Advertisement

ಮಾನವ ಕಳ್ಳ ಸಾಗಾಣಿಕೆ ತಡೆಗೆ ಶ್ರಮಿಸಿ

04:21 PM Apr 13, 2022 | Team Udayavani |

ದಾವಣಗೆರೆ: ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ ನಾಯಕ ಹೇಳಿದರು.

Advertisement

ನಗರದ ರೋಟರಿ ಬಾಲಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ನೆರಳು ಬೀಡಿ ಕಾರ್ಮಿಕರ ಅಸೋಸಿಯೇಷನ್‌, ಇತರೆ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತೆ ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್‌ ಇಲಾಖೆ ಹಾಗೂ ಸಾರ್ವಜನಿಕರ ಪಾತ್ರ ಬಹು ಮುಖ್ಯವಾಗಿದೆ ಎಂದರು.

ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿವೆ. ದಾವಣಗೆರೆಯಲ್ಲಿ ಇತ್ತೀಚಿಗೆ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದ ನವಜಾತ ಶಿಶು ಪ್ರಕರಣವೇ ಇದಕ್ಕೆ ಸಾಕ್ಷಿ. ಮಾನವ ಕಳ್ಳ ಸಾಗಾಣಿಕೆ ಪ್ರಕರಣ ತಡೆಯುವಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮಹಿಳೆಯರ ಸಂರಕ್ಷಣೆಗಾಗಿ ಇರುವಂತಹ ಅನೇಕ ಕಾನೂನುಗಳ ಬಗ್ಗೆ ಮಹಿಳೆಯರಿಗೆ ಸೂಕ್ತ ಮಾಹಿತಿ ಮತ್ತು ಅರಿವು ಇಲ್ಲ. ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವಂತಹ ಕೆಲಸ ಮಾಡಲಾಗುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಗ್ಯಾಂಗ್‌ ರೇಪ್‌, ಕೌಟುಂಬಿಕ ಕಲಹ, ಬಾಲ್ಯವಿವಾಹದಂತಹ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿಯೊಬ್ಬ ಮಹಿಳೆಯರು ಶಿಕ್ಷಣ ಹಾಗೂ ಕಾನೂನಿನ ಅರಿವು ಪಡೆದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆತು ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

Advertisement

ದಾವಣಗೆರೆ ನಗರ ಪೊಲೀಸ್‌ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಮಾತನಾಡಿ, ದಾವಣಗೆರೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳು ನಶೆಯಲ್ಲಿ ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ಅನೇಕ ಅಪರಾಧ ಮಾಡುತ್ತಾರೆ. ಆದ್ದರಿಂದ ಪ್ರತಿಯೊಬ್ಬ ತಾಯಂದಿರು ಮಕ್ಕಳ ಚಲನವಲನದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಒಂದೊಮ್ಮೆ ಇಂತಹ ಕೃತ್ಯದಲ್ಲಿ ತೊಡಗಿದ್ದಾನೆ ಎಂಬ ವಿಷಯ ತಿಳಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ಅಪರಾಧಿಗೆ ಶಿಕ್ಷೆ ಕೊಡಿಸಿ ಅಂತಹ ಪ್ರಕರಣಗಳನ್ನು ನಿಯಂತ್ರಿಸಬಹುದು ಎಂದರು.

ಹಿರಿಯ ವಕೀಲ ಎಲ್.ಎಚ್. ಅರುಣ್‌ಕುಮಾರ್‌ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಮಹಿಳೆಯರು ಮತ್ತು ಮಕ್ಕಳ ಪರಿಸ್ಥಿತಿ ಅಷ್ಟೊಂದು ಆರೋಗ್ಯಕರವಾಗಿಲ್ಲ. ಮಹಿಳೆಯರು ಗರ್ಭದಿಂದ ಗೋರಿಯವರೆಗೆ ಈಗಲೂ ಸಾಕಷ್ಟು ಶೋಷಣೆಗೆ ತುತ್ತಾಗುತ್ತಿದ್ದಾರೆ. ಮಹಿಳೆಯರ ಸಂರಕ್ಷಣೆಗೆ ಇರುವ ಅನೇಕ ಕಾನೂನುಗಳ ಅನುಷ್ಠಾನದ ಕೊರತೆಯಿಂದ ಮಹಿಳೆಯರಿಗೆ ದೊರಯಲೇಬೇಕಾದ ನ್ಯಾಯ ಸಿಗುತ್ತಿಲ್ಲ. ಕಾನೂನು ಬಗ್ಗೆ ತಿಳಿದು ಅನುಷ್ಠಾನಕ್ಕೆ ತರುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆಯುವುದು ಆದ್ಯ ಕರ್ತವ್ಯ ಎಂದು ತಿಳಿಸಿದರು.

ಮಹಿಳಾ ಪೊಲೀಸ್‌ ಠಾಣೆ ನಿರೀಕ್ಷಕಿ ವೈ.ಎಸ್‌. ಶಿಲ್ಪ ಮಾತನಾಡಿ, ಪ್ರತಿಯೊಬ್ಬರೂ ಕಾನೂನು ಅರಿವಿನ ಮೂಲಕ ಸುರಕ್ಷಿತವಾಗಿರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ಮಾತನಾಡಿ, ಸಮೀಕ್ಷೆ ಪ್ರಕಾರ ಮಹಿಳೆಯರ ಮೇಲೆ ಪ್ರತಿ 15 ನಿಮಿಷಕ್ಕೊಂದು ಅತ್ಯಾಚಾರ, 90 ನಿಮಿಷಕ್ಕೆ ದೌರ್ಜನ್ಯ, 39 ಗಂಟೆಗೊಂದು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ, 48 ಗಂಟೆಗೊಂದು ವರದಕ್ಷಿಣೆ ಸಾವು ಆಗುತ್ತಿವೆ. ಕಾನೂನು ಅರಿವು ಪಡೆಯುವ ಮೂಲಕ ಪ್ರತಿಯೊಬ್ಬ ಮಹಿಳೆಯರೂ ಶೋಷಣೆಯ ವಿರುದ್ಧ ಹೋರಾಟ ಮಾಡಬೇಕು ಎಂದರು. ಮಹಿಳಾ ಸಂಘಟನೆ ಒಕ್ಕೂಟದ ಆಸ್ಮಬಾನು ಇದ್ದರು. ಕರಿಬಸಪ್ಪ ನಿರೂಪಿಸಿದರು.

ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ಕೊಡಿ

ಪೊಲೀಸ್‌ ಇಲಾಖೆ ಭಯ ತರಿಸುವ ಇಲಾಖೆ ಅಲ್ಲ, ಜನರಿಗೆ ನೆರವಾಗುವ ಇಲಾಖೆ. ದಾವಣಗೆರೆಯಲ್ಲಿ ಇತ್ತೀಚಿಗೆ ಹಣ, ಮೊಬೈಲ್‌ ಕಿತ್ತೂಯ್ಯುವ, ಕಳವು ಪ್ರಕರಣ ಹೆಚ್ಚಾಗುತ್ತಿವೆ. ದೆಹಲಿಯಿಂದ ಒಂದು ಗ್ಯಾಂಗ್‌ ಬಂದಿದ್ದು, ಬಾಗಿಲು ಹಾಕಿದ ಮನೆಗಳಲ್ಲಿ ಅರ್ಧ ಗಂಟೆಯಲ್ಲಿ ಕಳ್ಳತನ ನಡೆದಿರುತ್ತದೆ. ಸಂಶಯವಾಗಿ ತಿರುಗಾಡುವ ವ್ಯಕ್ತಿ ಬಗ್ಗೆ ಸುಳಿವು ಸಿಕ್ಕರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next