Advertisement

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡದಿದ್ದರೆ ಹೋರಾಟ: ಸಿದ್ದರಾಮಯ್ಯ ಎಚ್ಚರಿಕೆ

09:34 PM Jun 17, 2020 | Sriram |

ಬೆಂಗಳೂರು: ರಾಜ್ಯ ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿರುವುದನ್ನು ಕೈ ಬಿಡುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸರ್ಕಾರ ತಿದ್ದುಪಡಿ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಜೂನ್‌ 11 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಸೆಕ್ಷನ್‌ 79 ಎ, ಬಿ, ಸಿ ಮತ್ತು 80ನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸುವುದು ಹಾಗೂ ಪ್ರಸ್ತುತ ಬಾಕಿ ಉಳಿದಿರುವ 79ಎ ಮತ್ತು 79ಬಿ ಪ್ರಕರಣಗಳನ್ನು ವಜಾ ಮಾಡುವುದು. ಸೆಕ್ಷನ್‌ 63 ರಡಿ ವ್ಯಕ್ತಿಗೆ ಅಥವಾ ಒಂದು ಕುಟುಂಬ ಕೃಷಿ ಭೂಮಿ ಹೊಂದಬಹುದಾದ ಪ್ರಮಾಣವನ್ನು 10 ಯುನಿಟ್ಟಿನಿಂದ ಗರಿಷ್ಠ 40 ಯುನಿಟ್ಟಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಕೇರಳದಲ್ಲಿ ಕುಟುಂಬವೊಂದು ಗರಿಷ್ಠ 20 ಎಕರೆ ಭೂಮಿಯನ್ನು ಹೊಂದಬಹುದು. ತಮಿಳುನಾಡಿನಲ್ಲಿ 30 ಎಕರೆ, ಆಂಧ್ರಪ್ರದೇಶದಲ್ಲಿ 54 ಎಕರೆ, ಬಿಹಾರದಲ್ಲಿ 45 ಎಕರೆ ಭೂಮಿ ಹೊಂದಬಹುದಾಗಿದೆ.ಆದರೆ ಕರ್ನಾಟಕದಲ್ಲಿ 216 ಎಕರೆ ಭೂಮಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಅಕ್ಕಪಕ್ಕದ ಎಲ್ಲಾ ರಾಜ್ಯಗಳಲ್ಲಿ ತೋಟದ ಭೂಮಿ 10 ಎಕರೆ ಹೊಂದಬಹುದಾದರೆ, ನಮ್ಮಲ್ಲಿ 56 ಎಕರೆ ಮತ್ತು ನೀರಾವರಿ ಭೂಮಿಯನ್ನು 80 ಎಕರೆಯವರೆಗೆ ಹೊಂದಲು ಅವಕಾಶ ಮಾಡಲು ಹೊರಟಿರುವುದಾಗಿ ತಿಳಿದು ಬಂದಿದೆ ಇದರಿಂದಾಗಿ ನೀರಾವರಿ ಭೂಮಿಯು ಬಂಡವಾಳಶಾಹಿಗಳ ಪಾಲಾಗುತ್ತದೆ.

ರಾಜ್ಯ ಸರ್ಕಾರ ಬಂಡವಾಳ ಆಕರ್ಷಿಸಲು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದಾಗಿ ಹೇಳುತ್ತಿದೆ. ಇದರಿಂದ ಬಂಡವಾಳ ಶಾಹಿಗಳು ಭೂಮಿಯನ್ನು ಖರೀದಿಸಿ ಸಣ್ಣ ರೈತರು ಭೂಮಿಯನ್ನು ಕಳೆದುಕೊಂಡು ಏಕಸ್ವಾಮ್ಯತೆ ಉಂಟಾಗುತ್ತದೆ. ಇದರಿಂದ ಸಮಾಜದಲ್ಲಿ ಉಳ್ಳವರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಬದಲು, ಜನ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗುವ ಮೂಲಕ ಕೃಷಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿವೆ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ನಿರ್ಬಂಧಿಸಲಾಗಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಜನವಿರೋಧ ಕಾಯ್ದೆಗಳನ್ನು ಜಾರಿಗೆ ತರುವ ದುಷ್ಟತನವನ್ನು ಕೇಂದ್ರ, ರಾಜ್ಯ ಸರ್ಕಾರಗಳೆರಡು ಮಾಡುತ್ತಿವೆ. ಸರ್ಕಾರಗಳು ಕೊರೋನ ಸಮಸ್ಯೆಯನ್ನು ಬಗೆ ಹರಿಸುವ ಬದಲು ಇಂಥ ಘಾತುಕ ಕೃತ್ಯ ಮಾಡಲು ಹೊರಟರೆ ನಿಮ್ಮನ್ನು ರಕ್ಷಕರೆನ್ನಲಾದೀತೆ? ಕೇಂದ್ರ ರಾಜ್ಯ ಸರ್ಕಾರಗಳು ಜನರ ಸಂಕಷ್ಟವನ್ನು ದುರುಪಯೋಗ ಮಾಡಿಕೊಂಡು ಬೆನ್ನಲ್ಲಿ ಚೂರಿ ಇರಿಯುವ ಕೃತ್ಯವನ್ನು ನಿಲ್ಲಿಸಿ, ಈಗ ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ರದ್ದು ಪಡಿಸದಿದ್ದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಜನರ ಚಳುವಳಿಯನ್ನು ಪ್ರಾರಂಭಿಸಬೇಕಾದ ಅನಿವಾರ್ಯತೆ ಸೃಷಿಯಾಗುತ್ತದೆ ಎಂದು ಸಿದ್ದರಾಮಯ್ಯ ಪತ್ರದ ಮೂಲಕ ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next