Advertisement

ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ: ತನಿಖೆ ಚುರುಕು

08:25 AM Jul 31, 2017 | Team Udayavani |

ಮಂಗಳೂರು: ಮೂಡಬಿದಿರೆಯ ಆಳ್ವಾಸ್‌ ವಿದ್ಯಾ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವಿನ ಕುರಿತ ತನಿಖೆಯನ್ನು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ರಾಜೇಂದ್ರ ಡಿ.ಎಸ್‌. ನೇತೃತ್ವದ ಪೊಲೀಸರ ತಂಡ ಚುರುಕುಗೊಳಿಸಿದೆ.

Advertisement

ಪೊಲೀಸರು ರವಿವಾರ ಕಟೀಲು ಸಮೀಪದ ದೇವರಗುಡ್ಡೆಯಲ್ಲಿರುವ ಕಾವ್ಯಾ ಮನೆಗೆ ತೆರಳಿ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದುಕೊಂಡರು.

ಎಸಿಪಿ ರಾಜೇಂದ್ರ ಡಿ.ಎಸ್‌. ಮತ್ತು ಮೂಡಬಿದಿರೆ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ರಾಮಚಂದ್ರ ಹಾಗೂ ಸಿಬಂದಿ ಇಡೀ ದಿನ ಕಾವ್ಯಾ ಮನೆಯಲ್ಲಿದ್ದು, ಆಕೆಯ ತಂದೆ ಲೋಕೇಶ್‌ ಪೂಜಾರಿ ಮತ್ತು ತಾಯಿ ಬೇಬಿ ಅವರನ್ನು ವಿಚಾರಣೆಗೆ ಒಳಪಡಿಸಿದರು. ರವಿವಾರ ಬೆಳಗ್ಗೆ ಪ್ರಾರಂಭಗೊಂಡ ವಿಚಾರಣೆ ಸಂಜೆ ವರೆಗೆ ಮುಂದುವರಿದಿತ್ತು ಎನ್ನಲಾಗಿದೆ.

ಕಾವ್ಯಾ ಸಾವು ಪ್ರಕರಣದ ತನಿಖೆ ಸಂಬಂಧ ಉದಯವಾಣಿಗೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರು “ಪ್ರಕರಣದ ತನಿಖೆಯನ್ನು ಈಗಾಗಲೇ ಎಸಿಪಿ ರಾಜೇಂದ್ರ ಡಿ.ಎಸ್‌. ಅವರಿಗೆ ವಹಿಸಲಾಗಿದೆ. ರವಿವಾರ ಎಸಿಪಿ ಮತ್ತು ಮೂಡಬಿದಿರೆ ಪೊಲೀಸ್‌ ಇನ್ಸ್‌ ಪೆಕ್ಟರ್‌ ರಾಮಚಂದ್ರ ನೇತೃತ್ವದ ಪೊಲೀಸರ ತಂಡ ಕಟೀಲಿಗೆ ತೆರಳಿ ಕಾವ್ಯಾ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿ ಅವರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಮುಂದೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗೆ ಸಂಬಂಧಪಟ್ಟವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ತಿಳಿಸಿದರು. 

ಕಾವ್ಯಾ ಮೃತ ದೇಹದ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ; ಅದು ಲಭಿಸಿದ ಬಳಿಕ ಕಾವ್ಯಾ ಸಾವಿಗೆ ನೈಜ ಕಾರಣವೇನೆಂದು ತಿಳಿದು ಬರಲಿದೆ ಎಂದು ಆಯುಕ್ತರು ವಿವರಿಸಿದರು.

Advertisement

ಗಣ್ಯರ ಭೇಟಿ
ಈ ನಡುವೆ ರವಿವಾರ ಕಟೀಲು ದೇವರಗುಡ್ಡೆಯಲ್ಲಿರುವ ಕಾವ್ಯಾ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಅನೇಕ ಮಂದಿ ಗಣ್ಯರು ಭೇಟಿ ನೀಡಿ ಆಕೆಯ ಹೆತ್ತವರನ್ನು ಸಂತೈಸಿದರು.

ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕರಾದ ಕೆ. ಅಭಯಚಂದ್ರ ಜೈನ್‌ ಮತ್ತು ಶಕುಂತಳಾ ಶೆಟ್ಟಿ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಬಿಲ್ಲವ ಮಹಾ ಮಂಡಲದ ಮುಖಂಡ ಹರಿಕೃಷ್ಣ ಬಂಟ್ವಾಳ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ ಅವರು ಮನೆಗೆ ಭೇಟಿ ನೀಡಿದವರಲ್ಲಿ ಪ್ರಮುಖರು.

10,000 ರೂ. ಚೆಕ್‌ ವಿತರಣೆ
ಬಿಲ್ಲವ ಮಹಾ ಮಂಡಲದ ಮಾಜಿ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರು ಕಾವ್ಯಾ ಹೆತ್ತವರಿಗೆ ವೈಯಕ್ತಿಕ ನೆಲೆಯಲ್ಲಿ 10,000 ರೂ. ನೆರವಿನ ಚೆಕ್‌ ನೀಡಿದರು. ನಿಷ್ಪಕ್ಷ ತನಿಖೆ ನಡೆಸಿ ಕಾವ್ಯಾ ಸಾವಿನ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ

ತನಿಖೆಗೆ ಸೂಚನೆ: ರೈ
ಸಾವಿನ ಕುರಿತಂತೆ ಅನುಮಾನ ಇರುವುದರಿಂದ ಈ ಬಗ್ಗೆ ತನಿಖೆ ನಡೆಯ ಬೇಕಾಗಿದೆ. ತನಿಖೆ ನಡೆಸುವಂತೆ ಪೊಲೀಸ್‌ ಆಯುಕ್ತರಿಗೆ ಸೂಚಿಸಲಾ ಗಿದೆ. ಕಾವ್ಯಾ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಚಿವ ರಮಾನಾಥ ರೈ ತಿಳಿಸಿದರು. 

ಪರಿಹಾರ ನೀಡಲಿ: ಶ್ರೀರಾಮ ರೆಡ್ಡಿ
ಕಾವ್ಯಾ ಕುಟುಂಬಕ್ಕೆ ಸರಕಾರ ಮತ್ತು ಆಳ್ವಾಸ್‌ ವಿದ್ಯಾ ಸಂಸ್ಥೆ ಪರಿಹಾರ ಒದಗಿಸಬೇಕೆಂದು ಶ್ರೀರಾಮ ರೆಡ್ಡಿ ಆಗ್ರಹಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಶಂಕಾಸ್ಪದ ಸಾವು ಮತ್ತು ಕೊಲೆ ಪ್ರಕರಣಗಳು ನಡೆಯುತ್ತಿದ್ದು, ಇವುಗಳ ತನಿಖೆಗೆ ವಿಶೇಷ ತಂಡವನ್ನು ರಚಿಸುವಂತೆ ಮುಖ್ಯಮಂತ್ರಿ ಜತೆ ಮಾತನಾಡುವುದಾಗಿ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next