Advertisement

ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಮುಷ್ಕರ

10:52 AM Dec 17, 2021 | Team Udayavani |

ಕಲಬುರಗಿ: ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸಿದ್ದು, ಇದರ ಪ್ರಕ್ರಿಯೆ ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ಎರಡು ದಿನಗಳ ರಾಷ್ಟ್ರವ್ಯಾಪಿ ಬಾಂಕ್‌ ಮುಷ್ಕರದ ಅಂಗವಾಗಿ ನಗರದಲ್ಲೂ ಗುರುವಾರ ವಿವಿಧ ಬ್ಯಾಂಕ್‌ಗಳ ನೂರಾರು ನೌಕರರು ಪ್ರತಿಭಟನೆ ನಡೆಸಿದರು.

Advertisement

ನಗರದ ಜಗತ್‌ ವೃತ್ತದಲ್ಲಿ ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘ (ಎಐಬಿಇಎ)ದ ನೇತೃತ್ವದಲ್ಲಿ ಹಾಗೂ ಸೂಪರ್‌ ಮಾರ್ಕೆಟ್‌ನಲ್ಲಿರುವ ಕೆನರಾ ಬ್ಯಾಂಕ್‌ ಪ್ರಧಾನ ಕಚೇರಿ ಸಮೀಪ ಕೆನರಾ ಬ್ಯಾಂಕ್‌ ಅಧಿಕಾರಿಗಳ ಸಂಘ (ಸಿಬಿಒಎ) ಮತ್ತು ಅಖೀಲ ಭಾರತ ರಾಷ್ಟ್ರೀಕೃತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ (ಎಐಎನ್‌ಬಿಒಎಫ್‌)ದ ನೇತೃತ್ವದಲ್ಲಿ ಮುಷ್ಕರ ಕೈಗೊಳ್ಳಲಾಯಿತು.

2021-22ರ ಬಜೆಟ್‌ನಲ್ಲಿ ಸರ್ಕಾರವು ಈ ವರ್ಷದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವುದಾಗಿ ಘೋಷಿಸಿತ್ತು. ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿದರೇ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ಬ್ಯಾಂಕ್‌ ಶಾಖೆಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತಿದೆ. ಅಲ್ಲದೇ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾದ ಎಲ್ಲ ಸರ್ಕಾರಿ ಯೋಜನೆಗಳ ಅನುಷ್ಠಾನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾನಿರತ ಬ್ಯಾಂಕ್‌ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.

ಈಗ ನಡೆಯುತ್ತಿರುವ ‌ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕ್‌ ಖಾಸಗೀಕರಣ ಮಸೂದೆ (ಬ್ಯಾಂಕಿಂಗ್‌ ಕಾನೂನುಗಳ ತಿದ್ದುಪಡಿ ಮಸೂದೆ-2021) ಮಂಡಿಸಬಾರದು. ಈ ಸೂಕ್ತವಾದ ಭರವಸೆಯನ್ನು ಸರ್ಕಾರ ನೀಡಿದರೆ, ಮುಷ್ಕರ ನಿಲ್ಲಿಸಬಹುದು. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಭರವಸೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಅನುಕೂಲಕ್ಕಾಗಿ 1980ರ ದಶಕದಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲಾಗಿತ್ತು. ಜನರು ಕಷ್ಟಪಟ್ಟುಗಳಿಸಿದ ಹಣವನ್ನು ಯಾವುದೋ ಖಾಸಗಿಯವರ ಪಾಲಾಗಿ ದುರುಪಯೋಗ ಬಾರದು ಎಂಬ ಉದ್ದೇಶದಿಂದ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಲಾಗಿದೆ. ಆದರೆ, ಈಗಿನ ಸರ್ಕಾರ ಇದ್ಯಾವುದನ್ನು ಯೋಚಿಸದೇ ಬ್ಯಾಂಕ್‌ ಗಳನ್ನು ಖಾಸಗಿ ವರೆಗೆ ಒಪ್ಪಿಸಲು ಮುಂದಾಗಿದೆ ಎಂದು ಕಿಡಿಕಾರಿದರು.

Advertisement

ರಾಜ್ಯದಲ್ಲೇ ಬೆಂಗಳೂರಿನ ಗುರು ರಾಘವೇಂದ್ರ ಅ‌ರ್ಬನ್‌ ಸಹಕಾರ ಸಂಘ, ವಿಜಯಪುರದ ಡೆಕ್ಕನ್‌ ಬ್ಯಾಂಕ್‌ ಸೇರಿದಂತೆ ಹಲವು ಖಾಸಗಿ ವಲಯದ ಬ್ಯಾಂಕ್‌ಗಳು ದಿವಾಳಿಯಾಗಿವೆ. ನಷ್ಟದ ಸುಳಿಗೆ ಸಿಲುಕಿದ ಖಾಸಗಿ ಸ್ವಾಮ್ಯದ ‌ ಯೆಸ್‌ ಬ್ಯಾಂಕ್‌ ಮುಳುಗಿದಾಗ ಅದರ ಗ್ರಾಹಕರ ‌ ನೆರವಿಗೆ ಎಸ್‌ಬಿಐ ಬಂದಿತು. ಆದರೆ, ಇದೇ ಮುಂದೊಂದು ದಿನ ಎಲ್ಲವೂ ಖಾಸಗೀ‌ಕರಣವಾದರೆ ಗ್ರಾಹಕರ ಹಿತವನ್ನು ಕಾಯುವವರು ಯಾರು ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.

ಸರ್ಕಾರದ ಉದ್ದೇಶಿತ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಂಡರೆ ಈಗಿನಂತೆ ಉದ್ಯೋಗಗಳು ಸಿಗುವುದಿಲ್ಲ. ಜನರ ಹಣದ ಠೇವಣಿಗೆ ಭದ್ರತೆ ಇರುವುದಿಲ್ಲ. ಬ್ಯಾಂಕಿಂಗ್‌ ವ್ಯವಸ್ಥೆ ತನ್ನ ಮೂಲ ಉದ್ದೇಶವನ್ನೇ ಕಳೆದುಕೊಳ್ಳಲಿದೆ. ಆದ್ದರಿ‌ಂದ ಸರ್ಕಾರ ತಕ್ಷಣವೇ ಈ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಿದರು.

ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಾದ ಚಂದ್ರಮೋಹನ, ವಿಜಯಲಕ್ಷ್ಮೀ ಮುಕ್ಯಾ, ಸತೀಶ ರಾಮಚಂದ್ರ ಚವ್ಹಾಣ, ವೇಣುಗೋಪಾಲ ಸಿಂಗ್‌, ಸತೀಶ ಜೋಶಿ, ರಮಾ ದರ್ಗಿ, ರವಿಗೌಡ, ಶ್ರೀಧರ, ರವಿಶಂಕರ, ಸಂತೋಷ ಪಾಟೀಲ, ಮದನ, ವಿದ್ಯಾ, ಪ್ರೀತಿ, ವಸೀಮಾ, ವೆಂಕಟೇಶ, ಪ್ರವೀಣ ಸಾಗರ್‌, ಗಂಗಾರಾಜು ಹಾಗೂ ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next