ಹುಬ್ಬಳ್ಳಿ: ಕ್ಷಯ ರೋಗ ಮುಕ್ತ ದೇಶ ಮಾಡಬೇಕೆನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ತರ ಹೆಜ್ಜೆ ಇರಿಸಿದ್ದು, ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಕ್ಷಯ ರೋಗ ಮುಕ್ತ ಮಾಡಲು ಆರೋಗ್ಯ ಇಲಾಖೆ ಪ್ರಯತ್ನಿಸಬೇಕೆಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಹೇಳಿದರು.
ಮಿನಿ ವಿಧಾನಸೌಧ ತಾಪಂ ಸಭಾಭವನದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಎಲ್ಲೆಡೆ ಕ್ಷಯ ರೋಗ ವ್ಯಾಪಕ ತಪಾಸಣೆ ಜತೆಯಲ್ಲಿ ಅದನ್ನು ಸಂಪೂರ್ಣವಾಗಿ ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ತರ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ತಾಲೂಕಾಡಳಿತದಿಂದ ಪ್ರತಿ ಗ್ರಾಮ ಕ್ಷಯ ರೋಗ ಮುಕ್ತ ಗ್ರಾಮ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯತತ್ಪರವಾಗಬೇಕೆಂದರು.
ಆರೋಗ್ಯ ಇಲಾಖೆಯ ಮೌನೇಶ ಬಡಿಗೇರ ಮಾತನಾಡಿ, ತಾಲೂಕಿನಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ಷಯ ರೋಗದ ತಪಾಸಣೆ ಕೈಗೊಳ್ಳಲಾಗಿದೆ. ಕ್ಷಯದಿಂದ ಬಳಲುತ್ತಿರುವ ವ್ಯಕ್ತಿಯ ಸುತ್ತಮುತ್ತಲಿನ ಸುಮಾರು 1 ಸಾವಿರ ಜನರ ವ್ಯಾಪ್ತಿಯನ್ನು ತಪಾಸಣೆಗೆ ಒಳಪಡಿಸುವ ಮೂಲಕ ಕ್ಷಯ ರೋಗ ಮುಕ್ತ ಗ್ರಾಮಕ್ಕೆ ಕಾರ್ಯತತ್ಪರವಾಗಿದ್ದೇವೆ. ಕ್ಷಯದಿಂದ ಬಳಲುತ್ತಿರುವವರಿಗೆ ಪೌಷ್ಟಿಕ ಆಹಾರ ಸೇವನೆಗಾಗಿ 500 ರೂ. ಸಹಾಯಧನ ಸಹ ನೀಡಲಾಗುತ್ತಿದೆ. ತಾಲೂಕಿನಾದ್ಯಂತ ಕೊರೊನಾ ಲಸಿಕೆ ಸಮರ್ಪಕವಾಗಿ ನೀಡಲಾಗಿದ್ದು, ಶೇ.97 ರಷ್ಟು ಲಸಿಕೆ ನೀಡಲಾಗಿದೆ. ಗ್ರಾಮದಲ್ಲಿ ಶೇ.100 ರಷ್ಟು ಪೊಲೀಯೋ ಹನಿ ಹಾಕಲಾಗಿದೆ ಎಂದರು.
ಪಂಚಾಯತ ರಾಜ್ ಇಲಾಖೆಯಿಂದ ಬಹುತೇಕ ಕಾಮಗಾರಿಗಳು ಪ್ರಗತಿಯಲ್ಲಿ ಇವೆ. ಯಾವುದೇ ಕಾರಣಕ್ಕೂ ಅನುದಾನ ಹಿಂದಿರುಗದಂತೆ ನೋಡಿಕೊಳ್ಳಬೇಕು. ಪ್ರಗತಿಯಲ್ಲಿರುವ ಕಾಮಗಾರಿಗಳು ತ್ವರಿತವಾಗಿ ಮುಕ್ತಾಗಯಗೊಳಿಸಬೇಕು ಎಂದು ತಾಪಂ ಆಳಿತಾಧಿಕಾರಿ ದೀಪಕ ಮಡಿವಾಳ ಹೇಳಿದರು.
ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಬಣ್ಣ ಹಚ್ಚಲಾಗುತ್ತಿದ್ದು, ಅಭಿವೃದ್ದಿ ಕಾಮಗಾರಿಗಳನ್ನು ಸಹ ಕೈಗೊಳ್ಳಲಾಗಿದೆ. ಆದಷ್ಟು ಬೇಗನೆ ಎಲ್ಲವನ್ನು ಮುಕ್ತಾಗೊಳಿಸಬೇಕೆಂದು ಸೂಚನೆ ನೀಡಲಾಯಿತು. ಹೆಸ್ಕಾಂ ಇಲಾಖೆಯಿಂದ ಬಾಕಿ ಉಳಿದಿರುವ ಕಾಮಗಾರಿಗಳನ್ನು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್ ಮೀಟರ್ ಅಳವಡಿಸುವ ಕಾರ್ಯ ಬೇಗ ಮುಗಿಸಬೇಕೆಂದು ಹೆಸ್ಕಾಂ ಇಲಾಖೆಯ ಕಿರಣಕುಮಾರಗೆ ಸೂಚನೆ ನೀಡಿದರು.
ಕೃಷಿ ಇಲಾಖೆ ವಿವಿಧ ಯೋಜನೆಗಳು ಹಾಗೂ ಅದನ್ನು ರೈತರಿಗೆ ತಲುಪಿಸಿರುವ ಕುರಿತು ಸಹಾಯಕ ನಿರ್ದೇಶಕ ರಾಜಶೇಖರ ಅನಗೌಡರ ಮಾಹಿತಿ ನೀಡಿದರು. ಸಣ್ಣ ನೀರಾವರಿ, ಲೋಕೋಪಯೋಗಿ, ತೋಟಗಾರಿಕೆ, ಪಶು ಸಂಗೋಪನೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ರೇಷ್ಮೆ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಗತಿಯ ಮಾಹಿತಿ ನೀಡಿದರು.
ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಹೊಂಡ ನಿರ್ಮಿಸಬೇಕು, ಬದುಗಳನ್ನು ನಿರ್ಮಿಸುವಂತೆ ರೈತರಿಗೆ ಜಾಗೃತಿ ಮೂಡಿಸಬೇಕು. ಬದು ಬೇಸಾಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಇಲಾಖೆಯಿಂದ ರೈತರಿಗೆ ಜಾಗೃತಿ ಮೂಡಿಸಬೇಕು.
–
ಗಂಗಾಧರ ಕಂದಕೂರ, ತಾಪಂ ಇಒ