Advertisement

ಹಳ್ಳಿಗಳನ್ನು ಮಹಿಳಾ ಶೋಷಣೆ ಮುಕ್ತವಾಗಿಸಲು ಪಣ

11:48 PM Nov 25, 2022 | Team Udayavani |

ಬೆಂಗಳೂರು: ಹಳ್ಳಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ತ್ತಿರುವ ಬೆನ್ನಲ್ಲೇ, ಗ್ರಾಮೀಣ ಪ್ರದೇಶ ಗಳನ್ನು ಮಹಿಳಾ ಶೋಷಣೆ ಮುಕ್ತವನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆ ಹಾಕಿಕೊಂಡಿದೆ.

Advertisement

ಈಗಾಗಲೇ “ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್‌ ಅಭಿಯಾನ’ ಚಾಲನೆಯಲ್ಲಿದೆ. ಇದರ ಜತೆಗೆ ಗ್ರಾಮಗಳನ್ನು “ಮಹಿಳಾ ಸ್ನೇಹಿ’ ಮಾಡಲು ಇಲಾಖೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.

“ಲಿಂಗ ಆಧಾರಿತ ಹಿಂಸಾಚಾರ ಕೊನೆ ಗೊಳಿಸುವುದು’ ಈ ವಿಶೇಷ ಅಭಿಯಾನದ ಘೋಷ ವಾಕ್ಯವಾಗಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ನ.25ರಿಂದ ಅಭಿಯಾನ ಪ್ರಾರಂಭವಾಗಿದ್ದು, ಡಿ. 23ರ ವರೆಗೆ ಒಟ್ಟು ಒಂದು ತಿಂಗಳ ಕಾಲ ಈ ಅಭಿಯಾನ ನಡೆಯಲಿದೆ. ಅಂತಾ ರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆಯಾದ ನ.25ರಂದು ಗ್ರಾಮ ಪಂಚಾಯತ್‌ಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೀನ್‌ದಯಾಳ್‌ ಅಂತ್ಯೋ ದಯ ಯೋಜನೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಮಹತ್ವಾಕಾಂಕ್ಷಿ ಯೋಜನೆಯಡಿ ಲಿಂಗ ಆಧಾರಿತ ತಾರತಮ್ಯ ತೊಡೆದುಹಾಕಲು, ಲಿಂಗ ನ್ಯಾಯಯುತ ಸಮಾಜವನ್ನು ಸ್ಥಾಪಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಲಿಂಗ-ಆಧಾರಿತ ದೌರ್ಜನ್ಯ ಮತ್ತು ಹಿಂಸಾಚಾರ ಕೊನೆಗಾಣಿಸುವುದು ಹಾಗೂ ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಭಿಯಾನದ ಪ್ರಮುಖ ಚಟುವಟಿಕೆಗಳು
– ನ. 25ರಂದು ಎಲ್ಲ ಗ್ರಾ.ಪಂ.ಗಳಲ್ಲಿ ವಿಶೇಷ ಗ್ರಾಮ ಸಭೆ ಆಯೋಜನೆ.
– ಲಿಂಗ-ಆಧಾರಿತ ದೌರ್ಜನ್ಯ, ಮಾನವ ಕಳ್ಳ ಸಾಗಣೆ ಇತರ ವಿಷಯಗಳ ಕುರಿತು ಚರ್ಚೆ, ಜಾಥಾ ಇತ್ಯಾದಿ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದು.
– ಲಿಂಗ ಸಮಾನತೆ ಹಾಗೂ ಲಿಂಗ-ಆಧಾರಿತ ದೌರ್ಜನ್ಯ ಕುರಿತು ಗ್ರಾ.ಪಂ. ಸದಸ್ಯರಿಗೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸುವುದು.
– ಗ್ರಾಮೀಣ ಮಹಿಳಾ ಕೂಲಿ ಕಾರ್ಮಿಕರಿಗೆ ಲಿಂಗ-ಆಧಾರಿತ ದೌರ್ಜನ್ಯ ಕುರಿತು ಅರಿವು ಮೂಡಿಸುವುದು.
– ದೀನ್‌ದಯಾಳ್‌ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಅಡಿಯಲ್ಲಿ ರಚಿಸಲಾದ ಮಹಿಳಾ ಸ್ವಸಹಾಯ ಸಂಘಗಳು, ಗ್ರಾ.ಪಂ. ಮಟ್ಟದ ಒಕ್ಕೂಟಗಳ ಚಟುವಟಿಕೆಗಳಲ್ಲಿ ಮತ್ತು ಕಾರ್ಯಕ್ರಮಗಳನ್ನು ಭಾಗಿಯಾಗುವುದು.

Advertisement

“ನವ ಚೇತನ’ ಅಭಿಯಾನಕ್ಕೆ ಚಾಲನೆ
ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಲಿಂಗ ಅಸಮಾನತೆ ಹೋಗಲಾಡಿಸಿ, ಗ್ರಾಮಗಳನ್ನು ಮಹಿಳಾ ಸ್ನೇಹಿಗಳನ್ನಾಗಿಸುವ ನಿಟ್ಟಿನಲ್ಲಿ ದೇಶವ್ಯಾಪಿ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಹಮ್ಮಿಕೊಂಡಿರುವ ವಿಶೇಷ ಅಭಿಯಾನ “ನವ ಚೇತನ’ಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಗಿರಿರಾಜ್‌ ಸಿಂಗ್‌ ಶುಕ್ರವಾರ ಚಾಲನೆ ನೀಡಿದರು. ದಿಲ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ನಡೆಯುವ ಯಾವುದೇ ದೌರ್ಜನ್ಯವನ್ನು ಧರ್ಮದ ಚೌಕಟ್ಟಿನ ಮೂಲಕ ನೋಡಬಾರದು. ಅಂತಹ ಘಟನೆಗಳನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಎಲ್ಲರೂ ಸಂಪೂರ್ಣವಾಗಿ ಖಂಡಿಸಬೇಕು ಎಂದು ಹೇಳಿದರು.

ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ನಾಲ್ಕು ವಾರಗಳ ಕಾಲ ಲಿಂಗ-ಆಧಾರಿತ ದೌರ್ಜನ್ಯ ನಿವಾರಣೆ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಮಹಿಳೆಯ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಮಹಿಳಾ ಸ್ನೇಹಿ ಗ್ರಾಮಗಳನ್ನಾಗಿ ಮಾಡಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
– ಉಮಾ ಮಹಾದೇವನ್‌,
ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next