ಮನಿಲಾ : ಫಿಲಿಪ್ಪೀನ್ಸ್‌ನಲ್ಲಿ ಇಂದು ಶನಿವಾರ ನಸುಕಿನ ವೇಳೆ 6.8 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ನಡುಗಿದ ತೀವ್ರತೆಗೆ ಅನೇಕ ಕಟ್ಟಡಗಳು ಹಾನಿಗೊಂಡಿವೆ. ಇಬ್ಬರು ಗಾಯಗೊಂಡಿದ್ದಾರೆ. ಸುನಾಮಿ ಹೆದ್ದೆರೆಗಳು ಏಳುವ ಸಾಧ್ಯತೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿ ಕರಾವಳಿ ಪ್ರದೇಶದಿಂದ ಕಾಲ್ಕಿತ್ತಿದ್ದಾರೆ.
ಇಂದು ಶನಿವಾರ ನಸುಕಿನ 4.23ರ ಹೊತ್ತಿಗೆ (ಜಿಎಂಟಿ ಕಾಲಮಾನ ಶುಕ್ರವಾರ 20.23) ದಕ್ಷಿಣ ಪ್ರಾಂತ್ಯವಾಗಿರುವ ಮಿಂದನಾವೋ ಮತ್ತು ಇಂಡೋನೇಶ್ಯದಲ್ಲಿ ತೀವ್ರ ಭೂಕಂಪ (6.8 ಅಂಕಗಳ ತೀವ್ರತೆ) ಸಂಭವಿಸಿತೆಂದು ಅಮೆರಿಕದ ಭೂಗರ್ಭ ಸರ್ವೇಕ್ಷಣ ಇಲಾಖಾಧಿಕಾರಿಗಳು ಹೇಳಿದ್ದು ಈ ಭೂಕಂಪದ ಪರಿಣಾಮವಾಗಿ ಅತ್ಯಂತ ವಿನಾಶಕಾರಿ ಸುನಾಮಿ ಹೆದ್ದೆರೆಗಳು ಏಳುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ನೀಡಿದ್ದರು.
ಭೂಕಂಪ ಸಂಭವಿಸಿದ ನಸುಕಿನ ವೇಳೆ ಸಿಹಿ ನಿದ್ದೆಯಲ್ಲಿದ್ದ ಜನರು ಇದ್ದಕ್ಕಿದ್ದಂತೆಯೇ ಒಮ್ಮೆಲೇ ತಮ್ಮ ಹಾಸಿಗೆಯಿಂದ ಎಸೆಯಲ್ಪಟ್ಟರು. ಭಯಭೀತರಾದ ಜನರು ಮನೆ, ಕಟ್ಟಡಗಳಿಂದ ಹೊರಗೋಡಿ ರಸ್ತೆಯಲ್ಲಿ ಜಮಾಯಿಸಿದರು. ಅನೇಕ ಕಟ್ಟಡಗಳಿಗೆ ಹಾನಿ ಉಂಟಾಯಿತು. ಆಸ್ಪತ್ರೆ ಮತ್ತು ಇತರ ಎರಡು ಸರಕಾರಿ ಕಟ್ಟಡಗಳಲ್ಲಿ ತೀವ್ರವಾದ ಬಿರುಕು ಕಾಣಿಸಿಕೊಂಡಿತು. ಮನೆಗಳು ಉರುಳಿ ಬಿದ್ದು ನಾಶವಾದವು. ವಿದ್ಯುತ್ ಪೂರೈಕೆ ನಿಂತು ಹೋಯಿತು.
ಭೂಕಂಪವು ಮಿಂದನಾವೋ ದ್ವೀಪದಿಂದ 41 ಕಿ.ಮೀ. ಭೂಗರ್ಭದಾಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಅಮರಿಕದ ಭೂಗರ್ಭ ಸೇವಾ ಕೇಂದ್ರ ಹೇಳಿದೆ.
ಫಿಲಿಪ್ಪೀನ್ಸ್‌ನ ಜ್ವಾಲಾಮುಖೀ ಮತ್ತು ಭೂಕಂಪ ಅಧ್ಯಯನ ಕೇಂದ್ರವು ಇಂದು ಸಂಭವಿಸಿರುವ ಭೂಕಂಪದ ತೀವ್ರತೆಯು 7.2 ಅಂಕಗಳಲ್ಲಿ ದಾಖಲಾಗಿರುವುದಾಗಿ ಹೇಳಿದೆ. ಇದರ ಕೇಂದ್ರ ಬಿಂದು ಮಿಂದನಾವೋ ದಕ್ಷಿಣ ಕರಾವಳಿಯಿಂದ 53 ಕಿ.ಮೀ. ದೂರ ಸಮುದ್ರದಾಳದಲ್ಲಿ ಇದೆ ಎಂದು ಹೇಳಿದೆ.