾಡಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಶಿವರಾಜು ಎಂಬ ಹೆಸರಿನಲ್ಲಿ ಬೇರಾರೋ ವಿದ್ಯಾರ್ಥಿಗಳು ಈ ಪತ್ರವನ್ನು ಸೃಷ್ಟಿಮಾಡಿರುವಂತೆ ಕಾಣುತ್ತಿದೆ. ಕಾಲೇಜಿನ ಸೀಲ್ ಅನ್ನು ಕದ್ದು ಹಾಕಿರುವ ಶಂಕೆಯಿದೆ.
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಸೀಗನಾಯಕ ಅವರನ್ನು ‘ಉದಯವಾಣಿ’ ಸಂಪರ್ಕಿಸಿದಾಗ, ಈ ಪತ್ರವನ್ನು ತಾನು ಬರೆದಿಲ್ಲವೆಂದು ವಿದ್ಯಾರ್ಥಿ ಶಿವರಾಜ್ ತಿಳಿಸಿದ್ದಾನೆ. ಪರೀಕ್ಷೆಯ ಪ್ರವೇಶಪತ್ರ ಅಥವಾ ಸ್ಕಾಲರ್ ಶಿಪ್ ಅರ್ಜಿಗೋ ಹಾಕಿದ ಸಹಿ ಮತ್ತು ಸೀಲ್ ಅನ್ನು ಕತ್ತರಿಸಿ ಅಂಟಿಸಿ ಹೀಗೆ ಮಾಡಿರಬಹುದು. ಅಥವಾ ಸಹಿಯನ್ನು ನಕಲು ಮಾಡಿ, ಸೀಲ್ ಅನ್ನು ಕದ್ದು ಹಾಕಿಕೊಂಡಿರಬಹುದು. ಒಟ್ಟಾರೆ ಇದು ಹೇಗಾಗಿದೆಯೋ ಗೊತ್ತಿಲ್ಲ. ಇದರ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.