ವಿಜಯಪುರ: ಯುದ್ಧ ಪೀಡಿತ ಉಕ್ರೇನ್ ದೇಶದಿಂದ ವಿಜಯಪುರ ಜಿಲ್ಲೆಯ ಓರ್ವ ವಿದ್ಯಾರ್ಥಿ ಭಾನುವಾರ ಜಿಲ್ಲೆಗೆ ಮರಳಿದ್ದು, ಜಿಲ್ಲೆಯ ಇನ್ನೂ 10 ವಿದ್ಯಾರ್ಥಿಗಳು ತಾಯ್ನಾಡು ಭಾರತಕ್ಕೆ ಬಂದಿಳಿದಿದ್ದಾರೆ. ನಾಲ್ವರು ಭಾರತಕ್ಕೆ ಮರಳುವ ಹಂತದಲ್ಲಿದ್ದಾರೆ.
ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ಸಿದ್ದು ಪರಶುರಾಮ ಪೂಜಾರಿ ಎಂಬ ವಿದ್ಯಾರ್ಥಿ ಉಕ್ರೇನ್‍ನ ಜೋಕೋ ಯೂನೀಯನ್ ಸ್ಟೇಟ್ ವೈಧ್ಯಕೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ. ಯುದ್ಧ ಪೀಡಿತ ಕೀವ್, ಖಾರ್ಕೀಕ್ ಪ್ರದೇಶದಿಂದ ಸುಮಾರು 800 ಕಿ.ಮೀ. ಅಂತರದಲ್ಲಿದ್ದ ಕಾರಣ ಯುದ್ಧದ ಅಪಾಯಕ್ಕೆ ಸಿಲುಕಿರಲಿಲ್ಲ.
ಆದರೆ ಯುದ್ಧದ ಪೀಡಿತ ಉಕ್ರೇನ್‍ನಲ್ಲಿ ಇರುವುದು ಸುರಕ್ಷಿತವಲ್ಲದ ಕಾರಣ ರುಮೇನಿಯಾ ದೇಶದ ಮಾರ್ಗವಾಗಿ ಕೇಂದ್ರ ಸರ್ಕಾರ ಕಲ್ಪಿಸಿರುವ ವಿಮಾನದಲ್ಲಿ ಶುಕ್ರವಾರ ದೆಹಲಿಗೆ ಆಗಮಿಸಿದ್ದು, ಶನಿವಾರ ಬೆಂಗಳೂರಿಗೆ ಬಂದಿದ್ದರು. ನಂತರ ರಸ್ತೆ ಮಾರ್ಗವಾಗಿ ಹೊರಟು ಭಾನುವಾರ ಬೆಳಿಗ್ಗೆ ನರಸಲಗಿ ಗ್ರಾಮಕ್ಕೆ ಬಂದಿಳಿದಾಗ ತವರು ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ಈ ಮಧ್ಯೆ ಉಕ್ರೇನ್ ದೇಶದಲ್ಲಿ ಸಿಲುಕಿದ್ದ ಜಿಲ್ಲೆಯ ಇನ್ನೂ 16 ವಿದ್ಯಾರ್ಥಿಗಳಲ್ಲಿ ಮತ್ತೆ 10 ವಿದ್ಯಾರ್ಥಿಗಳು ವಿಮಾನದಲ್ಲಿ ಭಾರತಕ್ಕೆ ಬಂದಿಳಿದಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಬುಡಾಪೆಸ್ಟ್ ವಿಮಾನ ನಿಲ್ದಾಣದಲ್ಲಿ ತಾಯತ್ನಾಡಿಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಇನ್ನು 4 ವಿದ್ಯಾರ್ಥಿಗಳು ರುಮೇನಿಯಾ ಗಡಿಯ ಮಾರ್ಗವಾಗಿ ಪ್ರಯಾಣ ಆರಂಭಿಸಿದ್ದು, ಕೆಲವೇ ಗಂಟೆಗಳಲ್ಲಿ ಭಾರತಕ್ಕೆ ಬಂದಿಳಿಯುವ ನಿರೀಕ್ಷೆ ಇದೆ.
ಇದನ್ನೂ ಓದಿ : ಗುಂಡ್ಲುಪೇಟೆ : ಉಕ್ರೇನ್ ನಿಂದ ಸ್ವಗ್ರಾಮಕ್ಕೆ ಅಗಮಿಸಿ ಕಾವ್ಯ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿಜಯಪುರ ಜಿಲ್ಲಾಡಳಿತ ಉಕ್ರೇನ್‍ನಲ್ಲಿ ಸಿಲುಕಿದ್ದ ವಿಜಯಪುರ ಜಿಲ್ಲೆ ಎಲ್ಲ 18 ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದು, ಇಬ್ಬರು ಈಗಾಗಲೇ ಜಿಲ್ಲೆಗೆ ಮರಳಿದ್ದಾರೆ. ಇತರರು ಶೀಘ್ರವೇ ಜಿಲ್ಲೆಗೆ ಮರಳಲಿದ್ದಾರೆ. ಇದಕ್ಕಾಗಿ ಕೇಂದ್ರ-ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿವೆ ಎಂದು ವಿವರ ನೀಡಿದೆ.