Advertisement

ಬಿರುಸುಗೊಂಡ ಮುಂಗಾರು ಕೃಷಿ ಚಟುವಟಿಕೆ

09:27 PM Jun 02, 2019 | Lakshmi GovindaRaj |

ದೇವನಹಳ್ಳಿ: ಸತತವಾಗಿ ಬರಗಾಲಕ್ಕೆ ಸಿಲುಕಿ ತತ್ತರಿಸಿರುವ ರೈತರು ಈ ಬಾರಿ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದಾರೆ. ಅಲ್ಪ ಸ್ವಲ್ಪ ಮಳೆ ಬಿದ್ದಿರುವುದರಿಂದ ಕೃಷಿ ಚಟುವಟಿಕೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಂಡಿದ್ದ ಹೊಲ ಹದಗೊಳಿಸುವುದು ಸೇರಿದಂತೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

Advertisement

ರೈತರ ಮೊಗದಲ್ಲಿ ಸಂತಸ: ಬೇಸಿಗೆ ಬಿರು ಬಿಸಿಲಿಗೆ ತತ್ತರಿಸಿದ ರೈತರು, ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹರ್ಷಗೊಂಡಿದ್ದಾರೆ. ಅಲ್ಲಲ್ಲಿ ಕೆರೆ-ಕುಂಟೆಗಳಲ್ಲಿ ಅಲ್ಪಮಟ್ಟಿಗೆ ನೀರು ಕಾಣಿಸುತ್ತಿದ್ದು ಪಕ್ಷಿಗಳು, ಜಾನುವಾರುಗಳಿಗೆ ನೀರಿನ ಸಮಸ್ಯೆ ಪರಿಹಾರವಾದಂತಾಗಿದೆ.

ಮಳೆ ಪ್ರಾರಂಭವಾಗುತ್ತಿದ್ದಂತೆ ರೈತರ ಮೊಗದಲ್ಲಿ ಸಂತೋಷ ಮನೆ ಮಾಡಿದೆ. ಆದರೆ ಬಿರುಗಾಳಿ ಸಹಿತ ಮಳೆ ಹಾಗೂ ಆಲಿಕಲ್ಲು ಮಳೆಯಿಂದಾಗಿ ಬೆಳೆದ ಬೆಳೆಗಳ ನಷ್ಟ ಪರಿಹಾರದಲ್ಲಿ ಮತ್ತಷ್ಟು ರೈತರು ಇದ್ದಾರೆ. ಈ ಬಾರಿಯಾದರೂ ಮುಂಗಾರು ಉತ್ತಮವಾಗಿ ಸುರಿದರೆ ಆರ್ಥಿಕ ಸಂಕಷ್ಟ ದೂರವಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಹೊಲಗದ್ದೆ ಹದಗೊಳಿಸುತ್ತಿರುವ ರೈತರು: ರೈತರು ಬಿತ್ತನಗೆ ಬೇಕಾದ ರೀತಿಯಲ್ಲಿ ಹೊಲ ಗದ್ದೆಗಳನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ತೀವ್ರ ಮಳೆಯ ಕೊರತೆಯಿಂದ ಸಾಲ ಮಾಡಿ ಕೈ ಸುಟ್ಟುಕೊಂಡಿದ್ದ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮುಂಗಾರು ಪೂರ್ವ ಮಳೆ ಕೆಲವಡೆ ಶುಭಾರಂಭ ಮಾಡಿದೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರು, ಅದರಲ್ಲಿ ಶೇ.18 % ಸಣ್ಣ ಮತ್ತು ಶೇ.79 ಅತಿ ಸಣ್ಣ ರೈತರು ಇದ್ದಾರೆ.

ಪ್ರತಿ ವರ್ಷವೂ ಬಿತ್ತನೆಯ ಸಂದರ್ಭದಲ್ಲಿ ಬೀಜ ಗೊಬ್ಬರಕ್ಕೆ ಹಣ ಹೊಂದಿಸಲು ಸಾಲ ಮಾಡಲು ಮುಂದಾಗುವರು. ಬರಗಾಲದ ಮಧ್ಯೆಯೂ ಧೃತಿ ಕೆಡದ ರೈತರು ಬಿತ್ತನೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಮಡು ಉತ್ತಮ ಫ‌‌ಸಲಿಗೆ ನಿರೀಕ್ಷೆ ಗೆ ದೊಡ್ಡ ಸವಾಲಾಗಿದೆ. ಈ ಭಾಗದ ರೈತರು ಕೃತಿಕಾ ಮತ್ತು ರೋಹಿಣಿ ಮಳೆಗಾಗಿ ಹೆಚ್ಚು ನಂಬಿ ಕಳೆದ 3, 4 ದಿನಗಳಿಂದ ಕೃತಿಕಾ ಮಳೆ ಆರ್ಭಟಕ್ಕೆ ರೈತರು ಬಿತ್ತನೆಗೆ ಮುಂದಾದರೂ ಇನ್ನೂ ಕೆಲವರು ಹಿಂದೇಟು ಹಾಕುತ್ತಿದ್ದಾರೆ.

Advertisement

ಮಳೆಯ ವಿವರ: 2018-19 ನೇ ಸಾಲಿನಲ್ಲಿ 809 ಮಿಮೀ, ವಾಡಿಕೆ ಮಳೆಗೆ 714 ಮೀಮೀ, ವಾಸ್ತವ ಮಳೆಗೆ (ಶೇ.12) ಕಡಿಮೆ ಮಳೆಯನ್ನು ಪಡೆಯಲಾಗಿತ್ತು. 2019 ನೇ ಸಾಲಿನಲ್ಲಿ ಜ.01ರಿಂದ ಮೇ.31 ರವರೆಗೆ 139.06 ಮಿಮೀ, ವಾಸ್ತವ ಮಳೆ ಬಿದ್ದಿದೆ. 2019-20 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳು ಒಳಗೊಂಡಂತೆ ಒಟ್ಟಾರೆ 58,746 ಹೆಕ್ಟೇರ್‌ ವಿಸ್ತೀರ್ಣದ ಗುರಿಗೆ ಶೇ.51 ಹೆಕ್ಟೇರ್‌ ವಿಸ್ತೀರ್ಣ ಪ್ರದೇಶದಲ್ಲಿ ಬಿತ್ತನೆ ಕಾರ್ಯ ವಾಗಿರುತ್ತದೆ. 58,746 ಹೆಕ್ಟೇರ್‌ ವಿಸ್ತೀರ್ಣದ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಹೇಳುತ್ತಾರೆ.

ಹೊಸಕೋಟೆ 20 ಹೆಕ್ಟೇರ್‌, ನೆಲಮಂಗಲ 31 ಹೆಕ್ಟೇರ್‌ ಬಿತ್ತನೆ ಕಾರ್ಯವಾಗಿದೆ. ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರದಲ್ಲಿ ಭೂಮಿಯನ್ನು ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿತ್ತನೆ ಬೀಜಗಳು 3,392 ಕ್ವಿಂಟಾಲ್‌ ಬೇಡಿಕೆ ಇದೆ. ಅದರಲ್ಲಿ ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ.

ರಾಗಿ 1584 ಕ್ವಿಂಟಾಲ್‌, ಮುಸುಕಿನ ಜೋಳ 128 ಕ್ವಿಂಟಾಲ್‌, ಅಲಸಂಧೆ 1067 ಕ್ವಿಂಟಾಲ್‌, ಬತ್ತ 220 ಕ್ವಿಂಟಾಲ್‌ , ನೆಲ ಕಡಲೆ 154 ಕ್ವಿಂಟಾಲ್‌ , ತೊಗರಿ 87 ಕ್ವಿಂಟಾಲ್‌ನಷ್ಟು ದಾಸ್ತಾನು ಸಂಗ್ರಹಿಸಲಾಗಿದೆ. ಮೇ ತಿಂಗಳಿನಲ್ಲಿ ಬರುವ ಮಳೆಯಿಂದ ಭೂಮಿಯನ್ನು ಹದ ಮಾಡಿಕೊಳ್ಳಲು ಅನುಕೂಲವಾಗುವುದು. ನಮಗೆ ಜೂನ್‌ ನಂತರ ಬರುವ ಮಳೆಯೇ ಕೃಷಿ ಚಟುವಟಿಕೆ ಗಳು ಮಾಡಲು ಅನುಕೂಲವಾಗುವುದು.

ರಸ ಗೊಬ್ಬರಗಳ ಮಾಹಿತಿ: ಜಿಲ್ಲೆಯ 4 ತಾಲೂಕುಗಳಲ್ಲಿ ರಸ ಗೊಬ್ಬರಗಳ ಕೊರತೆ ಆಗದಂತೆ ನಿಗಾ ವಹಿಸಲಾಗಿದೆ. ಹಿಂದಿನ ಸಾಲಿನಲ್ಲಿ 7340 ಟನ್‌ ಹೆಚ್ಚುವರಿಯಾಗಿ ಉಳಿದಿದೆ. ಜಿಲ್ಲೆಗೆ ರಸ ಗೊಬ್ಬರ 27445 ಮೆಟ್ರಕ್‌ ಟನ್‌ ಅವಶ್ಯವಿದೆ. ಎಲ್ಲಾ ಕಡೆ ರಸ ಗೊಬ್ಬರ ವನ್ನು ಶೇಖರಿಸಲಾಗಿದೆ. 2018-19 ನೇ ಸಾಲಿನ ಲ್ಲಿ 43,521 ಟನ್‌ ಬೇಡಿಕೆಗೆ 40,012 ಟನ್‌ ಸರಬರಾಜು ಆಗಿದ್ದು 29332 ರಷ್ಟು ವಿತರಣೆ ಆಗಿದೆ.

2018-19 ಸಾಲಿನಲ್ಲಿ ಒಟ್ಟಾರೆ 27445 ಮೆಟ್ರಕ್‌ ಟನ್‌ ಬೇಡಿಕೆಯನ್ನು ತೋರಿದ್ದು ಏ. 2019 ನ ಮಾಹೆಗೆ 3,135 ಟನ್‌ ಬೇಡಿಕೆಗೆ 3200 ಟನ್‌ ಸರಬರಾಜು ಆಗಿದ್ದು, 2960 ರಷ್ಟು ವಿತರಣೆ ಆಗಿದೆ. 1165 ಮೆಟ್ರಕ್‌ ಟನ್‌ ವಿವಿಧ ರಸ ಗೊಬ್ಬರ ಕಾಪು ದಾಸ್ತಾನು ಇರುವುದು ಅಭಾವ ಕಂಡು ಬಂದರೆ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದೇವೆ. ಮಳೆ ಬಂದರೆ ಏನು ಆಗುವುದಿಲ್ಲ, ಮಳೆಯೊಂದಿಗೆ ಬಿರುಗಾಳಿ, ಆಲಿಕಲ್ಲು ಮಳೆ ಬಿದ್ದರೆ ರೈತರಿಗೆ ಹಾನಿಯಾಗುತ್ತದೆ. ಹಲವಾರು ಭಾಗಗಳಲ್ಲಿ ಮಳೆ ಬಂದಿರುವುದು ಸಂತಸದ ವಿಷಯ. ಮಳೆಯಾಗದ ಜಾಗಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಈ ಬಾರಿ ಉತ್ತಮ ಇಳುವರಿ ಕಾಣುವ ನಿರೀಕ್ಷೆಯಲ್ಲಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದೇವೆ.
-ಮುನಿ ಆಂಜನಪ್ಪ, ರೈತ

ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಜಿಲ್ಲೆಯಲ್ಲಿ 58,746 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರಾಗಿ, ತೊಗರಿ, ಮುಸುಕಿನ ಜೋಳ, ಕಡಲೇ ಕಾಯಿ ಬೆಳೆಗಳ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಮಳೆಯು ಜೂನ್‌, ಜುಲೈ ಮತ್ತು ಆಗಸ್ಟ್‌ ನಲ್ಲಿ ಹೆಚ್ಚಿನ ಮಳೆಯ ಆದರೆ ಬಿತ್ತನೆ ಕಾರ್ಯ ಹೆಚ್ಚಿಸಲು ಸಾಧ್ಯ ವಾಗುವುದು. ಮೇ ನಲ್ಲಿ ಬಿದ್ದ ಮಳೆಯಲ್ಲಿ ರೈತರು ಭುಮಿಯನ್ನು ಹದ ಮಾಡಿಕೊಳ್ಳುತ್ತಿದ್ದಾರೆ.
-ಗಿರೀಶ್‌, ಜಂಟಿ ಕೃಷಿ ನಿರ್ದೇಶಕ

ಮಳೆ ಸುರಿಯುತ್ತಿರುವುದರಿಂದ ತಾಲೂಕಿನಲ್ಲಿ ರೈತರು, ಭೂಮಿ ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜತೆಗೆ ಕೆಲವರು ಈಗಾಗಲೇ ಬಿತ್ತನೆ ಬೀಜ ತೆಗೆದುಕೊಂಡು ಹೋಗುತ್ತಿದ್ದಾರೆ. ಸೋಮವಾರ ನಂತರ ಹೆಚ್ಚಿನ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ರೈತರು ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
-ಎಂ.ಎನ್‌. ಮಂಜುಳಾ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ

* ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next