ರಾಯಚೂರು: ನಿಗದಿತ ಅವ ಧಿಯೊಳಗೆ ಸೇವೆ ಒದಗಿಸಲು ಆರಂಭಿಸಿದ ಸಕಾಲ ಯೋಜನೆಯಡಿ ಜಿಲ್ಲೆಯನ್ನು 10ನೇ ಸ್ಥಾನದೊಳಗೆ ತರಲು ನಿಟ್ಟಿನಲ್ಲಿ ಸಂಘಟಿತರಾಗಿ ಶ್ರಮಿಸುವಂತೆ ಅಧಿಕಾರಿಗಳಿಗೆ ಎಡಿಸಿ ಆರ್.ಕೆ. ದುರುಗೇಶ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಕಾಲ ಸೇವೆ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಕಾಲ ಸೇವೆಯಡಿ ಪ್ರತಿದಿನ ಬರುವ ಅರ್ಜಿ ಪರಿಶೀಲಿಸಬೇಕು. ಅವುಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸಬೇಕು. ಅದೇ ರೀತಿ ಆನ್‌ಲೈನ್ ಮೂಲಕವು ಪ್ರತಿದಿನ ಲಾಗ್ ಇನ್ ಮಾಡಬೇಕು. ಇ-ಮೇಲ್ ಚೆಕ್ ಮಾಡಬೇಕು. ಜಾರಿಗೊಂಡಿರುವ ಸಕಾಲ ಯೋಜನೆಗಳ ಮಾಹಿತಿ ಸಂಬಂ ಧಿಸಿದ ಇಲಾಖೆಗಳಲ್ಲಿ ರವಾನಿಸಬೇಕು ಎಂದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಕಾಲ ಸೇವೆ ಸಮನ್ವಯ ಸಮಿತಿ ರಚಿಸಿ, ಸಮರ್ಪಕ ಅನುಷ್ಠಾನಕ್ಕೆ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು, ನಿಗದಿತ ಅವಧಿಯಲ್ಲಿ ಅರ್ಜಿ ವಿಲೇವಾರಿ ಮಾಡಬೇಕು ಎಂದರು.
ಸಕಾಲ ಸೇವೆಯಲ್ಲಿ ಎನ್‌ಇಕೆಎಸ್‌ಆರ್‌ಟಿಸಿ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಉಪ ನೋಂದಣಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಅರ್ಜಿ ಶೀಘ್ರ ವಿಲೇವಾರಿ ಮಾಡಬೇಕು ಎಂದರು.
ನೋಟಿಸ್ ಜಾರಿಗೆ ಸೂಚನೆ: ಸಕಾಲ ಸಮನ್ವಯ ಸಮಿತಿ ಸಭೆಗೆ ಗೈರು ಹಾಜರಾದ ವಿವಿಧ ಇಲಾಖೆ ಅ ಧಿಕಾರಿಗಳಿಗೆ ನೋಟಿಸ್ ಜಾರಿಗೆ ಸೂಚಿಸಿದರು.
ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ್, ತಹಶೀಲ್ದಾರ್ ಡಾ| ಹಂಪಣ್ಣ ಸಜ್ಜನ್ ಸೇರಿದಂತೆ ಇತರರಿದ್ದರು.