Advertisement

ನಮ್ಮಲ್ಲೀಗ ರಫೇಲ್‌ ಇದೆ ಎಚ್ಚರ…ಚೀನಕ್ಕೆ ಖಡಕ್‌ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್‌

12:31 AM Sep 11, 2020 | mahesh |

ಹೊಸದಿಲ್ಲಿ: ಭಾರತೀಯ ರಕ್ಷಣಾ ಪಡೆಗಳಿಗೀಗ ರಫೇಲ್‌ ಶಕ್ತಿ ಬಂದಿದೆ. ಭಾರತದ ಸಾರ್ವಭೌಮತ್ವದ ಮೇಲೆ ಕೆಟ್ಟ ದೃಷ್ಟಿ ಬೀರುವ ಜಗತ್ತಿನ ಕೆಲವು ರಾಷ್ಟ್ರಗಳಿಗೆ ಖಡಕ್‌ ಎಚ್ಚರಿಕೆ ರವಾನೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಭಾರತೀಯ ವಾಯುಪಡೆಯ ಗೋಲ್ಡನ್‌ ಆ್ಯರೋಸ್‌ಗೆ ಫ್ರಾನ್ಸ್‌ನಿಂದ ಆಗಮಿಸಿದ 5 ರಫೇಲ್‌ ಯುದ್ಧ ವಿಮಾನಗಳನ್ನು ಅಧಿಕೃತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇತ್ತೀಚೆಗೆ ಗಡಿಯಲ್ಲಿ ಉಲ್ಬಣಿಸಿರುವ ಉದ್ವಿಗ್ನ ಪರಿಸ್ಥಿತಿ ನಿಭಾಯಿಸಲು ಇಂಥ ಶಕ್ತಿಶಾಲಿ ಜೆಟ್‌ ಫೈಟರ್‌ಗಳ ಆವಶ್ಯಕತೆ ಭಾರತಕ್ಕಿತ್ತು. ಈ ಜೆಟ್‌ಗಳ ಸೇರ್ಪಡೆಯಿಂದ ಭಾರತದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಹೆಚ್ಚಾ­ಗಿದೆ’ ಎಂದಿದ್ದಾರೆ.

“ರಫೇಲ್‌ ವಿಮಾನಗಳು ವಿಶ್ವದಲ್ಲಿ ಸದ್ಯಕ್ಕೆ ಶ್ರೇಷ್ಠ ಯುದ್ಧ ವಿಮಾನಗಳೆಂಬ ಹೆಗ್ಗಳಿಕೆ ಪಡೆದಿವೆ. ಇನ್ನು ಮುಂದೆ ಭಾರತದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಅಭಿಪ್ರಾಯ-ಧೋರಣೆಗಳೂ ಬದಲಾಗಲಿವೆ. ಜಾಗತಿಕ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಭಾರತ ಇಂಥ ಪ್ರಯತ್ನಗಳಿಗೆ ಕೈ ಹಾಕಲಿದೆ’ ಎಂದರು.

“ಇತ್ತೀಚೆಗೆ, ನಾನು ರಷ್ಯಾದಲ್ಲಿ ಹಲವು ರಾಷ್ಟ್ರಗಳ ನಾಯಕರ ಜೊತೆ ಚರ್ಚಿಸಿದ್ದೇನೆ. ಗಡಿಯಲ್ಲಿ ಉದ್ಭವಿಸುವ ಯಾವುದೇ ತಕರಾರುಗಳನ್ನು ಶಮನಗೊಳಿಸುವ ಸಲುವಾಗಿ ಭಾರತದ ಏಕತೆ, ಸಾರ್ವಭೌಮತ್ವವನ್ನು ತ್ಯಾಗ ಮಾಡಲಾಗದು ಎಂಬುದನ್ನು ವಿಶ್ವಕ್ಕೆ ಮನದಟ್ಟು ಮಾಡಿಕೊಟ್ಟಿದ್ದೇನೆ’ ಎಂದು ಸಿಂಗ್‌ ಹೇಳಿದರು.

ಇಂದಿನಿಂದ ಹೊಸ ಅಧ್ಯಾಯ: ಫ್ಲಾರೆನ್ಸ್‌ ತನ್ನ ಪ್ರಜೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ, ಮಂಚೂಣಿಯಲ್ಲಿರುವ ರಕ್ಷಣಾ ಕವಚವೊಂದನ್ನು ಇಂದು ತನ್ನದಾಗಿಸಿಕೊಂಡಿದೆ ಎಂದು ಫ್ರಾನ್ಸ್‌ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲೆ ತಿಳಿಸಿದರು. ರಫೇಲ್‌ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಈ ಸಮಾರಂಭ ಭಾರತ ಮತ್ತು ಫ್ರಾನ್ಸ್‌ನ ಸ್ನೇಹ ಹಾಗೂ ಏಕತೆಯ ಪ್ರತೀಕವಾಗಿದೆ. ದ್ವಿಪಕ್ಷೀಯ ರಕ್ಷಣಾ ಒಪ್ಪಂದದಲ್ಲಿ ಇಂದಿನಿಂದ ಹೊಸ ಅಧ್ಯಾಯ ಶುರುವಾಗಿದೆ. 36 ರಫೇಲ್‌ ಯುದ್ಧ ವಿಮಾನಗಳು ಭಾರತೀಯ ವಾಯುಪಡೆ ಸೇರ್ಪಡೆಗೊಳ್ಳುವುದು ಸಾಮಾನ್ಯದ ಮಾತಲ್ಲ ಎಂದರು.

Advertisement

ಸಡಗರ: ಭಾರತದ ಬತ್ತಳಿಕೆಗೆ ಸೇರ್ಪಡೆಗೊಂಡ ರಫೇಲ್‌ ಯುದ್ಧ ವಿಮಾನಗಳಲ್ಲಿ ಮೊದಲ 5 ವಿಮಾನಗಳು ಗುರುವಾರ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡವು. ಈ ವಿಮಾನಗಳ ಸೇರ್ಪಡೆಗೆ ಸುಂದರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಫ್ರಾನ್ಸ್‌ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲೆ, ರಕ್ಷಣಾ ಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌, ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್‌. ಬದೌರಿಯಾ ಹಾಜರಿದ್ದರು.

ಭಾರತದ ವಶಕ್ಕೆ “ಫಿಂಗರ್‌ 4′
ಭಾರತ-ಚೀನಾ ನಡುವಿನ ನೈಜ ಗಡಿ ರೇಖೆಯಲ್ಲಿ ಚೀನಾ ನಡೆಸುತ್ತಿರುವ ಉದ್ಧಟತನದ ನಡುವೆಯೂ ತನ್ನ ರಣತಂತ್ರಗಾರಿಕೆ ಮುಂದುವರಿಸಿರುವ ಭಾರತೀಯ ಸೇನೆ, ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ಫಿಂಗರ್‌ 4 ಪ್ರಾಂತ್ಯದಲ್ಲಿ ಬರುವ ದಿಬ್ಬದ ಪ್ರದೇಶವನ್ನು ಗುರುವಾರ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಚೀನಾ ಸೇನೆ, ಫಿಂಗರ್‌ 3ರ ದಡದಲ್ಲಿ ಗುಟ್ಟಾಗಿ ಸೇನಾ ವಸಾಹತನ್ನು ನಿರ್ಮಿಸಿಕೊಂಡಿರುವುದನ್ನು ಬುಧವಾರ ಭಾರತೀಯ ಯೋಧರು ಪತ್ತೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ಫಿಂಗರ್‌ 4ರಲ್ಲಿನ ಪ್ರಾಂತ್ಯವನ್ನು ಭಾರತೀಯ ಯೋಧರು ತಮ್ಮ ವಶಕ್ಕೆ ತೆಗೆದುಕೊಂಡು, ಆ ಮೂಲಕ ಚೀನಕ್ಕೆ ಸೆಡ್ಡು ಹೊಡೆದಿದ್ದಾರೆ.

ಪರ್ವತಾರೋಹಿಗಳ ಪಡೆ ರವಾನೆ
ಮತ್ತೂಂದು ಬೆಳವಣಿಗೆಯೊಂದರಲ್ಲಿ, ಭಾರತೀಯ ಸೇನೆ ಲಡಾಖ್‌ನ ದುರ್ಗಮ ಪ್ರದೇಶಗಳಿಗೆ ತನ್ನಲ್ಲಿನ ಪರ್ವತಾರೋಹಿಗಳ ಪಡೆಯನ್ನು ರವಾನಿಸಿದೆ. ಪಾಂಗಾಂಗ್‌ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಗಳಲ್ಲಿ ಚೀನಾ ಸೈನಿಕರು ಇತ್ತೀಚೆಗೆ ಅತಿಕ್ರಮಣದಂಥ ವ್ಯರ್ಥ ಪ್ರಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ, ಆ ಪ್ರದೇಶಗಳಲ್ಲಿ ಹೆಚ್ಚುವರಿ ಸೇನೆ ಜತೆಗೆ ಪರ್ವಾತಾರೋಹಿಗಳ ಪಡೆಯನ್ನು ರವಾನಿಸಿದೆ.

ಟಿಬೆಟಿಯನ್ನರ ನೆರವು
1950ರಲ್ಲಿ ಚೀನಾ, ಟಿಬೆಟ್‌ ಅನ್ನು ಆಕ್ರಮಿಸಿಕೊಂಡಾಗ ಅಲ್ಲಿಂದ ಪಲಾಯನ ಮಾಡಿದ್ದ ಟಿಬೆಟ್‌ ಸಮುದಾಯವೊಂದು ಪಾಂಗಾಂಗ್‌ ದಂಡೆಯಲ್ಲಿ ಭಾರತೀಯ ಸೇನೆಗೆ ನೆರವಾಗುತ್ತಿದೆ. ಇವರು ಮುಂಜಾನೆ 3.30ಕ್ಕೆ ಎದ್ದು ಹತ್ತಿರದಲ್ಲಿರುವ ಭಾರತೀಯ ಸೇನಾ ನೆಲೆಗೆ ಹಾಜರಾಗಿ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳುತ್ತಾರೆ. ಅನಂತರ ಸೇನೆಗೆ ಅಗತ್ಯವಿರುವ ಕೆಲಸಗಳಲ್ಲಿ ನಿರತರಾಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next