Advertisement

ಎರವಲು ಸೇವೆಗೆ ಬ್ರೇಕ್‌ ಹಾಕಲು ಕಠಿಣ ನಿಯಮ: ಸಿಎಂ

08:48 PM Dec 22, 2022 | Team Udayavani |

ಸುವರ್ಣ ವಿಧಾನಸೌಧ: ಸರ್ಕಾರಿ ನೌಕರರು ಅಂತರ್‌ ಇಲಾಖೆಗಳಿಗೆ ಸಮಾನಾಂತರ ಹುದ್ದೆಗಳಿಗೆ ಎರವಲು ಸೇವೆ (ಡೆಪ್ಯೂಟೇಶನ್‌) ಅರಸಿ ಹೋಗುವುದನ್ನು ತಡೆಯಲು ಕಠಿಣ ನಿಯಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಗುರುವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿ, ಸಂಕಷ್ಟದಲ್ಲಿರುವ ನೌಕರರಿಗೆ ಅನುಕೂಲವಾಗಲು ಮಾಡಿದ ಸಣ್ಣ ಕಿಟಕಿಯಲ್ಲೇ ಎಲ್ಲ ನೌಕರರು ತೂರುತ್ತಿದ್ದಾರೆ. ಡೆಪ್ಯೂಟೇಶನ್‌ ಯಾರಿಗೆ ಕೊಡಬೇಕು, ಯಾವಾಗ ಕೊಡಬೇಕು, ಅವಧಿ ಎಷ್ಟು? ಎಂಬೆಲ್ಲ ವಿಚಾರಗಳು ಇಲ್ಲವೇ ಇಲ್ಲವಾಗಿವೆ. ಅಧಿಕಾರಿಗಳು ಕೂಡ ತಮ್ಮ ಅನುಕೂಲಕ್ಕಾಗಿ ಅವಧಿ ವಿಸ್ತರಣೆ ಮಾಡಿಕೊಳ್ಳುತ್ತ ಸಾಗಿದ್ದು ನನ್ನ ಗಮನಕ್ಕೂ ಬಂದಿದೆ. ಪೊಲೀಸ್‌ ಇಲಾಖೆಯವರು ನೋಂದಣಿ ಇಲಾಖೆಗೆ ಕೇಳುತ್ತಾರೆ ಎಂದರು.

ಮಧ್ಯ ಪ್ರವೇಶಿಸಿದ ಭಂಡಾರಿ, ಒಂದೊಂದು ಇಲಾಖೆಯಲ್ಲಿ ನುರಿತವರು ಇನ್ನೊಂದು ಇಲಾಖೆಗೆ ಹೊದರೆ ಉತ್ತಮ ಸೇವೆ ಅಸಾಧ್ಯ ಹೀಗಾಗಿ ಎರವಲು ಸೇವೆಗೆ ಕೂಡಲೇ ಬ್ರೇಕ್‌ ಹಾಕಬೇಕು ಎಂದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಪಶು ಸಂಗೋಪನ ಇಲಾಖೆಯಲ್ಲಿ ಹುದ್ದೆಗಳು ಮೊದಲೇ ಖಾಲಿ ಇವೆ. ಇಲ್ಲಿಯವರು ಬೇರೆ ಇಲಾಖೆಗೆ ಹೋಗದಂತೆ ನಾನೇ ಖುದ್ದು ಮುತುವರ್ಜಿ ವಹಿಸಿದ್ದೇನೆ. ಶಾಸಕರು ಕೂಡ ಯಾವುದೇ ಕಾರಣಕ್ಕೂ ಇಂತಹ ಪ್ರಕರಣಗಳ ವಿಚಾರದಲ್ಲಿ ನಮ್ಮ ಮೇಲೆ ಒತ್ತಡ ತರಬಾರದು ಎಂದು ಮುಖ್ಯಮಂತ್ರಿಗಳು ಹೇಳಿದರು.

ವರ್ಷದಲ್ಲಿ ಒಂದು ಲಕ್ಷ ಹುದ್ದೆಗಳ ಭರ್ತಿ :

Advertisement

ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಖಾಲಿ ಇರುವ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳ ಪೈಕಿ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜೆಡಿಎಸ್‌ ಸದಸ್ಯ ಸಿ.ಎನ್‌.ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 7,60,000 ಹುದ್ದೆಗಳಿದ್ದು, 5,11,000 ಭರ್ತಿ ಇವೆ. ಇನ್ನುಳಿದ 2,53,000 ಹುದ್ದೆಗಳು ಖಾಲಿ ಇದ್ದು ಈ ಪೈಕಿ ಜರೂರು ತುಂಬಲೇಬೇಕಾಗಿರುವ ಹುದ್ದೆಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಳೆದ ಬಜೆಟ್‌ನಿಂದ ಈ ವರ್ಷದ ಬಜೆಟ್‌ ಅವಧಿಯಲ್ಲಿ ಒಟ್ಟು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. 11 ಸಾವಿರ ಸಫಾಯಿ ಕರ್ಮಚಾರಿಗಳ ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ. ಹೆಚ್ಚುವರಿಯಾಗಿ ಮತ್ತೆ 12 ಸಾವಿರ ಸಫಾಯಿ ಕರ್ಮಚಾರಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಲಾಗುವುದು. ಇಷ್ಟು ದೊಡ್ಡ ಮಟ್ಟದಲ್ಲಿ ಈ ಹಿಂದೆ ಯಾವ ಸರ್ಕಾರದಲ್ಲಿಯೂ ನೇಮಕಾತಿ ನಡೆದಿಲ್ಲ ಎಂದು ಹೇಳಿದರು.

ಆರ್ಥಿಕ ಬಲ ಬಂದರೆ ಗೌರವ ಧನ ಇನ್ನಷ್ಟು ಹೆಚ್ಚಳ :

ಸುವರ್ಣ ವಿಧಾನಸೌಧ: ರಾಜ್ಯದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವ ಧನವನ್ನು ಸರ್ಕಾರಕ್ಕೆ ಇನ್ನಷ್ಟು ಆರ್ಥಿಕ ಬಲ ಬಂದ ನಂತರ ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಎಂ.ಎಲ್‌.ಅನಿಲ್‌ ಕುಮಾರ ಪ್ರಶ್ನೊತ್ತರ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಗ್ರಾ.ಪಂ.ಮಟ್ಟದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಗೆ ಬಲ ತುಂಬಲು ಮತ್ತು ಗ್ರಾ.ಪಂ.ಸದಸ್ಯರಿಗೆ ಗೌರವ ಕೊಡಲು ಆವರಿಗೆ ನೀಡುವ ಗೌರವ ಧನವನ್ನು ದ್ವಿಗುಣಗೊಳಿಸಿದ್ದೇನೆ. ಅಧ್ಯಕ್ಷರಿಗೆ ಮಾಸಿಕ 6,000, ಉಪಾಧ್ಯಕ್ಷರಿಗೆ ಮಾಸಿಕ 4000 ಹಾಗೂ ಸದಸ್ಯರಿಗೆ 2000 ರೂ.ಗಳನ್ನು ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next