Advertisement

ಖಡಕ್‌ ಉಸ್ತುವಾರಿಗೆ ನಡುಗಿದ ಕೈ ನಾಯಕರು

10:29 AM May 28, 2017 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲೀಗ ಉತ್ಸಾಹ ಮತ್ತು ಗೊಂದಲ ಏಕಕಾಲದಲ್ಲಿ ಕಂಡು ಬರುತ್ತಿದೆ. ಸರ್ಕಾರ 4
ವರ್ಷ ಪೂರೈಸಿರುವ ಸಂಭ್ರಮ ಹಾಗೂ ಎರಡು ಉಪ ಚುನಾವಣೆಗಳನ್ನು ಗೆದ್ದ ಹುಮ್ಮಸ್ಸು ಪಕ್ಷದ ನಾಯಕರಲ್ಲಿ ಹೊಸ ಉತ್ಸಾಹ ತಂದಿತ್ತು. ಅವರ ಉತ್ಸಾಹಕ್ಕೆ ಮತ್ತಷ್ಟು ಶಕ್ತಿ ನೀಡಬೇಕೆಂಬ ಕಾರಣಕ್ಕೆ ಹೈಕಮಾಂಡ್‌ ರಾಜ್ಯಕ್ಕೆ ಹೊಸ ಉಸ್ತುವಾರಿಯನ್ನು ನೇಮಿಸಿ, ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬುವ ಪ್ರಯತ್ನ ನಡೆಸಿದೆ.

Advertisement

ಕಾಂಗ್ರೆಸ್‌ ಹೈಕಮಾಂಡ್‌ ನೇಮಿಸಿರುವ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ ರಾಜ್ಯಕ್ಕೆ ಆಗಮಿಸಿದ ಎರಡೇ
ವಾರದಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ. ಉಸ್ತುವಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ರಾಜ್ಯಕ್ಕೆ ನೀಡಿದ
ಮೊದಲ ಭೇಟಿಯಲ್ಲಿಯೇ “ಎಲ್ಲರಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ’ ಎಂಬ ಸಂದೇಶವನ್ನು
ಮುಖ್ಯಮಂತ್ರಿಯಾದಿಯಾಗಿ ಎಲ್ಲ ನಾಯಕರಿಗೂ ತಲುಪುವಂತೆ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಹಿಂದಿನ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಬೆಂಗಳೂರಿಗೆ ಆಗಮಿಸಿದರೆ, ಕುಮಾರಕೃಪಾ ಅತಿಥಿಗೃಹ ಮತ್ತು ಮುಖ್ಯಮಂತ್ರಿ ಮನೆ
ದರ್ಶನ ಮಾಡಿದರೆ, ತಮ್ಮ ಕಾರ್ಯ ಮುಕ್ತಾಯವಾಯಿತು ಎಂದುಕೊಂಡಿದ್ದರು.

ಅಲ್ಲದೇ ಪಕ್ಷದ ಕಾರ್ಯಕ್ರಮಗಳಿಗೆ ಆಗಮಿಸುವುದಕ್ಕಿಂತ ಹೆಚ್ಚಾಗಿ ಖಾಸಗಿ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದರು. ಆ ಸಂದರ್ಭದಲ್ಲೇ ಪಕ್ಷಕ್ಕೆ ಸಂಬಂಧಿಸಿದ ಸಣ್ಣಪುಟ್ಟ ದೂರು, ಅಸಮಾಧಾನಿತರ ಅಹವಾಲು ಕೇಳಿ ಅಷ್ಟೇ ನನ್ನ ಜವಾಬ್ದಾರಿ ಎನ್ನುವಂತೆ ತೆರಳುತ್ತಿದ್ದರು. ಆದರೆ, ನೂತನ ಉಸ್ತುವಾರಿ ವೇಣುಗೋಪಾಲ ಅವರ ಕಾರ್ಯ ವೈಖರಿ ಸಂಪೂರ್ಣ ವಿಭಿನ್ನ. ಎಲ್ಲರನ್ನೂ ಪಕ್ಷದ ಕಚೇರಿಗೆ ಕರೆಸುವ ಮೂಲಕ ಮುಖ್ಯಮಂತ್ರಿಯೂ ಪಕ್ಷಕ್ಕಿಂತ ದೊಡ್ಡವರಲ್ಲ ಎಂಬ ಸಂದೇಶ ರವಾನಿಸಿದರು. ತಮ್ಮ ಆಪ್ತರ ಮೂಲಕ ಮನೆಗೆ ಆಹ್ವಾನ ನೀಡಿದ ಮುಖ್ಯಮಂತ್ರಿಗೆ “ಮೊದಲು ತಮ್ಮ ಭೇಟಿ ಮಾಡಲು ಕೆಪಿಸಿಸಿ ಕಚೇರಿಗೆ ಬರುವಂತೆ’ ಸೂಚಿಸುವ ಮೂಲಕ ಸೂಕ್ಷ್ಮವಾಗಿಯೇ ರಾಜ್ಯ ಉಸ್ತುವಾರಿಯಾಗಿ ತಮಗಿರುವ ಅಧಿಕಾರ ಮತ್ತು ಪಕ್ಷದ ಮುಖಂಡರಾಗಿ ಮುಖ್ಯಮಂತ್ರಿಯ ಜವಾಬ್ದಾರಿ ಎರಡನ್ನೂ ತೋರಿಸಿಕೊಟ್ಟಂತಿದೆ. ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯಭಾರ ಮಾಡುತ್ತಿದ್ದರೂ, ಸರ್ಕಾರ ಮತ್ತು ಪಕ್ಷಕ್ಕೆ ಸಂಬಂಧ ಇಲ್ಲದಂತೆ ಮುಖ್ಯಮಂತ್ರಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ನಡೆದುಕೊಂಡು ಬಂದಿದ್ದರು. ಅದರ ಪರಿಣಾಮ ಸರ್ಕಾರ-ಪಕ್ಷದ ನಡುವೆ ಸಮನ್ವಯತೆ ತರಲು ಸಮನ್ವಯ ಸಮಿತಿ ರಚಿಸಲಾಗಿತ್ತು.

ಆ ಸಮಿತಿ ಸದಸ್ಯರಾಗಿದ್ದ ಡಿ.ಕೆ. ಶಿವಕುಮಾರ್‌ ಮತ್ತು ಪರಮೇಶ್ವರ್‌ ಸರ್ಕಾರದ ಭಾಗವಾಗುವ ಮೂಲಕ ಅದೂ ಕೂಡ ನಿಷ್ಕ್ರಿಯವಾಗಿ, ಪಕ್ಷ ಮತ್ತು ಕಾರ್ಯಕರ್ತರು ಅಪರಿಚಿತರಂತೆ ಅಲೆದಾಡುವಂತಾಯಿತು. ವಿವಿಧ ಹುದ್ದೆಗಳಲ್ಲಿ ಕಾರ್ಯಕರ್ತರ ನೇಮಕ, ನಿಗಮ ಮಂಡಳಿಗಳಲ್ಲಿ ಅಧಿಕಾರ ನೀಡುವ ಸಂದರ್ಭದಲ್ಲೂ ಪಕ್ಷದ ನಿರ್ಧಾರಕ್ಕಿಂತ
ಮುಖ್ಯಮಂತ್ರಿ ಮಾತೇ ಅಂತಿಮವಾಗಿ ಅನೇಕ ಮೂಲ ಕಾಂಗ್ರೆಸ್‌ ಕಾರ್ಯಕರ್ತರು ಸರ್ಕಾರದ ಬಗ್ಗೆ ಭ್ರಮನಿರಸನಗೊಳ್ಳುವಂತೆ ಮಾಡಿತ್ತು.

ವೇಣುಗೋಪಾಲ್‌ ಬಂದ ಮೊದಲ ಸಲವೇ ಸಮನ್ವಯ ಸಮಿತಿ ಸಭೆ ನಡೆಸಿ ಎಲ್ಲ ನಾಯಕರ ವಿಶ್ವಾಸಕ್ಕೆ
ಪಾತ್ರರಾದಂತೆ ಕಾಣುತ್ತಿದೆ. ಅಲ್ಲದೇ ರಾಜ್ಯದಲ್ಲಿ ಪಕ್ಷದ ಸ್ಥಿತಿ ಗತಿ ಅರಿಯಲು ಸತತ ನಾಲ್ಕು ದಿನ ಜಿಲ್ಲಾ ಮಟ್ಟದ
ಮುಖಂಡರ ಸಭೆ ನಡೆಸಿರುವುದು ಕೆಪಿಸಿಸಿ ಇತಿಹಾಸದಲ್ಲೇ ಪ್ರಥಮ ಎಂಬ ಮಾತು ಕೇಳಿ ಬರುತ್ತಿದೆ. ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದ ಎಚ್‌. ವಿಶ್ವನಾಥರಂತ ನಾಯಕರನ್ನು ಕರೆಸಿ ಮಾತನಾಡಿರುವುದು. ಸಿಎಂ ನಡೆ ಬಗ್ಗೆ ಬೇಸರಗೊಂಡ ಸಿ.ಕೆ. ಜಾಫ‌ರ್‌ ಷರೀಫ್ ಮನೆಗೆ ತೆರಳಿದ್ದೂ ಅಪರೂಪದ ಬೆಳವಣಿಗೆ. ಇದೇ ಕೆಲಸವನ್ನು ಪರಮೇಶ್ವರ್‌ ಅಥವಾ ಸಿದ್ದರಾಮಯ್ಯ ಮಾಡಿದ್ದರೂ ಎಸ್‌.ಎಂ. ಕೃಷ್ಣ ಪಕ್ಷ ತೊರೆಯುವುದನ್ನು ತಡೆಯಬಹುದಿತ್ತು. ಮುಖ್ಯವಾಗಿ, ಜಿಲ್ಲಾ ಮಟ್ಟದಲ್ಲಿ ಪಕ್ಷದ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ತಿಳಿಯುವ ಪ್ರಯತ್ನ ಮಾಡಿರುವುದು ಪಕ್ಷ ಕಟ್ಟುವ ನಾಯಕನಿಗಿರುವ
ಚಾಣಾಕ್ಷತೆ ಅನಿಸುತ್ತದೆ. ಪಕ್ಷದಲ್ಲಿರುವ ದೌರ್ಬಲ್ಯ ಮತ್ತು ಅದಕ್ಕಿರುವ ಕಾರಣಗಳನ್ನು ಎಳೆ ಎಳೆಯಾಗಿ ತಿಳಿಯಲು
ಪ್ರಯತ್ನಿಸಿರುವ ವೇಣುಗೋಪಾಲ್‌ಗೆ ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲದಿರುವುದು ಕಂಡುಬಂದಿದೆ. ಜಿಲ್ಲಾ ಮುಖಂಡರ ಸಭೆಯಲ್ಲಿ ಗೊಂದಲದ ಮೂಲ ಅರಿತಿರುವ ವೇಣುಗೋಪಾಲ, ಜಿಲ್ಲಾ ಉಸ್ತುವಾರಿ ಸಚಿವರ ಚಳಿ ಬಿಡಿಸುವ ಪ್ರಯತ್ನ ನಡೆಸಿದ್ದಾರೆ. ಪಕ್ಷದ ಕಚೇರಿಗೆ ತಿಂಗಳಿಗೊಮ್ಮೆಯಾದರೂ ಆಗಮಿಸುವಂತೆ ಪರಮೇಶ್ವರ್‌ ಹತ್ತಾರು ಬಾರಿ ಪತ್ರ ಬರೆದರೂ ಕ್ಯಾರೆ ಎನ್ನದ ಮಂತ್ರಿಗಳು, ಸಭೆಗೆ ಸ್ವಲ್ಪ ವಿಳಂಬವಾಗುತ್ತದೆ ಎಂಬ ಸಬೂಬು ಹೇಳಿ ಜಾರಿಕೊಳ್ಳಲು ಮುಂದಾದ ಸಚಿವರಿಗೆ ಬೇರೆಲ್ಲಾ ಕೆಲಸ ಬಿಟ್ಟು ಪಕ್ಷದ ಕಚೇರಿಗೆ ಬಂದು ಸಭೆಗೆ ಹಾಜರಾಗುವಂತೆ
ವೇಣುಗೋಪಾಲ್‌ ಖಡಕ್‌ ಎಚ್ಚರಿಕೆ ನೀಡಿದ್ದು ಪರಿಣಾಮ ಬೀರಿದೆ. ಬೇರೆಲ್ಲ ಚಟುವಟಿಕೆಗಿಂತ ಪಕ್ಷದ ಕೆಲಸ ಮುಖ್ಯ ಎಂದು ವೇಣುಗೋಪಾಲ ಹೇಳಿರುವುದಕ್ಕೆ ಕಾಂಗ್ರೆಸ್‌ ಕಚೇರಿಗೆ ಧ್ವಜ ಹಾರಿಸಲಷ್ಟೇ ಬರುತ್ತಿದ್ದ ಮುಖ್ಯಮಂತ್ರಿ ನಾಲ್ಕು ದಿನ ಬೆಳಿಗ್ಗೆಯಿಂದ ಸಂಜೆವರೆಗೂ ಪಕ್ಷದ ಕಚೇರಿಯಲ್ಲಿ ಠಿಕಾಣಿ ಹೂಡುವಂತಾಯಿತು.

Advertisement

ಅಲ್ಲದೇ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಕಡ್ಡಾಯವಾಗಿ ಕಾರ್ಯಕರ್ತರ ಭೇಟಿ ಮಾಡುವುದು, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಬೂತ್‌ ಮಟ್ಟದ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕೆಂಬ ಸೂಚನೆ ನೀಡಿರುವುದು, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. “ತಮ್ಮ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ, ಮುಂದೆಯೂ ತಾನೇ ಸಿಎಂ’ ಎಂದು ಸಮಾರಂಭಗಳಲ್ಲಿ ಹೇಳಿಕೊಳ್ಳುತ್ತಿದ್ದ ಸಿಎಂ ಮಾತಿನ ಧಾಟಿ ಹದಿನೈದೇ ದಿನದಲ್ಲಿ ಸಂಪೂರ್ಣ ಬದಲಾಗುವಂತೆ ಮಾಡಿದ್ದಾರೆ. “ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಯಾರೆನ್ನೆವುದಲ್ಲ, ಯಾರ ನಾಯಕತ್ವ ಅನ್ನುವುದನ್ನೂ ಪಕ್ಷ ತೀರ್ಮಾನ ಮಾಡುತ್ತದೆ’ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಏಕ ಮುಖ ವೇಗಕ್ಕೆ ಬ್ರೇಕ್‌ ಹಾಕುವ ಪ್ರಯತ್ನ ನಡೆಸಿದ್ದಾರೆ. 

ಕೇರಳ ಮಾದರಿ ಕೇಡರ್‌ ವ್ಯವಸ್ಥೆ
ಹೊಸ ಉಸ್ತುವಾರಿಯ “ಕಾರ್ಯವೈಖರಿ’ ಪಕ್ಷದ ನಾಯಕರಿಗೆ ಇರಿಸು ಮುರಿಸು ಉಂಟು ಮಾಡಿದ್ದರೂ, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮಾಡಿಸಿರುವುದು ಸುಳ್ಳಲ್ಲ. ಯುವ ಕಾಂಗ್ರೆಸ್‌ ಘಟಕದ ಮೂಲಕ ಮೇಲೆ
ಬಂದಿರುವ ವೇಣುಗೋಪಾಲ್‌, ಕೇರಳ ಮಾದರಿಯ ಕೇಡರ್‌ ವ್ಯವಸ್ಥೆಯನ್ನು ಕರ್ನಾಟಕದಲ್ಲೂ ತರಲು ಮುಂದಾಗಿದ್ದಾರೆ. ಅವರ ಕಾರ್ಯವೈಖರಿ ಇದೇ ರೀತಿ ಮುಂದುವರಿದರೆ, ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಕಡೆಗೆ ಹೋಗುವ ಯೋಚನೆ ಮಾಡಬಹುದು ಎಂಬ ಸಣ್ಣದೊಂದು ನಿರೀಕ್ಷೆ ಪಕ್ಷದ ಕಾರ್ಯಕರ್ತರಿಗೆ ಮೂಡಿದಂತಿದೆ. 

Advertisement

Udayavani is now on Telegram. Click here to join our channel and stay updated with the latest news.

Next