ಬಂಟ್ವಾಳ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವತಿಯಿಂದ 2007ರಿಂದ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಪಡಿಸಿರುವ ರಾಜ್ಯ ಸರಕಾರದ ಕ್ರಮವನನು ಖಂಡಿಸಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾ ಕೇಂದ್ರದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿ.ಸಿ.ರೋಡ್‌ನ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಅನ್ನದ ಖಾಲಿ ತಟ್ಟೆಗಳನ್ನು ಬಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿಯೇ ಅನ್ಯಾಯಕ್ಕೆ ತಕ್ಕ ಶಾಸ್ತಿಯನ್ನು ನೀಡಲಿ ಎಂದು ಸಾರ್ವಜನಿಕವಾಗಿ ಶಪಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೊಂದಿಗೆ 2 ಸಂಸ್ಥೆಗಳ ನೂರಾರು ಸಿಬಂದಿಗಳು, ಪೋಷಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
ಅನ್ನ ಭಾಗ್ಯ ನೀಡುವುದಾಗಿ ಹೇಳಿದ ರಾಜ್ಯ ಸರಕಾರ, ಕಲ್ಲಡ್ಕ ಮತ್ತು ಪುಣಚ ಶಾಲೆಯ ವಿದ್ಯಾರ್ಥಿಗಳಿಗೆ ಹಸಿವಿನ ಭಾಗ್ಯ ನೀಡಿದ್ದಾರೆ. ಸಚಿವರೇ ನಿಮ್ಮ ಮನೆ ಮಗು ನಮ್ಮ ರೀತಿಯಲ್ಲೇ ಹಸಿದಿದ್ದರೆ ನೀವೇನು ಪ್ರಯತ್ನ ಮಾಡುತ್ತೀರಿ. ಬೀದಿಗಿಳಿಯದೇ ಇರುತ್ತಿದ್ದೀರಾ ಎಂದು ವಿದ್ಯಾರ್ಥಿಗಳ ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ರಾಜಕೀಯ ದ್ವೇಷಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಕುಮ್ಮಕ್ಕಿನಿಂದ ಅನ್ನದಾನದ ಅನುದಾನ ನಿಲುಗಡೆ ನಡೆದಿದೆ. ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯ ನಂತರ ಇಂತಹ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ ಎಂದರು.
ಶಾಲಾ ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡಬಾರದು
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿಯೊಬ್ಬರ ಪೋಷಕ ಅಬ್ದುಲ್ ಹಕೀಂ ಶಾಲಾ ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡಬಾರದು. ಅನ್ನವನ್ನು ಕಸಿದುಕೊಳ್ಳುವ ಕೆಲಸ ಮಾಡುವುದು ರಾಕ್ಷಸರು ಮಾತ್ರ ಎಂದು ನಮ್ಮ ಮಕ್ಕಳು ಇದೇ ಶ್ರೀರಾಮ ವಿದ್ಯಾಕೇಂದ್ರಕ್ಕೆ ಹೋಗುತ್ತಾರೆ.
ಇಲ್ಲಿ ಜಾತಿ ಭೇದವಿಲ್ಲದೆ ಸಹಬಾಳ್ವೆ ಇದೆ. ಉಚಿತ ಶಿಕ್ಷಣ, ಸಮವಸ್ತ್ರ, ಅನ್ನ ಸಿಗುತ್ತದೆ. ಅನ್ನದಾನದ ಅನುದಾನವನ್ನು ನಿಲುಗಡೆ ಮಾಡಿರುವುದು ಯಾಕೆ ಎಂಬುದು ಸ್ಪಷ್ಟವಾಗುವುದಿಲ್ಲ . ರಾಜಕೀಯ ಏನೇ ಇದ್ದರೂ ಮಕ್ಕಳ ಹೊಟ್ಟೆಗೆ ಹೊಡೆಯುವ ಕೆಲಸ ಆಗಬಾರದು. ರಾಜ್ಯಸರಕಾರದ ಆದೇಶವನ್ನು ಪುನರ್ ಪರಿಶೀಲಿಸಿ ಅನ್ನದಾನದ ಅನುದಾನ ನೀಡುವ ಕೆಲಸ ಆಗಲಿ ಎಂದರು.
ಆರ್‌ಎಸ್‌ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಸೇರಿರುವ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾ ಕೇಂದ್ರ ಪ್ರೌಢ ಶಾಲೆ ಯನ್ನು 2007ರ ಜೂನ್ 20ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ದತ್ತು ತೆಗೆದು ಕೊಂಡಿತ್ತು.