ಯಳಂದೂರು: ತಾಲೂಕಿನ 12 ಗ್ರಾಮ ಪಂಚಾಯಿತಿಗಳಿಗೆ ಮತದಾನ ಪೂರ್ಣಗೊಂಡಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಿರುವ ಸ್ಟ್ರಾಂಗ್ ರೂಮಿನಲ್ಲಿ ಮತಪೆಟ್ಟಿಗೆಗಳನ್ನು ಜೋಪಾನ ಮಾಡಲಾಗಿದೆ. ಇದಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
189 ಕ್ಷೇತ್ರಗಳಿಗೆ 11 ಅಭ್ಯರ್ಥಿಗಳು ಅವಿರೋಧ ಹಾಗೂ ಸಾಮಾನ್ಯ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಇನ್ನುಳಿದ ಕ್ಷೇತ್ರಗಳಿಂದ ಒಟ್ಟು 494 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಭಾನುವಾರ ರಾತ್ರಿ ಎಲ್ಲಾ ಮತಪೆಟ್ಟಿಗೆಗಳು ಸ್ಟ್ರಾಂಗ್ ರೂಂನಲ್ಲಿ ಸೇರಿ ಇದಕ್ಕೆ ಸರತಿಯಂತೆ ಪೊಲೀಸ್ ಪಾಳಿಯಲ್ಲಿ ಕಾವಲನ್ನು ಹಾಕಲಾಗಿದೆ.
ಮತ ಎಣಿಕೆಗೆ ಸಿದ್ಧತೆ: ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರು ಕೊಠಡಿಗಳಲ್ಲಿ ಎಣಿಕೆಗೆ ಈಗಾಗಲೇ ಮೆಷ್‌ಗಳನ್ನು ಅಳವಡಿಸಲು ಸಿದ್ಧತೆ ನಡೆದಿದೆ. ಒಟ್ಟು 24 ಟೇಬಲ್‌ಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಒಟ್ಟು 72 ಮಂದಿ ಎಣಿಕಾಸಿಬ್ಬಂದಿಯನ್ನು ಇದಕ್ಕೆ ನಿಯೋಜಿಸಲಾಗಿದೆ. 1 ಟೇಬಲ್‌ನಲ್ಲಿ 3 ಜನರು ಇರುತ್ತಾರೆ. ಇದಲ್ಲದೆ ಮೂರು ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗಿದೆ. ಒಬ್ಬ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಏಜೆಂಟ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಎಣಿಕೆ ಸಂದರ್ಭದಲ್ಲಿ ಹಾಜರಿರಲು ಅವಕಾಶವಿದೆ.
ಕೋವಿಡ್ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚು ಆಸಕ್ತಿ ವಹಿಸಲಾಗಿದೆ. ಜೊತೆಗೆ ಬರುವ ಸಿಬ್ಬಂದಿ ಹಾಗೂ ಅಭ್ಯರ್ಥಿ ಅಥವಾ ಏಜೆಂಟ್‌ಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್ ಮಾಡುವುದರ ಜೊತೆಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಬೆಳಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಎಣಿಕೆಯ ದಿನ ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಎಣಿಕೆ ಕೇಂದ್ರದಿಂದ 200 ಮೀಟರ್ ದೂರದ ಪ್ರದೇಶವನ್ನು ನಿರ್ಬಂಧಿತ ವಲಯವಾಗಿ ಘೋಷಿಸಲಾಗಿದೆ. ಯಾರೊಬ್ಬರೂ ಪಟಾಕಿ ಸಿಡಿಸುವುದು, ಸಂಭ್ರಮಾಚರಣೆ ಮಾಡಲು ಅವಕಾಶ ಇರುವುದಿಲ್ಲ ಎಂದು ತಹಶೀಲ್ದಾರ್ ಸುದರ್ಶನ್ ಮಾಹಿತಿ ನೀಡಿದರು.
ಹನೂರು: ಸ್ಟ್ರಾಂಗ್ ರೂಂಗೆ ಬಿಗಿ ಬಂದೋಬಸ್ತ್ :
ತಾಲೂಕಿನ 24 ಗ್ರಾಮ ಪಂಚಾಯಿತಿಗಳ 410 ಸ್ಥಾನಗಳಿಗೆ ನಡೆದ ಚುನಾವಣೆಯ ಮತಪೆಟ್ಟಿಗೆಗಳನ್ನು 3 ಸ್ಟ್ರಾಂಗ್ ರೂಂಗಳಲ್ಲಿ ಪೊಲೀಸ್ ಬಿಗಿಭದ್ರತೆಯಲ್ಲಿ ಇಡಲಾಗಿದೆ. ಮತದಾನಪ್ರಕ್ರಿಯೆ ಮುಕ್ತಾಯವಾದ ಬಳಿಕ ಡಿ ಮಸ್ಟರಿಂಗ್ ಕಾರ್ಯವನ್ನು ಮುಗಿಸಿ ಮತ ಪೆಟ್ಟಿಗೆಗಳನ್ನು ಪಟ್ಟಣದ ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ತೆರೆದಿರುವ 2 ಸ್ಟ್ರಾಂಗ್ ರೂಂ ಮತ್ತು ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿರುವ 1 ಸ್ಟ್ರಾಂಗ್‌ರೂಂನಲ್ಲಿ ಇಡಲಾಗಿದೆ.ಸ್ಟ್ರಾಂಗ್‌ರೂಂಗಳಿಗೆ ಪೊಲೀಸ್ ಬಿಗಿಭದ್ರತೆಗಳನ್ನು ಕಲ್ಪಿಸಲಾಗಿದ್ದು 1 ಇನ್ಸ್‌ಪೆಕ್ಟರ್, 2 ಸಬ್‌ಇನ್ಸ್‌ಪೆಕ್ಟರ್, 3 ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಮತ್ತು ಪ್ರತಿ ಸ್ಟ್ರಾಂಗ್‌ರೂಂಗೂ 3 ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಬಗಿ ಬಂದೋಬಸ್ತ್ ಕಲ್ಪಿಸಲಾಗಿದೆ.