Advertisement

ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಹೋರಾಟ

09:17 PM Nov 04, 2019 | Team Udayavani |

ಹುಣಸೂರು: ನಗರಾದ್ಯಂತ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿರುವುದರ ವಿರುದ್ಧ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಕಾಲಮಿತಿಯೊಳಗೆ ಕೆಲಸವಾಗದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಮಹದೇವ್‌ ಫೌಂಡೇಶನ್‌ ಅಧ್ಯಕ್ಷ ಎಚ್‌.ವೈ.ಮಹದೇವ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾವು ನಗರಸಭೆ ಅಧ್ಯಕ್ಷರಾಗಿದ್ದ ವೇಳೆ ವಿವಿಧ ಯೋಜನೆಯಡಿ ಮಂಜೂರಾಗಿದ್ದ ಕಾಮಗಾರಿ ನನೆಗುದಿಗೆ ಬಿದ್ದಿವೆ. ನಗರೋತ್ಥಾನ ಯೋಜನೆಯಡಿ ನಗರದ ಹತ್ತಾರು ರಸ್ತೆಗಳ ಹಾಗೂ ಸಂತೆ ಮೈದಾನದ ರಸ್ತೆ ಸೇರಿ ವಿವಿಧ ಅಭಿವೃದ್ಧಿಗಾಗಿ ಜಲ್ಲಿ ಹರಡಿ 6 ತಿಂಗಳು ಕಳೆದಿದ್ದರೂ ಕಾಮಗಾರಿ ಆರಂಭಿಸದೆ ನಿವಾಸಿಗಳು, ವಾಹನ ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆಂದು ಆರೋಪಿಸಿದರು.

ಇದೀಗ ನಗರಸಭೆ ಚೆನಾವಣೆ ನನೆಗುದಿಗೆ ಬಿದ್ದಿದ್ದರೆ ,ಮತ್ತೊಂದೆಡೆ ಶಾಸಕರಿಲ್ಲದಿರುವುದರಿಂದ ನಗರಸಭೆಯಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಯಾವ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯವಾಗಿ ನಗರದ ಹಲವಾರು ಬಡಾವಣೆಗಳಲ್ಲಿ ವಾರಕ್ಕೊಮ್ಮೆ ನೀರು ಬಿಡುವ ಸ್ಥಿತಿ ಇದ್ದರೆ, ಕೆಲವೆಡೆ ಕೊಳಚೆ ನೀರನ್ನೇ ಪೂರೈಸಲಾಗುತ್ತಿದ್ದು, ತಕ್ಷಣವೇ ಸರಿಪಡಿಸಬೇಕು, ನಗರಸಭೆ ವತಿಯಿಂದ ಆಯ್ಕೆಯಾಗಿರುವ ವಿಕಲ ಚೇತನರಿಗೆ ತ್ರಿಚಕ್ರ ವಾಹನ ಶೀಘ್ರ ವಿತರಿಸಲು ಕ್ರಮವಹಿಸಬೇಕು, ಕಳೆದ 18 ವರ್ಷಗಳಿಂದ ನಿವೇಶನ ವಿತರಿಸದೆ ನಿವಾಸಿಗಳು ವಾಸಕ್ಕೆ ಸ್ಥಳವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ನಿವೇಶನ ವಿತರಣೆ ಹಾಗೂ ಮನೆ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಬೇಕು. ಕಳೆದ 20 ವರ್ಷಗಳಿಂದ ನರಸಿಂಹಸ್ವಾಮಿ ತಿಟ್ಟು ಬಡಾವಣೆ ಮತ್ತಿತರ ಕಡೆಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಅಧಿಕೃತಗೊಳಿಸಿ,ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.

Advertisement

ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ತಾಣವಾಗಿದ್ದು, ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ, ಅಶುಚಿತ್ವ ತಾಂಡವವಾಡುತ್ತಿದೆ. ಅಗತ್ಯದಷ್ಟು ಸಿಬ್ಬಂದಿಗಳ ಕೊರತೆ ಇದೆ, ಭರ್ತಿ ಮಾಡಲು ಕ್ರಮವಹಿಸಬೇಕು, ತಾಲೂಕಿನ ಹಲವು ಮಾರ್ಗಗಳಿಗೆ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು-ವಿದ್ಯಾರ್ಥಿಗಳು ಪರದಾಡುತ್ತಿದ್ದು, ಬಸ್‌ ವ್ಯವಸ್ಥೆ ಕಲ್ಪಿಸಬೇಕು, ಮುಂದೆಯೂ ಇಂತಹ ಜನಪರ ಹೋರಾಟ ರೂಪಿಸುವ ಜೊತೆಗೆ ವಿದ್ಯಾರ್ಥಿಗಳು, ಅಸಹಾಯಕರ ನೆರವಿಗೆ ನಿಲ್ಲುವುದಾಗಿ ತಿಳಿಸಿದರು.

ಜಿಲ್ಲಾ ಕೇಂದ್ರವಾಗಲಿ: ಹುಣಸೂರು ಉಪ ವಿಭಾಗ ಕೇಂದ್ರವಾಗಿದ್ದು, ಜಿಲ್ಲಾ ಕೇಂದ್ರವನ್ನಾಗಿಸಿದಲ್ಲಿ ಹಲವಾರು ಕೈಗಾರಿಕೆಗಳು, ಜಿಲ್ಲಾ ಕಚೇರಿಗಳು ಬರಲಿದೆ, ದೂರದ ತಾಲೂಕುಗಳಿಂದ ಮೈಸೂರಿಗೆ ತೆರಳಲು ಅನಾನುಕೂಲವಾಗುತ್ತಿದೆ. ಒಟ್ಟಾರೆ ಹುಣಸೂರಿನ ಪ್ರಗತಿಗೆ ಪೂರಕವಾಗಿದ್ದು, ಜಿಲ್ಲೆಯನ್ನಾಗಿಸಲಿ ಎಂದರು. ಫೌಂಡೇಶನ್‌ ಕಾರ್ಯದರ್ಶಿ ಬಸವರಾಜು, ಉದಯಕುಮಾರ್‌, ರೇಷ್ಮಾಬಾನು, ಉದಯಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next