ತಿ.ನರಸೀಪುರ: ಬನ್ನೂರು ಪುರಸಭೆಯ 23 ವಾರ್ಡ್‌ಗಳಿಗೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಶಾಸಕ ಎಂ. ಅಶ್ವಿನ್ ಕುಮಾರ್ ಹೇಳಿದರು.
ಬನ್ನೂರು ಪಟ್ಟಣದ ಸರ್ವಮಂಗಳ ಕಲ್ಯಾಣ ಮಂಟದಪದಲ್ಲಿ ನಡೆದ ಆಕಾಂಕ್ಷಿಗಳು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇದು ಸ್ಥಳೀಯ ಸಂಸ್ಥೆ ಚುನಾವಣೆಯಾಗಿರುವುದರಿಂದ ಇಲ್ಲಿ ಯಾವುದೇ ಹಂತದ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ.
ಸ್ಥಳೀಯವಾಗಿ ಚುನಾವಣೆ ಎದುರಿಸಬೇಕಾಗುತ್ತದೆ. ಕೆಲವು ವಾರ್ಡ್‌ಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಅಂತಹ ಕಡೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಿಎಂ ಭೇಟಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರಕ್ಕೆ ಬರಲಿದ್ದು, ಚುನಾವಣಾ ನೀತಿ ಸಂಹಿತೆಯಿಂದ ಅವರ ಭೇಟಿ ವಿಳಂಬವಾಗಿದೆ. ಮುಂದಿನ ತಿಂಗಳು ಅವರು ಭೇಟಿ ನೀಡಲಿದ್ದಾರೆ. ಬನ್ನೂರು ಪುರಸಭೆಯನ್ನು ಜೆಡಿಎಸ್ ತೆಕ್ಕೆಗೆ ಅಧಿಕಾರ ಸಿಗುವಂತೆ ಮಾಡಿದರೆ ಬನ್ನೂರು ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗುತ್ತದೆ.
ಈ ಹಿನ್ನೆಲೆಯಲ್ಲಿ ಒಮ್ಮತದಿಂದ ಅಭ್ಯರ್ಥಿಗಳು ಕೆಲಸ ಮಾಡಬೇಕಿದೆ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೆಲಸ ಮಾಡಬೇಕು ಎಂದು ಶಾಸಕರು ಸಲಹೆ ನೀಡಿದರು. ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಬಿ.ಸಿ.ಪಾರ್ಥಸಾರಥಿ, ಬನ್ನೂರು ಹೋಬಳಿ ಅಧ್ಯಕ್ಷ ಕುಮಾರ್, ವೈ.ಎಸ್.ರಾಮಸ್ವಾಮಿ, ಕೃಷ್ಣಪ್ಪ, ಎಪಿಎಂಸಿ ಸದಸ್ಯ ಸಿದ್ದಪ್ಪ, ಸಂಭುದೇವನಪುರ ರಮೇಶ, ದೀಪ್‌ದರ್ಶನ್ ಮತ್ತಿತರರು ಹಾಜರಿದ್ದರು.