ಯಲಹಂಕ: ಖಾಸಗಿ ಕೃಷಿ ವಿವಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿರುವುದನ್ನು ಖಂಡಿಸಿ ಗಾಂಧಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಂಗಳವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
“ಖಾಸಗಿ ಕೃಷಿ ವಿವಿ ತೆರೆಯಲು ಸರ್ಕಾರ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು. ಅಗತ್ಯವಿದ್ದರೆ ಜಿಲ್ಲೆಗೊಂದರಂತೆ ಸರ್ಕಾರವೇ ಕೃಷಿ ಕಾಲೇಜುಗಳನ್ನು ತೆರೆದು ಬಡ, ಕೃಷಿಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಿ,’ ಎಂದು ವಿದ್ಯಾರ್ತಿಗಳು ಒತ್ತಾಯಿಸಿದರು.
ವಿದ್ಯಾರ್ಥಿ ಮುಖಂಡ ರಮೇಶ್ ಮಾತನಾಡಿ “ಧಾರವಾಡ, ಬಾಗಲಕೋಟೆ, ರಾಯಚೂರು ಬೀದರ್ ಕೃಷಿ ವಿಶ್ವವಿದ್ಯಾಲಯಗಳಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಿಇಟಿ ಮೂಲಕ ಆಯ್ಕೆಯಾಗುತ್ತಿದ್ದಾರೆ. ಇದರಲ್ಲಿ ಶೇ 40 ರಷ್ಟು ಮಂದಿ ರೈತರ ಮಕ್ಕಳೇ ಆಗಿದ್ದಾರೆ. ಆದರೆ ಶಾಸಗಿ ವಿವಿಗಳಿಗೆ ಅನುಮತಿ ನೀಡಿದರೆ ಶೇ.35ರಿಂದ 40 ಅಂಕ ಪಡೆದ ಹಣವಂತರ ಮಕ್ಕಳೂ ಲಕ್ಷಾಂತರ ರೂ. ಹಣ ನೀಡಿ ಸೀಟು ಗಿಟ್ಟಿಸಿಕೊಳ್ಳುತ್ತಾರೆ. ಇಂತಹ ಪದವೀದರರಿಂದ ಕೃಷಿ ಸಮಾಜಕ್ಕೆ ತೊಂದರೆಯಾಗಲಿದೆ,’ ಎಂದರು.
ವಿದ್ಯಾರ್ಥಿ ಪ್ರವೀಣ್ ಮಾತನಾಡಿ “ಕಳೆದ 10ವರ್ಷಗಳಲ್ಲಿ ಕೃಷಿ ಇಲಾಖೆಯಲ್ಲಿ ಸರ್ಕಾರಗಳು ಸೃಷ್ಟಿಸಿದ್ದು ಕೇವಲ 580 ಹುದ್ದೆಗಳನ್ನಷ್ಟೇ. ಈ ಹುದ್ದೆಗಳಿಗೆ 28 ಸಾವಿರ ಪದವೀದರರು ಪರೀಕ್ಷೆ ಬರೆದಿದ್ದಾರೆ. ಪ್ರತಿವರ್ಷ ಒಂದೊಂದು ವಿವಿಯಿಂದ 2ಸಾವಿರ ಪದವೀದರರು ಹೊರಬರುತ್ತಿದ್ದಾರೆ. ಹೀಗಿರುವಾಗ ಖಾಸಗಿ ವಿವಿಗೆ ಅನುಮತಿ ನೀಡುವುದು ಸರಿಯಲ್ಲ,’ ಎಂದರು.
ಸ್ಥಳಕ್ಕೆ ಬಂದ ಕೃಷಿ ಸಚಿವ ಕೃಷಿ ಬೈರೇಗೌಡ ಮಾತನಾಡಿ, “ಖಾಸಗಿ ವಿವಿ ತೆರೆಯುವುದು ನನಗೂ ಇಷ್ಟವಿಲ್ಲ. ಈ ಬಗ್ಗೆ ಮುಂದಿನ ಕೃಷಿ ಸಭೆಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು,’ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.