Advertisement

ಅಂಗನವಾಡಿ ಕಾರ್ಯಕರ್ತೆಯರಿಂದ ಮುಷ್ಕರ

08:40 AM Aug 10, 2017 | Team Udayavani |

ಮಂಗಳೂರು: ರಾಜ್ಯ ಸರಕಾರ ಅಕ್ಟೋಬರ್‌ 2ರಿಂದ ಜಾರಿಗೊಳಿಸಲು ಉದ್ದೇಶಿಸಿರುವ ಮಾತೃಪೂರ್ಣ ಯೋಜನೆ ಹಲವು ಸಮಸ್ಯೆಗಳಿಂದ ಕೂಡಿದೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆ ಬೇಡ ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿ ಯರ ಸಂಘದ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಬುಧವಾರ ಮುಷ್ಕರ ನಡೆಯಿತು.

Advertisement

ಈ ವೇಳೆ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಮಾತನಾಡಿ, ಸರಕಾರ ಯಾವುದೇ ಯೋಜನೆಯನ್ನು ಜಾರಿಗೊಳಿಸಿದರೂ ಅದರಲ್ಲಿ ಅಂಗನ ವಾಡಿ ಕಾರ್ಯಕರ್ತೆಯರನ್ನು ಬಳಸಿ
ಕೊಳ್ಳಲಾಗುತ್ತಿದೆ. ಇದೀಗ ಮಾತೃ ಪೂರ್ಣ ಯೋಜನೆಯನ್ನು ಜಾರಿಗೊಳಿಸಲು ಹೊರಟಿದೆ. ಆದರೆ ನಮ್ಮ ಜಿಲ್ಲೆಯ ದೃಷ್ಟಿಯಿಂದ ನೋಡುವುದಾದರೆ ಇದು ಅನಗತ್ಯ ಯೋಜನೆಯಾಗಿದೆ ಎಂದರು.

ಊಟಕ್ಕೆ ಬರಲು ಒಪ್ಪಲಾರರು
ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್‌. ಮಾತನಾಡಿ, ರಾಯಚೂರಿ ನಂತಹ ಹಿಂದುಳಿದ ಜಿಲ್ಲೆಗಳಿಗೆ ಮಾತ್ರ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಅನಂತರ ಪ್ರಾಯೋಗಿಕವಾಗಿ ಮೈಸೂರಿನಲ್ಲಿಯೂ ಮಾಡಲಾಯಿತಾದರೂ ಕೇವಲ ಶೇ. 3ರಷ್ಟು  ಯಶಸ್ಸಾಗಿದೆ. ದ.ಕ.ದಲ್ಲಿ ಅಂಗನವಾಡಿ ತನಕ ಬಂದು ಊಟ ಮಾಡಲು ಗರ್ಭಿಣಿ/ಬಾಣಂತಿಯರು ಒಪ್ಪುವುದಿಲ್ಲ. ನಮ್ಮ ಜಿಲ್ಲೆಗೆ ಈ ಯೋಜನೆ ಅಗತ್ಯವೇ ಇಲ್ಲ ಎಂದರು.

ಸಂಘದ ದ.ಕ. ಜಿಲ್ಲಾಧ್ಯಕ್ಷೆ ವಿಶಾಲಾಕ್ಷಿ, ಕಾರ್ಯದರ್ಶಿ ಚಂದ್ರಾವತಿ, ಖಜಾಂಚಿ ಲತಾ ಅಂಬೆಕಲ್ಲು, ಉಪಾಧ್ಯಕ್ಷರಾದ ಕವಿತಾ ಪುತ್ತೂರು, ಸುಜಾತಾ ಕಲ್ಲಾಪು, ಗೌರವ ಸಲಹೆಗಾರ್ತಿ ಅರುಣಾ ಡಿ. ಪುತ್ತೂರು, ಮಂಗಳೂರು ಗ್ರಾಮಾಂತರ ಅಧ್ಯಕ್ಷೆ ಶೋಭಾ, ಪುತ್ತೂರು ತಾಲೂಕು ಅಧ್ಯಕ್ಷೆ ಪುಷ್ಪಾವತಿ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುಂದರ ಪೂಜಾರಿ, ಕಾರ್ಯಕ್ರಮಾಧಿಕಾರಿ ನಟರಾಜ್‌ ಸ್ಥಳಕ್ಕಾಗಮಿಸಿ ಮುಷ್ಕರ ನಿರತ ಕಾರ್ಯಕರ್ತೆಯ ರೊಂದಿಗೆ ಮಾತುಕತೆ ನಡೆಸಿದರು. ಅನಂತರ ಜಿಲ್ಲಾಧಿಕಾರಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಸುಮಾರು 1,000ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾ ಯಕಿಯರು ಭಾಗವಹಿಸಿದ್ದರು.

Advertisement

ಸರಕಾರ ಉತ್ತರಿಸಿಲ್ಲ
ಸಣ್ಣ ಕೊಠಡಿಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೇ ಕುಳಿತುಕೊಳ್ಳಲು ಸ್ಥಳವಿಲ್ಲದಿರು ವಾಗ ಕನಿಷ್ಠ 20ರಿಂದ 60ರ ವರೆಗೆ ಇರುವ ಮಾತೆಯರಿಗೆ ಹೇಗೆ ವ್ಯವಸ್ಥೆ ಮಾಡುವುದು ಎಂಬುದನ್ನು ಸರಕಾರ ತಿಳಿಸಿಲ್ಲ. ಇಷ್ಟು ಮಂದಿಗೆ ಅಡುಗೆ ಮಾಡಲು ಪಾತ್ರೆ, ಉರುವಲು, ಶುದ್ಧ ನೀರಿನ ವ್ಯವಸ್ಥೆ ಹೇಗೆಂದು ಹೇಳಿಲ್ಲ. ಅಷ್ಟೇ ಅಲ್ಲ ಅಡುಗೆ ಮಾಡಿದ ಅನಂತರ ಊಟ ಮಾಡಲು ಗರ್ಭಿಣಿ/ಬಾಣಂತಿಯರು ಬರುತ್ತಾರೆ ಎಂಬುದು ಏನು ಖಚಿತ ಎಂದು ಪ್ರಶ್ನಿಸಿದ ಜಯಲಕ್ಷ್ಮೀ ಬಿ.ಆರ್‌., ಈಗಾಗಲೇ ಅನೇಕ ಮಂದಿ ಗರ್ಭಿಣಿ/ಬಾಣಂತಿಯರು ತಮಗೆ ಈ ಯೋಜನೆ ಅಗತ್ಯವಿಲ್ಲ ಎಂದೇ ಹೇಳಿದ್ದಾರೆ ಎಂದರು. ಈ ಯೋಜನೆಯನ್ನು ಕೈಬಿಟ್ಟು, ಈ ಹಿಂದಿನಂತೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಮನೆಗೇ ಆಹಾರ ಪದಾರ್ಥಗಳನ್ನು ಪೂರೈಸುವ ಯೋಜನೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next