ಜಕಾರ್ತ : ಇಂಡೋನೇಶ್ಯ ಕರಾವಳಿಯಲ್ಲಿ ಇಂದು ಮಂಗಳವಾರ ನಸುಕಿನ ವೇಳೆ 6.1 ಅಂಕಗಳ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಭೂಕಂಪ ಸಂಭವಿಸಿರುವುದನ್ನು ಅನುಸರಿಸಿ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ; ಅಂತೆಯೇ ಈ ತನಕ ಎಲ್ಲಿಯೂ ಜೀವಹಾನಿ, ನಾಶ ನಷ್ಟ ಸಂಭವಿಸಿರುವ ವರದಿಗಳು ಬಂದಿಲ್ಲ.
ಇಂಡೋನೇಶ್ಯದ ವೈಂಗಾಪು ನಗರದಿಂದ 150 ಕಿ.ಮೀ. ಪಶ್ಚಿಮದ ನೈಋತ್ಯದಲ್ಲಿನ ಸುಂಬಾ ದ್ವೀಕಪದಲ್ಲಿ ಸುಮಾರು 31 ಕಿ.ಮೀ. ಸಾಗರದಾಳದಲ್ಲಿ ಭೂಕಂಪವು ಕೇಂದ್ರೀಕೃತವಾಗಿತ್ತು ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ.
ಈ ಮೊದಲ ಭೂಕಂಪವನ್ನು ಅನುಸರಿಸಿ 5.2 ಅಂಕಗಳ ತೀವ್ರತೆಯ ಇನ್ನೊಂದು ಭೂಕಂಪ ಇದೇ ಪ್ರದೇಶದಲ್ಲಿ ಸಂಭವಿಸಿತು ಎಂದು ಇಂಡೋನೇಶ್ಯದ ಪ್ರಾಕೃತಿಕ ವಿಕೋಪ ನಿರ್ವಹಣ ಸಂಸ್ಥೆ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಇಂಡೋನೇಶ್ಯದ ಜಾವಾ ಮತ್ತು ಸುಮಾತ್ರ ದ್ವೀಪಗಳ ನಡುವಿನ ಸುಂದಾ ಸ್ಟ್ರೇಟ್ ನಲ್ಲಿ ಜ್ವಾಲಾಮುಖೀಯೊಂದು ಕ್ರಿಯಾಶೀಲಗೊಂಡದ್ದನ್ನು ಅನುಸರಿಸಿ ಉಂಟಾಗಿದ್ದ ವಿನಾಶಕಾರಿ ಸುನಾಮಿಗೆ 400 ಮಂದಿ ಬಲಿಯಾಗಿದ್ದರು.