Advertisement

ಮೂಲ ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿನಿಯರ ಧರಣಿ

09:56 PM Aug 30, 2019 | Lakshmi GovindaRaj |

ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕೊಠಡಿ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿಬೇಕೆಂದು ಒತ್ತಾಯಿಸಿ ಕಾಲೇಜು ವಿದ್ಯಾರ್ಥಿನಿಯರು ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು. ಹೆಸರಿಗೆ ಮಾತ್ರ ಮಹಿಳಾ ಪದವಿ ಕಾಲೇಜು. ಆದರೆ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವಂತಾಗಿದೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ನಮ್ಮ ಬೇಡಿಕೆ ಈಡೇರಿಲ್ಲ. ಹೀಗಾಗಿ ಇಂದು ಅನಿವಾರ್ಯವಾಗಿ ತಾಲೂಕು ಕಚೇರಿ ಮುಂದೆ ಧರಣಿ ಕೈಗೊಂಡಿದ್ದೇವೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ತರಗತಿಗಳಿಲ್ಲದ ಕಾಲೇಜ್‌: 2014ರಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಟ್ಟಡದಲ್ಲಿಯೇ ಮಹಿಳಾ ಪದವಿ ಕಾಲೇಜಿನ ತರಗತಿಗಳನ್ನು ಆರಂಭಿಸಲಾಯಿತು. ಒಂದೆರಡು ವರ್ಷಗಳಲ್ಲಿಯೇ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದ್ದರಿಂದ ನಾವು ಕಾಲೇಜಿಗೆ ಸೇರಿದೆವು. ಆದರೆ, ಇಲ್ಲಿಯವರೆಗೂ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದೆ, ನಗರದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡಗಳಲ್ಲಿ ಒಂದೊಂದು ವಾರ ಒಂದೊಂದು ಶಾಲೆಯಲ್ಲಿ ಓದಬೇಕಾಗಿದೆ. ಕಾಲೇಜಿನ ಪ್ರಾಂಶುಪಾಲರಿಗೂ ಸಹ ಕುಳಿತುಕೊಳ್ಳಲು ಸರಿಯಾದ ಕೊಠಡಿ ಇಲ್ಲ. ಇನ್ನು ವಿದ್ಯಾರ್ಥಿಗಳಿಗೆ ಕೊಠಡಿ ಕಲ್ಪಿಸಲು ಹೇಗೆ ಸಾಧ್ಯ ಎಂದು ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದರು.

ಸೂಕ್ತ ಶೌಚಾಲಯಗಳೇ ಇಲ್ಲ: ಬೆಳಗ್ಗೆ 8.30ರಿಂದಲೇ ತರಗತಿಗಳು ಆರಂಭವಾಗುವುದರಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳು 10.30ರ ನಂತರ ತರಗತಿಗೆ ಬರುತ್ತಾರೆ. ಅಷ್ಟರಲ್ಲಿ ನಾವು ಅವರಿಗೆ ಕೊಠಡಿ ಬಿಟ್ಟುಕೊಡಬೇಕು. 150 ಜನ ಕಾಲೇಜು ವಿದ್ಯಾರ್ಥಿಗಳು, ಸುಮಾರು 450 ಜನ ಪ್ರೌಢಶಾಲಾ ವಿದ್ಯಾರ್ಥಿಗಳು ಇರುವ ಕಟ್ಟಡದಲ್ಲಿ ಸೂಕ್ತ ಶೌಚಾಲಯಗಳೆ ಇಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದರು. ಗ್ರಾಮೀಣ ಭಾಗದಿಂದ ಕಾಲೇಜಿಗೆ ಬರುವ ಹೆಣ್ಣು ಮಕ್ಕಳು ಬೆಳಗ್ಗೆ 7 ಗಂಟೆಗೆ ಮನೆ ಬಿಡಬೇಕಾಗಿದ್ದು, ತರಗತಿ ಮುಗಿಸಿಕೊಂಡು ಮತ್ತೆ ಮನೆ ಸೇರಲು ಕನಿಷ್ಟ ಮಧ್ಯಾಹ್ನ 2 ರಿಂದ 3 ಗಂಟೆಯಾಗುತ್ತದೆ. ಅಲ್ಲಿಯವರೆಗೂ ಹೆಣ್ಣು ಮಕ್ಕಳು ಶೌಚಾಲಯಕ್ಕೆ ಹೋಗುವಂತಿಲ್ಲ. ಎಂದು ವಿದ್ಯಾರ್ಥಿನಿ ಲಾವಣ್ಯ, ಕಾವ್ಯ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಅಭಿಯಾನದ ಎಚ್ಚರಿಕೆ: ಕೊಠಡಿಗಳೆ ಇಲ್ಲದ ಮೇಲೆ ಕಾಲೇಜು ಏಕೆ ಪ್ರಾರಂಭಿಸಬೇಕಿತ್ತು, ಈ ವರ್ಷ ಏಕೆ ವಿದ್ಯಾರ್ಥಿನಿಯರನ್ನು ದಾಖಲು ಮಾಡಿಕೊಳ್ಳಬೇಕಿತ್ತು? ಕೊಠಡಿ ನಿರ್ಮಿಸಿ ಎಂದು 5 ವರ್ಷಗಳಿಂದ ಶಾಸಕರಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಪ್ರತಿ ಬಾರಿಯು ನಮಗೆ ಭರವಸೆ ಮಾತ್ರ ದೊರೆಯುತ್ತಿದೆ ಆದರೆ ಕೊಠಡಿಗಳ ನಿರ್ಮಾಣ ಮಾತ್ರ ಆಗಿಲ್ಲ. ಇದೇ ಅವ್ಯಸ್ಥೆ ಮುಂದುವರೆದರೆ ತರಗತಿ ಬಹಿಷ್ಕರಿಸಿ, ಮಹಿಳಾ ಪದವಿ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲ, ಯಾವ ವಿದ್ಯಾರ್ಥಿಗಳು ದಾಖಲಾಗಬೇಡಿ ಎಂದು ಅಭಿಯಾನ ಆರಂಭಿಸುತ್ತೇವೆ ಎಂದು ವಿದ್ಯಾರ್ಥಿನಿಯರು ಎಚ್ಚರಿಕೆ ನೀಡಿದರು. ಧರಣಿ ನಿರತ ವಿದ್ಯಾರ್ಥಿಯರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದ ತಶೀಲ್ದಾರ್‌ ಕೆ.ವಿ. ರಾಜೀವಲೋಚನ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next