Advertisement

ಮಕ್ಕಳಿಂದ ಕೆಲಸ ಮಾಡಿಸಿದಲ್ಲಿ ಕಠಿನ ಕ್ರಮ

02:40 AM May 21, 2018 | |

ಕಾಸರಗೋಡು: ಬಾಲಕಾರ್ಮಿಕರ ದುಡಿಮೆ ನಿಷೇಧಕ್ಕೆ ಹಾಗೂ ಬೀದಿ ಮಕ್ಕಳ ಪುನರ್ವಸತಿಗಾಗಿ ಕಾಸರಗೋಡು ಜಿಲ್ಲಾ ಮಟ್ಟದ ಬಾಲಕಾರ್ಮಿಕ ದುಡಿಮೆ ವಿರುದ್ಧ  ಕ್ರಿಯಾ ಪಡೆ ರಚಿಸಲಾಗಿದೆ. ಜಿಲ್ಲೆಯಲ್ಲಿ  ಬಾಲಕಾರ್ಮಿಕತನ, ಬಾಲ ಭಿಕ್ಷಾಟನೆ ಮೊದಲಾದವುಗಳು ನಡೆಯುತ್ತಿರುವುದಾಗಿ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ  ಜಿಲ್ಲಾಡಳಿತವು ಕ್ರಿಯಾಪಡೆಯನ್ನು  ನೇಮಿಸಿದೆ.

Advertisement

ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಜಿಲ್ಲಾ ಮಟ್ಟದ ಕ್ರಿಯಾಪಡೆಯಲ್ಲಿ  ಜುವೆನೈಲ್‌ ಜಸ್ಟೀಸ್‌ ಬೋರ್ಡ್‌, ಶಿಶು ಕಲ್ಯಾಣ ಸಮಿತಿ, ಪೊಲೀಸ್‌ ಅಧಿಕಾರಿಗಳು, ಜಿಲ್ಲಾ  ಕಾರ್ಮಿಕಾಧಿಕಾರಿ, ಸಹಾಯಕ ಕಾರ್ಮಿಕಾ ಧಿಕಾರಿಗಳು, ಜಿಲ್ಲಾ  ಶಿಶು ಸಂರಕ್ಷಣಾ ಅಧಿಕಾರಿ (ಡಿಸಿಪಿಯು), ಡಿಸಿಪಿಯು ಪ್ರತಿನಿಧಿಗಳು, ಚೈಲ್ಡ್‌ ಲೈನ್‌ ಪ್ರಮುಖರು ಅಲ್ಲದೆ ಇತರ ವಲಯದವರು ಸದಸ್ಯರಾಗಿರುತ್ತಾರೆ.

2013ರಿಂದ 2018ರ ವರೆಗೆ ಜಿಲ್ಲೆಯಲ್ಲಿ  ಬಾಲ ಕಾರ್ಮಿಕತನಕ್ಕೊಳಗಾದ 28 ಮಂದಿ ಮಕ್ಕಳು ಶಿಶು ಕಲ್ಯಾಣ ಸಮಿತಿ ಎದುರು ಹಾಜರಾಗಿದ್ದಾರೆ. ಇವರಲ್ಲಿ  ವಿಳಾಸ ಪತ್ತೆಹಚ್ಚಲು ಸಾಧ್ಯವಾದ ಆರು ಮಂದಿ ಮಕ್ಕಳನ್ನು  ತಂದೆ – ತಾಯಿಯಂದಿರ ಬಳಿಗೆ ಸೇರಿಸಲು ಸಾಧ್ಯವಾಗಿದೆ. 13 ಮಂದಿ ಮಕ್ಕಳನ್ನು  ಆಯಾ ಶಿಶು ಕಲ್ಯಾಣ ಸಮಿತಿಗಳಿಗೆ ಕಳುಹಿಸಲಾಗಿದ್ದು, ಉಳಿದ ಮಕ್ಕಳು ವಿವಿಧ ಫಿಟ್‌ಪರ್ಸನ್‌ ಮತ್ತು  ಸರಕಾರಿ ಮಹಿಳಾ ಮಂದಿರದ ಸಂರಕ್ಷಣೆಯಲ್ಲಿರುವುದಾಗಿ ಶಿಶು ಕಲ್ಯಾಣ ಸಮಿತಿಯ ಅಧ್ಯಕ್ಷೆ  ಮಾಧುರಿ ಎಸ್‌. ಬೋಸ್‌ ತಿಳಿಸಿದ್ದಾರೆ.

ಹೊರರಾಜ್ಯ ಹಾಗೂ ಅನ್ಯ ಜಿಲ್ಲೆಗಳಿಂದ ಬಂದ ತಮ್ಮದಲ್ಲದ ಮಕ್ಕಳನ್ನು  ಮನೆಗಳಲ್ಲಿ  ಅಥವಾ ಸಂಸ್ಥೆಗಳಲ್ಲಿ ಸಂರಕ್ಷಿಸುತ್ತಿದ್ದಲ್ಲಿ  ಅವರು ಮಕ್ಕಳನ್ನು  ಒಂದು ವಾರದೊಳಗೆ ಕಾಸರಗೋಡಿನ ಪರವನಡ್ಕ ಬಾಲಮಂದಿರದಲ್ಲಿ ನಡೆಸುವ ಶಿಶು ಕಲ್ಯಾಣ ಸಮಿತಿ ಸಭೆ ಎದುರು ಹಾಜರುಪಡಿಸಬೇಕಾಗಿ ಸಿಡಬ್ಲ್ಯುಸಿ ತಿಳಿಸಿದೆ.

ಕೌಟುಂಬಿಕ ಅಗತ್ಯಗಳಿಗಾಗಿ ಹೊರ ಜಿಲ್ಲೆ  ಹಾಗೂ ಅನ್ಯರಾಜ್ಯಗಳಿಂದ ಮಕ್ಕಳನ್ನು  ಸಾಗಿಸುತ್ತಿರುವುದು ಭಾರತೀಯ ಶಿಕ್ಷಾ ನಿಯಮ 370ರ ಪ್ರಕಾರ ಶಿಕ್ಷಾರ್ಹ ಅಪರಾಧ ವಾಗಿದೆ. ಈ ವಿಚಾರದಲ್ಲಿ  ರೆಸಿಡೆಂಟ್ಸ್‌ ಅಸೋಸಿಯೇಶನ್‌ಗಳು ಸಾರ್ವಜನಿಕ ಸಮೂಹ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ಹೇಳಿದ್ದಾರೆ.

Advertisement

ಜಿಲ್ಲೆಯಲ್ಲಿ  ಹೊರ ರಾಜ್ಯಗಳಿಂದ ಮಕ್ಕಳನ್ನು  ನೌಕರಿಗೆ ತಲುಪಿಸುವ ಜಾಲ ಕಾರ್ಯಾಚರಿಸು ತ್ತಿದೆಯೋ ಎಂಬ ಬಗ್ಗೆ ಶಂಕಿಸುತ್ತಿರುವುದಾಗಿಯೂ ಸಾರ್ವಜನಿಕರ ಸಹಕಾರದೊಂದಿಗೆ ಮಾತ್ರ ಜಿಲ್ಲೆ ಯನ್ನು  ಬಾಲಕಾರ್ಮಿಕ ವಿಮುಕ್ತ ಜಿಲ್ಲೆಯಾಗಿ ಮಾರ್ಪಾಡುಗೊಳಿಸಲು ಸಾಧ್ಯವಿದೆ ಎಂದೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬಾಲಕಾರ್ಮಿಕರ ಕುರಿತು ಗಮನಕ್ಕೆ ಬಂದಲ್ಲಿ  ಕೂಡಲೇ ತಿಳಿಸಬೇಕಾಗಿ ಜಿಲ್ಲಾಧಿಕಾರಿ ನಿರ್ದೇಶಿಸಿ ದ್ದಾರೆ. ಜಿಲ್ಲೆಯಲ್ಲಿ ಶಿಕ್ಷಣ ಸ್ಥಗಿತಗೊಳಿಸಿ ಮಕ್ಕಳನ್ನು  ದುಡಿಸುತ್ತಿರುವುದಾಗಿ ಗಮನಕ್ಕೆ ಬಂದಿದೆ. 14-18ರ ವಯೋಮಿತಿಯ ಮಕ್ಕಳನ್ನು 2016ರ ಬಾಲಕಾರ್ಮಿಕರ ನಿಯಂತ್ರಣ ಕಾನೂನು ಪ್ರಕಾರ ನಿಷೇಧಿಸಲಾದ ನೌಕರಿಗಳಲ್ಲಿ  ನಿಯೋಜಿಸುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟಲಾಗುವುದು.

ಕ್ರಿಯಾ ಪಡೆ ರಚನೆ ಸಂಬಂಧ ಸಭೆ : ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು ಅವರ ಅಧ್ಯಕ್ಷತೆಯಲ್ಲಿ  ಜಿಲ್ಲಾಧಿಕಾರಿ ಕಚೇರಿಯ ವೀಡಿಯೋ ಕಾನ್ಫ‌ರೆನ್ಸ್‌  ಸಭಾಂಗಣದಲ್ಲಿ  ಕ್ರಿಯಾ ಪಡೆ ರಚನೆ ಸಂಬಂಧ ಜರಗಿದ ವಿಶೇಷ ಸಭೆಯಲ್ಲಿ ಜಿಲ್ಲಾ  ಕಾರ್ಮಿಕ ವಿಭಾಗದ ಅಧಿಕಾರಿ ಮಾಧವನ್‌ ನಾಯರ್‌, ಶಿಶು ಕಲ್ಯಾಣ ಸಮಿತಿಯ ಅಧ್ಯಕ್ಷೆ  ಮಾಧುರಿ ಎಸ್‌. ಬೋಸ್‌, ಜುವೈನಲ್‌ ಜಸ್ಟೀಸ್‌ ಸದಸ್ಯರಾದ ನ್ಯಾಯವಾದಿ ಮಣಿ ಜಿ. ನಾಯರ್‌, ಪಿ.ಕೆ. ಕುಂಞಿರಾಮನ್‌, ಜಿಲ್ಲಾ ಶಿಶು ಸಂರಕ್ಷಣಾಧಿಕಾರಿ ಪಿ. ಬಿಜು, ಡಿ.ಸಿ. ಆರ್‌. ಬಿಸಬ್‌, ಇನ್‌ಸ್ಪೆಕ್ಟರ್‌ ರಮಣನ್‌, ಚೈಲ್ಡ್‌ಲೈನ್‌ ನೋಡಲ್‌ ಸಂಯೋಜಕ ಅನೀಶ್‌ ಜೋಸ್‌, ಡಿಸಿಪಿಯು ಪ್ರೊಬೆಶನರಿ ಅಧಿಕಾರಿ ಶ್ರೀಜಿತ್‌, ಕೌನ್ಸಿಲರ್‌ ನೀತು ಕುರ್ಯಾಕೋಸ್‌ ಮೊದಲಾದವರು ಉಪಸ್ಥಿತರಿದ್ದರು. ಈ ಸಭೆಯಲ್ಲಿ  ಕ್ರಿಯಾ ಪಡೆಯ ಹೊಣೆಗಾರಿಕೆ ಕುರಿತು ಸಮಗ್ರ  ಸಮಾಲೋಚನೆ ನಡೆಯಿತು.

ಎಚ್ಚರ – ಐದು ವರ್ಷ ಶಿಕ್ಷೆ, ಒಂದು ಲಕ್ಷ ರೂ. ದಂಡ
ರೈಲುಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ  ಕೈಯಲ್ಲಿ  ಮಕ್ಕಳನ್ನು  ಹಿಡಿದುಕೊಂಡು ಭಿಕ್ಷಾಟನೆ ನಡೆಸುವುದು ಬಾಲನೀತಿ 2015ರ ನಿಯಮ ಪ್ರಕಾರ ಐದು ವರ್ಷಗಳ ವರೆಗೆ ಸಜೆ, ಒಂದು ಲಕ್ಷ  ರೂ. ದಂಡ ವಿಧಿಸಬಹುದಾದ ಶಿಕ್ಷೆಯಾಗಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಮಕ್ಕಳನ್ನು  ದುಡಿಸುವುದು, ಭಿಕ್ಷಾಟನೆಗೆ ಬಳಸುವುದು ಇತ್ಯಾದಿ ಕಂಡುಬಂದಲ್ಲಿ ಅಂತಹವರ ವಿರುದ್ಧ  ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next