Advertisement

ವೀರಶೈವ ಸಮಾಜ ಮೇಲೆತ್ತಲು ಶ್ರಮಿಸಿ

09:14 PM Oct 13, 2019 | Lakshmi GovindaRaju |

ಕೊಳ್ಳೇಗಾಲ: ವೀರಶೈವ ಸಮಾಜ ತುಳಿತಕ್ಕೆ ಒಳಗಾಗುತ್ತಿದ್ದು, ಸಮಾಜದ ಸಂಘಟನೆಗಳು ಸಂಘಟಿತರಾಗಿ ಸಮಾಜವನ್ನು ಮತ್ತಷ್ಟು ಮೇಲೆತ್ತುವ ಪ್ರಯತ್ನ ಮಾಡಬೇಕು ಎಂದು ರಾಷ್ಟ್ರೀಯ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಉಪಾಧ್ಯಕ್ಷೆ ಹೇಳಿದರು.ಪಟ್ಟಣದ ವೆಂಕಟೇಶ್ವರ ಮಹಲ್‌ನಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಸಮಾಜ ಬಲಪಡಿಸಿ: ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ಇತ್ತೀಚಿಗೆ ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡದೆ ಸಂಘಟನೆಗಳ ಮೂಲಕ ಮತ್ತಷ್ಟು ಸಮಾಜವನ್ನು ಬಲಪಡಿಸುವ ಪ್ರಯತ್ನ ಮಾಡಬೇಕು ಎಂದರು.

ಒಗ್ಗಟ್ಟು ಪ್ರದರ್ಶಿಸಿ: ಸಮಾಜ ದೊಡ್ಡದೇ ಹೊರತು ಪಕ್ಷ ಅಲ್ಲ. ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಸಂಘವನ್ನು ಮತ್ತಷ್ಟು ಸಧೃಡಗೊಳಿಸುವ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಬೇಕು. ಸಂಘದ ಬಲವರ್ಧನೆಗೆ ಪ್ರತಿಯೊಬ್ಬರು ಕೈಜೋಡಿಸಿ ನೂತನ ಅಧ್ಯಕ್ಷರೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಸಂಘಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.

ಸಂಘವನ್ನು ಬಲಿಷ್ಠಗೊಳಿಸಬೇಕು: ವೀರಶೈವ ಲಿಂಗಾಯತ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಸಮಾಜದ ಹೆಸರಿಗೆ ಯಾವುದೇ ತರಹದ ಧಕ್ಕೆಗಳು ಬರದಂತೆ ಸಂಘವನ್ನು ಬಲಿಷ್ಠಗೊಳಿಸಬೇಕು. ನೂತನ ಪದಾಧಿಕಾರಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಭವನ ನಿರ್ಮಾಣ ಮಾಡಲು ಪ್ರಮುಖ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ರಾಜಕೀಯ ಶಕ್ತಿ ತುಂಬಿ: ಚುನಾವಣಾ ಸಂದರ್ಭದಲ್ಲಿ ಯಾವುದೇ ಪಕ್ಷದಿಂದ ಸಮಾಜದವರಿಗೆ ಟಿಕೆಟ್‌ ಲಭ್ಯವಾದ ಪಕ್ಷದಲ್ಲಿ ಪ್ರತಿಯೊಬ್ಬರು ಅವರನ್ನು ಬೆಂಬಲಿಸಿ ರಾಜಕೀಯ ಶಕ್ತಿ ತುಂಬುವ ಪ್ರಯತ್ನ ಮಾಡಬೇಕು. ಆಗಮಾತ್ರ ಸಮಾಜ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂದು ಮುಖಂಡರಲ್ಲಿ ಮನವಿ ಮಾಡಿದರು.

Advertisement

ಸಂಘವನ್ನು ಪ್ರೋತ್ಸಾಹಿಸಿ: ಮಹಿಳಾ ಘಟಕ ಮತ್ತು ಯುವ ಘಟಕಗಳು ಮತ್ತಷ್ಟು ಸಂಘಟಿತರಾಗಿ ಸಮಾಜ ಬಲವರ್ಧನೆಗೆ ಸಹಕಾರಿಯಾಗಬೇಕು. ಸಂಘಟನೆಯ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಮಾಜದ ಸಂಘಟನೆ ಪಕ್ಷಾತೀತವಾಗಿ ಆಗಬೇಕು. ಸಂಘದಲ್ಲಿ ಯಾವುದೇ ತರಹದ ಒಡಕುಗಳು ಉಂಟಾಗದಂತೆ ಸಂಘವನ್ನು ನಡೆಸಿಕೊಂಡು ಹೋಗಬೇಕು ಮತ್ತು ಸಂಘದ ಪದಾಧಿಕಾರಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ನೂತನ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.

ಷಡ್ಯಂತ್ರಕ್ಕೆ ಕಿವಿಗೊಡಬೇಡಿ: ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಮಾತನಾಡಿ, ಲಿಂಗಾಯತ ಧರ್ಮದಲ್ಲಿ ಸುಮಾರು 109 ಪಂಗಡಗಳು ಇದ್ದು, ಎಲ್ಲಾ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಧರ್ಮವನ್ನು ಹೊಡೆಯುವ ಷಡಂತ್ರ್ಯ ನಡೆಯುತ್ತಿದ್ದು, ಇದಕ್ಕೆ ಕಿವಿಗೊಡಬಾರದೆಂದು ಹೇಳಿದರು.

ಸಮಾಜದ ಮಕ್ಕಳಿಗೆ ನೆರವು: ಪ್ರತಿವರ್ಷ ರಾಜ್ಯ ಸಂಘದ ವತಿಯಿಂದ ಸಂಘ ಸದಸ್ಯತ್ವ ನಿಧಿ ಒಂದುವರೆ ಕೋಟಿ ಸಂಗ್ರಹವಾಗಿದ್ದು, ಬಂದ ಸದಸ್ಯತ್ವ ನಿಧಿಯಿಂದ ವಿದ್ಯಾರ್ಥಿನಿಯರಿಗೆ ಸಾವಿರ ರೂ. ಹಾಗೂ ವಿದ್ಯಾರ್ಥಿಗಳಿಗೆ ಸಾವಿರ ರೂ. ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಯಾವುದೇ ಅಪಕೀರ್ತಿ ತರಲ್ಲ: ನೂತನ ಅಧ್ಯಕ್ಷ ಮಹದೇವ ಪ್ರಸಾದ್‌ ಮಾತನಾಡಿ, ಸಂಘ ಬಲವರ್ಧನೆಗೆ ಸಾಕಷ್ಟು ದುಡಿಯುವ ವಿಶ್ವಾಸ ವ್ಯಕ್ತಪಡಿಸಿದ ಅವರು ಸಂಘದ ಚಟುವಟಿಕೆಯಲ್ಲಿ ಅಪಸ್ವರ ಬಂದ ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಘ ಬಲವರ್ಧನೆ ಮಾಡುವವರಿಗೆ ಅವಕಾಶ ಕಲ್ಪಿಸಿಕೊಡುತ್ತೇನೆ ಹೊರತು ಸಂಘಕ್ಕೆ ಯಾವುದೇ ತರಹದ ಅಪಕೀರ್ತಿ ತರುವ ಕೆಲಸ ಮಾಡುವುದಿಲ್ಲ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ತೋಟೇಶ್‌, ಮಾಜಿ ಅಧ್ಯಕ್ಷ ಪುಟ್ಟಮಲ್ಲಪ್ಪ, ಜಿಲ್ಲಾ ಅಧ್ಯಕ್ಷ ಶಿವಬಸಪ್ಪ, ಹನೂರು ಅಧ್ಯಕ್ಷ ಬಸವರಾಜಪ್ಪ, ಯಳಂದೂರು ಅಧ್ಯಕ್ಷ ಪುಟ್ಟಬಸಪ್ಪ, ಕರವೇ ಗೌರವಾದ್ಯಕ್ಷ ಪ್ರಭಾಕರ್‌, ಮುಖಂಡರಾದ ಪುಟ್ಟಣ್ಣ, ನಂಜುಂಡಸ್ವಾಮಿ, ವೀರಮಾಧು, ಪ್ರಭಾಕರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next