Advertisement

ಬಡವರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು: ನೆಲ್ಲಿಕುನ್ನು

10:56 PM Sep 18, 2019 | Sriram |

ಕಾಸರಗೋಡು: ಆರ್ಯ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ನೇತೃತ್ವದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿಕಲಚೇತನ ವಿದ್ಯಾರ್ಥಿಗಳಿಗೆ ಸಹಾಯಧನ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸಮ್ಮಾನ ಸಮಾರಂಭ ಅಣಂಗೂರು ಶ್ರೀ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

Advertisement

ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ಹೇಗಿರಬೇಕು ಎಂಬ ಪರಿಕಲ್ಪನೆಯೇ ಸಮಾಜಕ್ಕೆ ಪ್ರೇರಣ ಶಕ್ತಿ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಪ್ರತಿಭೆಗಳು ಅರಳುತ್ತವೆ. ನಮ್ಮ ಆಚಾರ-ವಿಚಾರ ಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಸಮಾಜ ಸಂಘಗಳು ಬಲಿಷ್ಠವಾದಾಗ ಇಡೀ ಸಮಾಜವೇ ಬಲಿಷ್ಠವಾಗುತ್ತದೆ. ದುರ್ಗೆಯ ಆರಾಧಕರೂ ಶಿವಾಜಿಯ ಆದರ್ಶಗಳನ್ನು ಮೈಗೂಡಿಸಿಕೊಂಡ ಈ ಸಮಾಜದವರ ಕೆಚ್ಚು, ದೇಶಪ್ರೇಮ ಆದರ್ಶಪ್ರಾಯವಾದುದು ಎಂದು ಹೇಳಿದರು.

ಸಮಾಜ ಸಂಘದ ಅಧ್ಯಕ್ಷ ಯತೀಂದ್ರ ಎ. ಬಹುಮಾನ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಮಾತನಾಡಿ ಎಲ್ಲರನ್ನೂ ಸ್ನೇಹ, ಗೌರವದಿಂದ ಕಾಣಬೇಕು. ನಮ್ಮ ವೈಜ್ಞಾನಿಕವಾದ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಅದಕ್ಕೆ ಅತೀತವಾದ ಭಾಷೆ-ಜಾತಿ-ಧರ್ಮಗಳ ಒಗ್ಗಟ್ಟಿನ ಜೀವನದ ಬಗ್ಗೆ ಭಾರತ ಅಭಿಮಾನಪಡಬೇಕು. ಕೇರಳದ ಹಿಂದುಳಿದ ಸಮುದಾಯದ ಪಟ್ಟಿಯಲ್ಲಿ ಆರ್ಯ-ಮರಾಠ ಸಮಾಜವನ್ನು ಸೇರಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಬಡಜನರ ಶೈಕ್ಷಣಿಕ ಅಭಿವೃದ್ಧಿಗೆ, ನೋವು ನಲಿವುಗಳಿಗೆ ನಾವು ಸ್ಪಂದಿಸಬೇಕು ಎಂದು ಹೇಳಿದರು.

ಮಧುರೈ ಕಾಮರಾಜ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ಹರಿಕೃಷ್ಣ ಭರಣ್ಯ ಮಾತನಾಡಿದರು. ಉದ್ಯಮಿ ಟಿ. ಶಿವಾಜಿ ರಾವ್‌, ಕಾಸರಗೋಡು ನಗರಸಭೆಯ ಮುನ್ಸಿಪಲ್‌ ಕೌನ್ಸಿಲರ್‌ ಜಾಹ್ನವಿ ಕೆ, ನ್ಯಾಯವಾದಿ ಎಲ್ಲೋಜಿ ರಾವ್‌ ಮೆಮೋರಿಯಲ್‌ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷೆ ಪ್ರೇಮಲತಾ ವೈ. ರಾವ್‌, ರಾಯಲ್‌ ಆರ್ಯಾಸ್‌ ದುಬಾೖ ಇದರ ಪ್ರತಿನಿಧಿ ಆಶಿಕ್‌ ರಾವ್‌ ಸಪ್ಟೆàಕರ್‌, ಸಮಾಜ ಸಂಘದ ಕೋಶಾಧಿಕಾರಿ ಯು.ಮೋಹನ್‌ ರಾವ್‌ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀಧರ ರಾವ್‌ ಅವರು ದಿ.ಎಲ್ಲೋಜಿ ರಾವ್‌ ಅವರ ಸಂಸ್ಮರಣಾ ಭಾಷಣ ಮಾಡಿದರು. ಶ್ರೀ ಅಂಬಾ ಭವಾನಿ ಎಜುಕೇಶನ್‌ ಟ್ರಸ್ಟಿನ ಬಗ್ಗೆ ಗೋಪಿನಾಥ ರಾವ್‌ ಮತ್ತು ದಿ| ಎಲ್ಲೋಜಿ ರಾವ್‌ ಎಜುಕೇಶನ್‌ ಟ್ರಸ್ಟಿನ ಬಗ್ಗೆ ರವೀಂದ್ರನಾಥ ಪಾಟೀಲ್‌ ಮಾಹಿತಿ ನೀಡಿದರು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀನಿವಾಸ ರಾವ್‌, ಶ್ರೇಷ್ಠ ರಂಗ ಕಲಾವಿದ ಪ್ರಶಸ್ತಿ ಪಡೆದ ಜಗನ್‌ ಪವಾರ್‌ ಮತ್ತು ಯಕ್ಷ ಗಾನ ಕಲಾವಿದ ಕೊಲ್ಡೊಜಿ ರಾವ್‌ ಅವರನ್ನು ಸಮ್ಮಾನಿಸ ಲಾಯಿತು. ಮೀಯಾರು ಗ್ರಾ. ಪಂ. ಅಧ್ಯಕ್ಷೆ ರಾಜೇಶ್ವರೀ ಅವರನ್ನು ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಸಾಧನಾ ಮಂಗಳೂರು ಅವರಿಗೆ ವಿಶೇಷ ಪ್ರತಿಭಾ ಪುರಸ್ಕಾರ ನೀಡಲಾಯಿತು.

Advertisement

ಸಮಾಜ ಸಂಘದ ಕಾರ್ಯದರ್ಶಿ ರಾಜೇಶ್‌ ಪಾಟೀಲ್‌ ಸ್ವಾಗತಿಸಿದರು. ಗಾಯತ್ರಿ ಎಸ್‌., ದಿವ್ಯಾ ಪ್ರದೀಪ್‌ ಮತ್ತು ದಿವ್ಯಾ ಮಧುಸೂದನ್‌ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ವಿಭಾಗದ ಮಹಿಳಾ ಉಪ ಸಂಚಾಲಕಿ ಉಷಾ ರಾಜೇಶ್ವರ್‌ ವಂದಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಾಸಕರಿಗೆ ಮನವಿ
ಆರ್ಯ-ಮರಾಠ ಸಮಾಜವನ್ನು ಕೇರಳದ ಹಿಂದುಳಿದ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಶಾಸಕ ಎನ್‌.ಎ. ನೆಲ್ಲಿಕುನ್ನು ಅವರಿಗೆ ಸಮಾಜ ಸಂಘದ ಅಧ್ಯಕ್ಷ ಯತೀಂದ್ರ ಎ. ಬಹುಮಾನ್‌ ಮನವಿಯನ್ನು ಸಲ್ಲಿಸಿದರು. ಈ ಮನವಿಯನ್ನು ಮುಂದಿನ ವಿಧಾನ ಸಭಾ ಅಧಿವೇಶನದ ಸಂದರ್ಭದಲ್ಲಿ ಮಂಡಿಸುವ ಭರವಸೆಯನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next