ಬೆಂಗಳೂರು: ದೊಡ್ಡೇನಹಳ್ಳಿ ಬಳಿಯಿರುವ ಕಲ್ಲುಕ್ವಾರಿ ಹೊಂಡದಲ್ಲಿ ಈಜಲು ಇಳಿದಿದ್ದ ಕೇರಳ ಮೂಲದ ವಿದ್ಯಾರ್ಥಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಅಖೀಲ್ (19) ಮೃತ ವಿದ್ಯಾರ್ಥಿ.
ಕೆ. ನಾರಾಯಣಪುರದ ಕ್ರಿಸ್ತಜಯಂತಿ ಕಾಲೇಜಿನಲ್ಲಿ ಬಿಬಿಎ ಮೂರನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ಅಖೀಲ್, ಗುರುವಾರ ಕಾಲೇಜಿಗೆ ರಜೆಯಿದ್ದ ಕಾರಣ ತನ್ನ ಮೂವರು ಸ್ನೇಹಿತೆಯರ ಜೊತೆ ಹೊರಗಡೆ ಸುತ್ತಾಡಲು ಕ್ಯಾಬ್ ಮಾಡಿಕೊಂಡು ದೊಡ್ಡೇನಹಳ್ಳಿಯ ಕಲ್ಲುಕ್ವಾರಿಗಳ ಬಳಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ತೆರಳಿದ್ದರು.
ನಾಲ್ವರು ಅಲ್ಲಿ ಕೆಲಕಾಲ ಸುತ್ತಾಡಿ ಸೆಲ್ಫಿà ಪೋಟೋ ತೆಗೆದುಕೊಂಡಿದ್ದಾರೆ. ಬಳಿಕ ತನ್ನ ಸ್ನೇಹಿತೆಯರಿಗೆ ನಾನು ಈಜಾಡುತ್ತಾನೆ ಎಂದು ಹೇಳಿದ ಅಖೀಲ್, ಜರ್ಕಿನ್,ಬಟ್ಟೆ ಮೊಬೈಲ್ ಎಲ್ಲ ಅವರ ಕೈಗೆ ಕೊಟ್ಟು ನೀರಿಗೆ ಧುಮುಕಿ ಕೆಲ ನಿಮಿಷ ಈಜಾಡಿ ಬಳಿಕ ಸುಸ್ತಾಗಿ ಮುಳುಗಿದ್ದು ಮತ್ತೆ ಹೊರಗೆ ಬಂದಿಲ್ಲ. ಇದರಿಂದ ಗಾಬರಿಯಾದ ಸ್ನೇಹಿತೆಯರು ರಸ್ತೆಗೆ ಓಡಿಬಂದು ಕೆಲವರನ್ನು ಸಹಾಯಕ್ಕೆ ಕರೆತಂದಿದ್ದಾರೆ.
ಆದರೆ ಸಹಾಯಕ್ಕೆ ಬಂದವರು ನೀರಿಗೆ ಧುಮುಕಿ ಹುಡುಕಾಡಿ ಹೊರತೆಗೆಯುವಷ್ಟರಲ್ಲಿ ಅಖೀಲ್ ಮೃತಪಟ್ಟಿದ್ದ. ಘಟನೆ ಬಗ್ಗೆ ಅಖೀಲ್ ಸ್ನೇಹಿತೆಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಕ್ಯಾಬ್ ಮಾಡಿಕೊಂಡು ಸ್ಥಳಕ್ಕೆ ಬಂದಿದ್ದೆವು.ಸೆಲ್ಫಿ ಫೋಟೋ ತೆಗೆದುಕೊಂಡ ಬಳಿಕ ನಾವು ಬೇಡ ಎಂದರೂ ಅಖೀಲ್ ನೀರಿಗೆ ಈಜಲು ಇಳಿದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೇರಳ ಮೂಲದ ಅಖೀಲ್ ಪೋಷಕರು ಹಲವು ವರ್ಷಗಳಿಂದ ಜಾಲಹಳ್ಳಿಯಲ್ಲಿ ವಾಸವಿದ್ದು ಸ್ವಂತ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಅಖೀಲ್ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ.