ಹುಬ್ಬಳ್ಳಿ: ನಮ್ಮ ಜೀವನ ಪದ್ಧತಿ ಬದಲಾಯಿಸಿ ಕೊಳ್ಳುವುದರಿಂದ ಪಾರ್ಶ್ವವಾಯು ಭಯದಿಂದ ದೂರವಿರಬಹುದು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ನಗರದ ಶ್ರೀ ಬಾಲಾಜಿ ಆಸ್ಪತ್ರೆಯಲ್ಲಿ ಶನಿವಾರ ಜರುಗಿದ ಪಾರ್ಶ್ವವಾಯು ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೃದ್ರೋಗ, ಮಿದುಳು ರೋಗ ಮುಂತಾದ ಕೆಲವು ರೋಗಗಳನ್ನು ನಿಯಂತ್ರಿಸಲು ಉತ್ತಮ ಆಹಾರ, ಒತ್ತಡ ರಹಿತ ಬದುಕು, ದಿನನಿತ್ಯ ನಿಗದಿತ ವ್ಯಾಯಾಮ ಮಾಡಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ಬಾಲಾಜಿ ಆಸ್ಪತ್ರೆ ವೈದ್ಯರ ಕಾರ್ಯ ಶ್ಲಾಘನೀಯ ಎಂದರು.
ನರರೋಗ ತಜ್ಞ ಹಾಗೂ ಬಾಲಾಜಿ ಆಸ್ಪತ್ರೆಯ ಚೇರ್ಮನ್ ಡಾ| ಕ್ರಾಂತಿ ಕಿರಣ ಮಾತನಾಡಿ, ಮನುಷ್ಯನ ಸಾವಿಗೆ ಎರಡನೇ ಪ್ರಮುಖ ಕಾರಣ ಪಾರ್ಶ್ವವಾಯು. 50 ವರ್ಷ ಮೀರಿದವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಜಗತ್ತಿನಲ್ಲಿ ಪ್ರತಿವರ್ಷ 17 ಮಿಲಿಯನ್ ಜನ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದು, ಇವರಲ್ಲಿ ಪ್ರತಿವರ್ಷ 7 ಮಿಲಿಯನ್ ಜನ ಸಾಯುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈಫೈ ಹಾಗೂ ಪಾರ್ಶ್ವವಾಯು ತಡೆ ಕುರಿತ ಮಾಹಿತಿ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಆಸ್ಪತ್ರೆಯಿಂದ ಶಿರೂರ ಪಾರ್ಕ, ಶ್ರೀ ಕಾಡಸಿದ್ದೇಶ್ವರ ಕಾಲೇಜು ಮೂಲಕ ಕಿಮ್ಸ್ ಮುಂಭಾಗದ ಮಹಾತ್ಮ ಗಾಂಧಿ ಪುತ್ಥಳಿವರೆಗೆ ಜಾಗೃತಿ ಜಾಥಾ ನಡೆಯಿತು.
ಮುಖಂಡರಾದ ಮಾ. ನಾಗರಾಜ, ಸುಧೀರ ಸರಾಫ್, ಜಯತೀರ್ಥ ಕಟ್ಟಿ, ಉಮೇಶ ದುಶಿ, ಮಹೇಶ ಬುರ್ಲಿ ಇತರರಿದ್ದರು. ಆಸ್ಪತ್ರೆ ಆಡಳಿತಾಧಿ ಕಾರಿ ಡಾ| ಮೊಹಿತೆ ಸ್ವಾಗತಿಸಿದರು. ಡಾ| ಶೋಭಾ ಕ್ರಾಂತಿ ಕಿರಣ ವಂದಿಸಿದರು.