ಸಿಂಧನೂರು: ರೈತರು ಬೆಳೆದ ಸಂಪೂರ್ಣ ಜೋಳ ಖರೀದಿಗೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ಸಿಂಧನೂರು ನಗರಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಶೀಘ್ರವೇ ಪಕ್ಷಾತೀತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಖರೀದಿ ಮಿತಿ ತೆಗೆಯುವುದಕ್ಕೆ ಸಂಬಂಧಿಸಿ ಕಳೆದ ಗುರುವಾರ ನಡೆದ ಕೃಷಿ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪಸಮಿತಿಯಲ್ಲಿ ವಾರದ ಬಳಿಕ ನಿರ್ಧಾರ ಎನ್ನಲಾಗಿತ್ತು. ವಾರ ಕಳೆದು ಹೋಗಿದೆ. ಆದರೂ, ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದನ್ನು ಖಂಡಿಸಿ ಹೋರಾಟ ನಡೆಸಲಾಗುವುದು ಎಂದರು.
ನೇಮಕಾತಿಯಲ್ಲಿ ಅನ್ಯಾಯ: ಪಿಎಸ್‌ಐ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಭಾಗದಲ್ಲಿ ಶಿಕ್ಷಣ ಹಾಗೂ ಉದ್ಯೋಗ ಸಿಗಲಿ ಎನ್ನುವ ಮಹೋನ್ನತ ಉದ್ದೇಶದಿಂದ ಕಾಂಗ್ರೆಸ್ 371(ಜೆ) ಅನುಷ್ಠಾನಕ್ಕೆ ತಂದಿತ್ತು. ಸರಕಾರದ ನೇಮಕಾತಿ ನಿಮಯಗಳಿಂದ ಈ ಭಾಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಒತ್ತಾಯಿಸಿ ಸಿಎಂ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.
ಸ್ಮಶಾನದಲ್ಲಿ ನಿರ್ಮಾಣ ಬೇಡ
ಕಲ್ಲೂರು ಬಳಿಯ ಸ್ಮಶಾನದಲ್ಲಿ ಹಿರಿಯರ ಆತ್ಮಗಳಿವೆ. ಅಂತಹ ಜಾಗದಲ್ಲಿ ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣ ಸರಿಯಲ್ಲ. ಹಿರಿಯ ಆತ್ಮಗಳಿಗೆ ಇದರಿಂದ ನೋವಾಗುತ್ತದೆ. ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ನೂತನವಾಗಿ ನೇಮಕವಾದ ಅಸಂಘಟಿತ ಕಾರ್ಮಿಕರ ವಿಭಾಗದ ಕಾಂಗ್ರೆಸ್ ಘಟಕದ ನಗರ ಅಧ್ಯಕ್ಷ ನಿರುಪಾದಿ ಗೋಮರ್ಸಿ, ಗ್ರಾಮೀಣ ಬ್ಲಾಕ್‌ನ ಅಧ್ಯಕ್ಷರಾಗಿ ರಾಜಾ ಹುಸೇನ ಗಾಂಧಿ ನಗರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.