Advertisement

ಕ್ರೀಡಾ ಸಾಧನೆ ಮಾಡುವುದಾಗಿ ಪತ್ರ ಬರೆದಿಟ್ಟು ವಿದ್ಯಾರ್ಥಿಗಳು ನಾಪತ್ತೆ

09:57 AM Oct 11, 2021 | Team Udayavani |

ಬೆಂಗಳೂರು: “ತಮಗೆ ಓದಿನಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಕ್ರೀಡೆಯಲ್ಲಿ ಉತ್ತಮ ಹೆಸರು, ಹಣ ಸಂಪಾದಿಸಿ ವಾಪಸ್‌ ಬರುತ್ತೇವೆ’ ಎಂದು ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ.  ಇದೇ ವೇಳೆ 21 ವರ್ಷದ ಬಿಸಿಎ ವಿದ್ಯಾರ್ಥಿನಿಯೊಬ್ಬರು ಮೂವರು ಮಕ್ಕಳ ಜತೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಗಲಗುಂಟೆ ಮತ್ತು ಸೋಲ ದೇವನಹಳ್ಳಿ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕಣಗಳು ದಾಖಲಾಗಿವೆ.

Advertisement

ಅಪ್ಪ-ಅಮ್ಮ ಹುಡುಕಬೇಡಿ!: ಹೆಸರುಘಟ್ಟ ರಸ್ತೆಯಲ್ಲಿರುವ ಸೌಂದರ್ಯ ಲೇಔಟ್‌ನಲ್ಲಿ ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಪರೀಕ್ಷಿತ್‌, ನಂದನ್‌ ಮತ್ತು

ಕಿರಣ್‌ ನಾಪತ್ತೆಯಾದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಎಲ್ಲರೂ 15ರ ವಯೋಮಾನದವರಾಗಿದ್ದು, ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾರೆ.

ಶನಿವಾರ ಬೆಳಗ್ಗೆ ಮೂವರು ಮನೆಯಿಂದ ಹೊರಗಡೆ ಹೋದವರು ಸಂಜೆ ಯಾದರೂ ಮನೆಗೆ ಬಂದಿಲ್ಲ. ಅದರಿಂದಗಾಬರಿಗೊಂಡ ಪೋಷಕರು ಬಸ್‌ ನಿಲ್ದಾಣ, ಪಾರ್ಕ್‌, ರೈಲು ನಿಲ್ದಾಣ ಹಾಗೂ ಸ್ನೇಹಿತರು, ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಪತ್ತೆಯಾಗಿಲ್ಲ. ನಂತರ ಬಾಗಲಗುಂಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸಂಬಂಧ ಮನೆಗಳಿಗೆ ಬಂದ ಪೊಲೀಸರು ಶೋಧ ನಡೆಸಿದಾಗ ಪತ್ರಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪತ್ರದಲ್ಲಿ ಏನಿದೆ?: ಮೂವರು ಪ್ರತ್ಯೇಕವಾಗಿ ಪತ್ರಗಳನ್ನು ಬರೆದಿದ್ದು, ಎಲ್ಲ ಪತ್ರದಲ್ಲಿ ಒಂದೇ ವಾಕ್ಯಗಳನ್ನು ಉಲ್ಲೇಖೀಸಲಾಗಿದೆ. “ತಮಗೆ ಓದಿಗಿಂತ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಿದೆ. ನೀವುಗಳು ಓದುವಂತೆ ಒತ್ತಾಯ ಮಾಡಿದರೂ ನಮಗೆ ಓದಿನಲ್ಲಿ ಆಸಕ್ತಿ ಇಲ್ಲ. ಕ್ರೀಡೆಯಲ್ಲೇ ಹೊಸ ಜೀವನ ರೂಪಿಸಿಕೊಳ್ಳುತ್ತೇವೆ. ಕ್ರೀಡೆ ಎಂದರೆ ಕಬಡ್ಡಿ ತುಂಬ ಇಷ್ಟ. ಅದರಲ್ಲೇ ಉತ್ತಮ ಹೆಸರು, ವೃತ್ತಿ ಹಾಗೂ ಹಣ ಸಂಪಾದಿಸುತ್ತೇವೆ. ಸಾಧನೆ ಮಾಡಿ ಮತ್ತೆ ವಾಪಸ್‌ ಬರುತ್ತೇವೆ. ಅಪ್ಪ-ಅಮ್ಮ ದಯವಿಟ್ಟು ಹುಡುಕ ಬೇಡಿ.’ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

Advertisement

ಪ್ರಕರಣ ದಾಖಲಿಸಿಕೊಂಡು ಮನೆಗಳ ಸಮೀಪದ ಸಿಸಿ ಕ್ಯಾಮೆರಾ ಮತ್ತು ಸ್ಥಳೀಯ ಮಾಹಿತಿ ಆಧರಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಅಪಾರ್ಟ್‌ಮೆಂಟ್‌ನಿಂದ ನಾಲ್ವರು ಕಣ್ಮರೆ-

ಎಜಿಬಿ ಲೇಔಟ್‌ನ ಕ್ರಿಸ್ಟಲ್‌ ಅಪಾರ್ಟ್‌ಮೆಂಟ್‌ನ 21 ವರ್ಷದ ಬಿಸಿಎ ವಿದ್ಯಾರ್ಥಿ ಸೇರಿ ನಾಲ್ವರು ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಬಿಸಿಎ 3ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಮೃತ ವರ್ಷಿಣಿ(21) ಮತ್ತು ರಾಯನ್‌ ಸಿದ್ದಾರ್ಥ್(12), ಚಿಂತನ್‌(12), ಭೂಮಿ(12) ನಾಪತ್ತೆಯಾಗಿದ್ದಾರೆ. ಬಾನುವಾರ ಬೆಳಗ್ಗೆ ನಾಲ್ವರು ಪೋಷಕರಿಗೆ ಮಾಹಿತಿ ನೀಡದೆ ಮನೆಯಿಂದ ಹೋಗಿದ್ದಾರೆ.

ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಮಧ್ಯೆ ಮನೆಗಳಲ್ಲಿ ಚೀಟಿಯೊಂದು ಪತ್ತೆಯಾಗಿದೆ. ಈ ಚೀಟಿಯಲ್ಲಿ ಚಪ್ಪಲಿ, ಬ್ರಷ್‌, ಟೂತ್‌ಪೇಸ್ಟ್‌, ನೀರಿನ ಬಾಟಲ್‌, ನಗದು ಮತ್ತು ಕ್ರೀಡಾ ವಸ್ತುಗಳು ಹಾಗೂ ಇತರೆ ವಸ್ತುಗಳನ್ನುಕೊಂಡೊಯ್ಯಬೇಕೆಂದು ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಮೂವರು ಮಕ್ಕಳು ಯಾವಾಗಲೂ ಅಮೃವರ್ಷಿಣಿ ಜತೆಯೇ ಹೆಚ್ಚು ಸಮಯ ಕಳೆಯುತ್ತಿದ್ದರು. ಹೀಗಾಗಿ ಆಕೆಯೇ ಮಕ್ಕಳನ್ನು ಕರೆದೊಯ್ದಿರುವ ಸಾಧ್ಯತೆಗಳಿವೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಶೋಧ ಕಾರ್ಯ ಮುಂದುವರಿದೆ.

Advertisement

Udayavani is now on Telegram. Click here to join our channel and stay updated with the latest news.

Next