ಬಾಗೇಪಲ್ಲಿ: ಮುಂಬರುವ ವಿಧಾನಸಭಾ ಚುನಾವಣೆಯ ಗೆಲುವಿಗಾಗಿ ಎಲ್ಲ ಪಕ್ಷದವರೂ ಗರಿಷ್ಠ ಪ್ರಯತ್ನಿಸುತ್ತಿದ್ದಾರೆ. ಆದರೆ, ತೀರ್ಪು ನೀಡುವವರು ಮತದಾರರು. ಬಾಗೇಪಲ್ಲಿಯಲ್ಲಿ ಬಿಜೆಪಿ ಖಾತೆ ತೆರೆಯಲು ಹೈಕಮಾಂಡ್ ಬಲಿಷ್ಠ ಅಭ್ಯರ್ಥಿ ಕಣಕ್ಕಿಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದರು.
ಪಟ್ಟಣದಲ್ಲಿರುವ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮಾತನಾಡಿ, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಗುಂಪುಗಾರಿಕೆ ಸಹಜ ವಾಗಿದೆ. ಆದರೆ, ಬಾಗೇಪಲ್ಲಿ ಬಿಜೆಪಿಯಲ್ಲಿ ಸ್ವಲ್ಪ ಹೆಚ್ಚಾಗಿದೆ. ಕ್ಷೇತ್ರದಿಂದ ಸ್ಪ ರ್ಧಿಸುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಆಕಾಂಕ್ಷಿಗಳು ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಕ್ಷದ ವರಿಷ್ಠರಿಗೆ ಸಿಕ್ಕಿದೆ ಎಂದು ಹೇಳಿದರು.
ಚುನಾವಣಾ ತಂತ್ರಗಾರಿಕೆ ರೂಪಿಸಿ: ಹಲವು ಪ್ರಭಾವಿ ಬಿಜೆಪಿ ಮುಖಂಡರು ಸ್ಪರ್ಧೆ ಬಯಸಿ ಬಾಗೇಪಲ್ಲಿ ಕ್ಷೇತ್ರಕ್ಕೆ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯದ ವರಿಷ್ಠರು, ಪಕ್ಷದಲ್ಲಿನ ಚುನಾವಣಾ ಸಮಿತಿ ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಪಕ್ಷ ಅ ಧಿಕೃತ ಘೋಷಣೆ ಮಾಡುವ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕೆ ಬಿಜೆಪಿ ಕಾರ್ಯಕರ್ತರು ಚುನಾವಣಾ ತಂತ್ರಗಾರಿಕೆ ರೂಪಿಸಿಕೊಂಡು ಶ್ರಮಿಸಬೇಕು ಎಂದು ವಿವರಿಸಿದರು.
ಸಚಿವರಿಗೆ ದೂರು ಸಲ್ಲಿಕೆ: ತಾಲೂಕಿನ ಗೂಳೂರು ಹೋಬಳಿಯ ವಿವಿಧ ಗ್ರಾಪಂನಲ್ಲಿ 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿ ಮಾಡದೆ ಹಣ ಡ್ರಾ ಮಾಡಿ ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಪಂ ಸಿಇಒ, ತಾಪಂ ಇಒಗೆ ಆದೇಶ ಮಾಡಿದ್ದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಉಸ್ತುವಾರಿ ಸಚಿವರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ದೂರು ಸಲ್ಲಿಸಿದರು.
ತರಾಟೆ: ದೂರಿಗೆ ಸ್ಪಂದಿಸಿದ ಸಚಿವರು, ಸ್ಥಳದಲ್ಲೇ ಇದ್ದ ತಾಪಂ ಇಒ ಮಂಜುನಾಥಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡು, ಅವ್ಯವಹಾರ ಹಣದಲ್ಲಿ ನಿನಗೆಷ್ಟು ಪಾಲು ಬಂದಿದೆ. ಸಾರ್ವಜನಿಕರು ದೂರು ಸಲ್ಲಿಸಿದರೂ ಏಕೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.
ಸಭೆ ನಡೆಸಲೂ ಹಿಂದೇಟು: ಪರಿಶಿಷ್ಟ ವರ್ಗಗಳ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಯರಾಮಯ್ಯ ಜನಪ್ರತಿನಿ ಧಿಗಳು ಇಲ್ಲದಿದ್ದರೂ ಶಿಷ್ಠಾಚಾರ ಉಲ್ಲಂಘಿಸಿ, ಶಾಸಕರ ಬೆಂಬಲಿಗರ ಮುಖಂಡತ್ವದಲ್ಲಿ 52 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯ ಸಲಕರಣೆ ವಿತರಿಸುತ್ತಾರೆ. 6 ತಿಂಗಳಾದರೂ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ. ಕೆಡಿಪಿ ಸದಸ್ಯರಾದ ನಾವು ಸಭೆ ನಡೆಸುವಂತೆ ಮನವಿ ಮಾಡಿದರೂ ಸ್ಪಂದಿ ಸುವುದಿಲ್ಲ ಎಂದು ಕಾರ್ಯಕರ್ತರು ದೂರು ಸಲ್ಲಿಸಿದರು.
ತಹಶೀಲ್ದಾರ್ ವೈ.ರವಿ, ತಾಪಂ ಇಒ ಮಂಜುನಾಥಸ್ವಾಮಿ, ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್.ನಾಗರಾಜು, ಬಿಜೆಪಿ ಮಂಡಲಾಧ್ಯಕ್ಷ ಆರ್. ಪ್ರತಾಪ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್. ವೆಂಕಟೇಶ್, ಕೆಡಿಪಿ ಸದಸ್ಯ ಮಂಜುನಾಥ್, ಮುಖಂಡರಾದ ವೈ.ಎಸ್.ಲೋಕೇಶ್, ಆಂಜನೇಯರೆಡ್ಡಿ, ನಿರ್ಮಲಮ್ಮ, ಗಂಗುಲಮ್ಮ, ವನಜಾ, ರೂಪಾ, ಮಂಜುಳಾ ಮತ್ತಿತರರು ಇದ್ದರು