ರಾಯಚೂರು: ನಗರಸಭೆ ಕುರಿತು ಜನರಲ್ಲಿ ಕೆಟ್ಟ ಅಭಿಪ್ರಾಯ ಮನೆಮಾಡಿದ್ದು, ಅದು ಹೋಗಬೇಕಾದರೆ ಅಧಿಕಾರಿಗಳು, ಸಿಬ್ಬಂದಿ ಇನ್ನೂ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿದ ಅವರು, ನಗರದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವುದು ಮತ್ತು ಸ್ವಚ್ಛತೆ ಕಾಪಾಡುವುದು ನಗರಸಭೆ ಆದ್ಯ ಕರ್ತವ್ಯವಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದು ಅಕ್ಷಮ್ಯ. ಜನರಿಗೆ ಉತ್ತಮ ಸೇವೆ ನೀಡಿದರೆ ಅವರು ಎಂದಿಗೂ ವಿನಾಕಾರಣ ದೂಷಿಸುವುದಿಲ್ಲ ಎಂದರು.
ಈಗ ಮಳೆಗಾಲ ಶುರುವಾಗುತ್ತಿದ್ದು, ಮಳೆನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಚರಂಡಿಯಲ್ಲಿ ಸಂಗ್ರಹವಾದ ಹೂಳು, ಘನತ್ಯಾಜ್ಯ ವಿಲೇವಾರಿ ಮಾಡಬೇಕು. ಮುಂಗಾರು ತಡವಾಗಿರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಅವಧಿಯನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜನರ ಆರೋಗ್ಯ ಹದಗೆಡದಂತೆ ಸೇವೆ ಒದಗಿಸಬೇಕು. ಚರಂಡಿ, ಒಳಚರಂಡಿ ವ್ಯವಸ್ಥೆ ಸರಿಯಾಗಿ ನಿರ್ವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕುಡಿಯುವ ನೀರಿನ ವಿಚಾರದಲ್ಲಿ ಜನರಲ್ಲಿ ಮನೆಮಾಡಿದ ಆತಂಕ ದೂರ ಮಾಡಬೇಕಿದೆ ಎಂದರು.
ಸ್ವಚ್ಛತೆ ನಿರ್ವಹಣೆ ಮತ್ತು ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ತೊಂದರೆ ಎದುರಾದರೂ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಸ್ವಚ್ಛತಾ ಕಾರ್ಯಕ್ಕೆ ಬೇಕಾಗುವ ಸಲಕರಣೆಗಳ ಪಟ್ಟಿ ಸಿದ್ಧಮಾಡಿಕೊಳ್ಳಬೇಕು. ಬರುವ ಜೂ.25ರೊಳಗಾಗಿ ಮಳೆಗಾಲ ಎದುರಿಸುವುದಕ್ಕೆ ಸರ್ವಸಿದ್ಧತೆ ಮುಗಿದಿರಬೇಕು ಎಂದು ಸೂಚಿಸಿದರು.
ನಗರಸಭೆಯಲ್ಲಿ ಕೆಲವು ಸಿಬ್ಬಂದಿ ದಕ್ಷತೆಯಿಂದ ಕೆಲಸ ಮಾಡುತ್ತಿಲ್ಲ ಎನ್ನುವ ದೂರುಗಳಿವೆ. ಈ ಬಗ್ಗೆ ಅಧಿಕಾರಿಗಳು ಕ್ರಿಯಾಶೀಲರಾಗಬೇಕು. ಜನರ ಸೇವೆಗೆ ಅಡಚಣೆ ಆಗದ ರೀತಿಯ ಕಾರ್ಯ ನಿರ್ವಹಿಸಬೇಕು. ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಕಾರ್ಯ ನಿರ್ವಹಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ್ಯ ಕಡಗೋಲು, ಪೌರಾಯುಕ್ತ ಗುರುಲಿಂಗಪ್ಪ, ಆರೋಗ್ಯಾಧಿಕಾರಿ ಡಾ| ನಾಗರಾಜ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಇಂಜಿನಿಯರ್ ಚಂದ್ರಕಾಂತ ಸೇರಿ ಇತರರಿದ್ದರು.