Advertisement
ವಿದ್ಯಾರ್ಥಿಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳಿಗೇ ಸಹಾಯ ಮಾಡೋದು ಹೇಗೆ? ಇದನ್ನು ತಿಳಿದು ಕೊಳ್ಳಬೇಕಾದರೆ, ತಾರುಣ್ಯ ಶಿಕ್ಷಣ ಸೇವಾ ಟ್ರಸ್ಟ್‌ನ ಕಾರ್ಯಗಳನ್ನು ನೋಡಬೇಕು. ಇವರ ಪ್ರಯತ್ನದಿಂದ, ರಾಜ್ಯದಲ್ಲಿರುವ ಸುಮಾರು 120 ಶಾಲೆಗಳು ತಮ್ಮ ಹೊರನೋಟವನ್ನು ಬದಲಾಯಿಸಿಕೊಂಡಿವೆ. “ಇದೇನು, ಶಾಲೇನಾ?’ ಅಂತ ಮೂಗು ಮುರಿಯುತ್ತಿದ್ದ ಹೆಚ್.ಡಿ ಕೋಟೆ ಬಳಿಯ ಹಾಡಿ ಶಾಲೆಯನ್ನು ತಿದ್ದಿ ತೀಡಿ ಅಂದ ಹೆಚ್ಚಿಸಿದ್ದು ಇದೇ ಟೀಂ. ಇವತ್ತು ಈ ರೀತಿ ಸುಣ್ಣ ಬಣ್ಣ ಬಳಿದಿದ್ದರಿಂದಲೇ ಎಷ್ಟೋ ಶಾಲೆಗಳಲ್ಲಿ ದಾಖಲಾತಿಗಳು ಹೆಚ್ಚಾಗಿ, “ನಮ್ಮೂರ್ ಶಾಲೆ’ ಅನ್ನೋ ಅಭಿಮಾನ ಗ್ರಾಮಸ್ಥರಿಗೆ ಮೂಡಿದೆಯಂತೆ.
Related Articles
Advertisement
ಬಣ್ಣಾ, ಬಣ್ಣಾ…: ಹೀಗೆ ಹೇಳಿದಾಕ್ಷಣ, ಎಲ್ಲ ಕೆಲಸವನ್ನೂ ವಿಕಾಸ ತಂಡವೇ ಮಾಡಿಬಿಡುತ್ತದೆ. ನಮ್ಮ ಜವಾಬ್ದಾರಿ ಏನೂ ಇಲ್ಲ ಅಂದುಕೊಳ್ಳುವ ಹಾಗಿಲ್ಲ. ಸೇವೆಗೆ ಬರುವವರಿಗೆ ಊಟ, ವಸತಿಯೊಂದಿಗೆ, ಶಾಲೆಗೆ ಬೇಕಾಗುವ ಬಣ್ಣಗಳ ಹೊಂದಿಸುವ ಜವಾಬ್ದಾರಿ ಆಯಾ ಗ್ರಾಮದ ಮುಖಂಡರದ್ದು. ನಮ್ಮ ಕೈಯಲ್ಲಿ ಆಗುವುದೇ ಇಲ್ಲ ಅನ್ನುವುದಾದರೆ, ಅದು ನಿಜವೂ ಆಗಿದ್ದರೆ ಆಗ ಟ್ರಸ್ಟ್ ಮೂಲಕ, ಇಲ್ಲವಾದರೆ ಎಲ್ಲರೂ ಸ್ವಲ್ಪ ಸ್ವಲ್ಪ ದುಡ್ಡು ಹಾಕಿ, ಬಣ್ಣ ಬಳಿದುಕೊಡುವುದೂ ಉಂಟು. ಒಂದು ಸಾರಿ ಹೀಗೆ ಬಣ್ಣ ಬಳಿದ ಮೇಲೆ, ಅದರ ಉಸ್ತುವಾರಿಯನ್ನು ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಊರಿನ ಮುಖಂಡರಿಗೆ ವಹಿಸುತ್ತಾರಂತೆ.
ಮುಳಬಾಗಿಲು ತಾಲೂಕಿನ ಮಂಚಗಾನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮೂರು ವರ್ಷದಿಂದ ಅಡ್ಮಿಷನ್ ಇರಲಿಲ್ಲ. ಪೇಯಿಂಟ್ ಬಳಿದು ಬಂದ ಮೇಲೆ, ಶಾಲೆ ನೋಡಕ್ಕೆ ಬಹಳ ಚೆನ್ನಾಗಿ ಕಾಣಲು ಶುರುವಾಯಿತು. ಆವಾಗಲಿನಿಂದ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಇದನ್ನು ನೋಡಿದವರು, ನಮ್ಮ ಶಾಲೆಗೂ ಹೀಗೆ ಮಾಡ್ಕೊಡಿ ಅಂತ ಕೇಳುತ್ತಿದ್ದಾರಂತೆ. “ಈ ಸಲ ನಾವು ಬರೀ ಶಾಲೆಗೆ ಬಣ್ಣ ಬಳಿದು ಬಂದಿಲ್ಲ. ಅವರಿಗೆ ಬೇಕಾದ ನ್ಪೋರ್ಟ್ಸ್ ಕಿಟ್, ಸೈನ್ಸ್ ಕಿಟ್ ಒಂದಷ್ಟು ಪುಸ್ತಕಗಳನ್ನು ಕೊಟ್ಟು ಬಂದಿದ್ದೀವಿ’ ಅಂತಾರೆ ತಾರುಣ್ಯ ಟ್ರಸ್ಟ್‌ನ ಅಧ್ಯಕ್ಷ ರಾಮಚಂದ್ರ ಶೆಟ್ಟಿ.
ಹೆಚ್.ಡಿ ಕೋಟೆ, ಚನ್ನರಾಯಪಟ್ಟಣ, ಕೋಲಾರ, ಮಾಲೂರು, ಮಾಗಡಿ, ಕನಕಪುರ, ಹೊಸಕೋಟೆ, ದೇವನಹಳ್ಳಿ … ಹೀಗೆ, ರಾಜ್ಯದ ನಾನಾ ಸರ್ಕಾರಿ ಶಾಲೆಗಳನ್ನು ಈಗಾಗಲೇ ರೂಪಾಂತರಿಸಿದ್ದಾರೆ. ರೂಪಾಂತರಿಸೋದು ಅಂದರೆ ಬಣ್ಣ ಬಳಿದು ಬರೋದು ಅಂತಲ್ಲ. ಕಲಾ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಠ್ಯದಲ್ಲಿರುವ ವಿಜ್ಞಾನ, ತಂತ್ರಜ್ಞಾನ ಹಾಗೂ ಪರಿಸರಕ್ಕೆ ಸಂಬಂಧಿಸಿದ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಯುವುದರಿಂದ ವಿದ್ಯಾರ್ಥಿಗಳಲ್ಲಿ ವಿಚಾರ ಮನನವಾಗುತ್ತದೆ ಅನ್ನೋದು ಇದರ ಹಿಂದಿರುವ ಉದ್ದೇಶ.
ಕೌನ್ಸೆಲಿಂಗ್: ಇವಿಷ್ಟೇ ಅಲ್ಲ, ಪ್ರಜ್ಞಾ ಅನ್ನೋ ಹೆಸರಲ್ಲಿ ಸರ್ಕಾರಿ ಶಾಲಾ ಮಕ್ಕಳ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಲು ಕೌನ್ಸೆಲಿಂಗ್ ಕೂಡ ಮಾಡುತ್ತಿದ್ದಾರೆ. ನಿಮ್ಹಾನ್ಸ್ ಜೊತೆ ಒಪ್ಪಂದ ಮಾಡಿಕೊಂಡು, ಅಲ್ಲಿಗೆ ಬರುವ ಎಂಎಸ್‌ಸಿ ಇನ್ ಸೈಕಾಲಜಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹಳ್ಳಿಗೆ ಹೋಗುತ್ತಾರೆ. ಅಲ್ಲಿನ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಗಮನಿಸಿ, ಬೇಸಿಕ್ ಸಮಸ್ಯೆ ಇದ್ದರೆ ಅಲ್ಲೇ ಪರಿಹರಿಸುತ್ತಾರೆ.
ಖಾಯಿಲೆ ಹೆಚ್ಚಿದ್ದರೆ ಅವರನ್ನು ನಿಮ್ಹಾನ್ಸ್‌ಗೆ ಕರೆ ತಂದು ಚಿಕಿತ್ಸೆ ಕೊಡಿಸುವುದುಂಟು. ಹೆಚ್ಚು ಕಮ್ಮಿ ರಾಜ್ಯದ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯದ ಸದುಪಯೋಗ ಪಡೆದು ಕೊಂಡಿದ್ದಾರಂತೆ. ಎಲ್ಲವನ್ನೂ ವಿದ್ಯಾರ್ಥಿಗಳೇ ಮಾಡುವುದು. ಇದೊಂಥರ ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗೋಸ್ಕರ, ವಿದ್ಯಾರ್ಥಿಗಳೇ ಮಾಡುವ ಸಮಾಜ ಕಾರ್ಯ. ಹೆಚ್ಚು ಕಡಿಮೆ ಐದು ಸಾವಿರಕ್ಕೂ ಹೆಚ್ಚು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ತಾರುಣ್ಯ ಟ್ರಸ್ಟ್‌ನ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಎಲ್ರೂ ಕನ್ನಡ ಶಾಲೆ ಉಳಿಸಿ, ಆಗ ಭಾಷೆ ಬದುಕುತ್ತೆ…: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಮಂಗಳೂರು- ಮಂಜೇಶ್ವರದ ಮಧ್ಯೆ ಬರುವ ಕೈರಂಗಳದ ಅನುದಾನಿತ ಶಾಲೆಯನ್ನು ಬಳಸಿಕೊಂಡಿದ್ದು. ಇಲ್ಲಿ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ 30 ದಿನಗಳ ಕಾಲ ಚಿತ್ರೀರಣ ನಡೆಯಿತು. ಆಗ ಇದ್ದ ವಿದ್ಯಾರ್ಥಿಗಳ ಸಂಖ್ಯೆ 40. ಸುತ್ತಮುತ್ತಲಿನ ಒಂದಷ್ಟು ಜನ ಶಾಲೆಯನ್ನು ಮುನ್ನಡೆಸುತ್ತಿದ್ದರು. ಈ ಶಾಲೆಯ ಮೂರು ನಾಲ್ಕು ಕಿ.ಮೀ ಸರಹದ್ದಿನಲ್ಲಿ ನಾಲ್ಕೈದು ಇಂಗ್ಲೀಷ್ ಶಾಲೆಗಳಿದ್ದವು. ಅವುಗಳ ಮಧ್ಯೆ ಸೊರಗಿದಂತೆ ಕಾಣುತ್ತಿದ್ದುದು ಸಹಿಪ್ರ ಶಾಲೆ. ರಿಷಭ್ ಶೆಟ್ಟಿ ಅವರ ಸಿನಿಮಾ ಚಿತ್ರೀಕರಣ ಮುಗಿದು, ಬಿಡುಗಡೆಯೂ ಆಗಿ ಯಶಸ್ಸು ಸಿಗುವ ಹೊತ್ತಿಗೆ ಅವರ ಕಿವಿಗೆ ಒಂದು ಸುದ್ದಿಬಿತ್ತು.
“ನೀವು ಶೂಟಿಂಗ್ ಮಾಡಿದ್ರಲ್ಲ ಆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 17 ಕ್ಕೆ ಇಳಿದಿದೆ. ಏನಾದ್ರು ಮಾಡಬೇಕಲ್ಲ’ ಅಂತ. ಆ ಹೊತ್ತಿಗೆ, ಕನ್ನಡ ಶಾಲೆಗಳನ್ನು ಉಳಿಸುವ ಅಭಿಯಾನ ಶುರುವಾಗಿತ್ತು. ಯಾವುದೇ ನಿರ್ದೇಶಕನಿಗೆ ಆಗಲಿ, ತಾನು ಚಿತ್ರೀಕರಿಸಿದ ಸ್ಥಳವೋ, ಶಾಲೆಯೋ ಏನೇ ಆಗಲಿ. ಅದರ ಬಗ್ಗೆ ಒಂದು ರೀತಿ ಮಾತೃವಾತ್ಸಲ್ಯ ಇದ್ದೇ ಇರುತ್ತದೆ. ಆ ಮಾತು ಕೇಳುತ್ತಿದ್ದಂತೆ, ಶಾಲೆಯನ್ನು ದತ್ತು ಪಡೆದರು. 10 ಲಕ್ಷ ಕೊಟ್ಟು ಶಾಲೆಯ ರೂಪ ಬದಲಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಇಂಗ್ಲಿಷ್ ಕ್ಲಾಸುಗಳನ್ನು ಏರ್ಪಾಟು ಮಾಡಿದರು. ಮಗದೊಂದು ಹೆಜ್ಜೆ ಮುಂದೆ ಇಟ್ಟು ಶಿಕ್ಷಕರನ್ನು ನೇಮಕ ಮಾಡಿ, ಶಾಲೆಯ ಉಸ್ತುವಾರಿಯನ್ನು ಇನ್ನೊಂದು ಹೆಗಲ ಮೇಲೆ ಇಟ್ಟುಕೊಂಡಿದ್ದಾರೆ.
ಈಗ ತಿಂಗಳಿಗೆ 50 ಸಾವಿರ ರೂ. ಖರ್ಚನ್ನು ಇವರೇ ನಿಭಾಯಿಸುತ್ತಿದ್ದಾರೆ. ಇವತ್ತು ಈ ಕೈರಂಗಳ ಶಾಲೆಯಲ್ಲಿ 85 ಜನ ವಿದ್ಯಾರ್ಥಿಗಳಿದ್ದಾರೆ. ಪ್ರೀ ಸ್ಕೂಲ್ ಬೇರೆ ಮಾಡಿದ್ದೇವೆ. ಈ ಶಾಲೆ ಎಂದರೆ ಒಂಥರ ಎಮೋಷನ್. ನಮಗೆ ಮಾತ್ರ ಇದ್ದರೆ ಸಾಲದು. ಆ ಶಾಲೆಯಲ್ಲಿ ಓದಿದ ಪ್ರತಿಯೊಬ್ಬ ಹಳೇ ವಿದ್ಯಾರ್ಥಿಗೂ ಇರಬೇಕು. ಇದು ಈ ಶಾಲೆಗೆ ಮಾತ್ರ ಅಂದು ಕೊಳ್ಳಬೇಡಿ. ಇವತ್ತು ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಓದಿರುವ ಪ್ರತಿಯೊಬ್ಬ ಹಳೇ ವಿದ್ಯಾರ್ಥಿಗೂ ನಮ್ಮ ಶಾಲೆ ಅನ್ನೋದು ಇದ್ದರೆ. ಎಲ್ಲ ಸರ್ಕಾರಿ ಕನ್ನಡ ಶಾಲೆಗಳೂ ಉಳಿದುಕೊಳ್ತವೆ ಎನ್ನುತ್ತಾರೆ ನಿರ್ದೇಶಕ ರಿಷಭ್ ಶೆಟ್ಟಿ.
* ಕೆ.ಜಿ.