ಪುಂಜಾಲಕಟ್ಟೆ: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನ ಚಾಲಕರು ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ವಾಹನಗಳ ದಾಖಲೆಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಪುಂಜಾಲಕಟ್ಟೆ ಠಾಣಾಧಿಕಾರಿ ಸೌಮ್ಯಾ ಜೆ. ತಿಳಿಸಿದರು.
ಪೊಲೀಸ್ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ನಡೆದ ಶಾಲಾ ವಾಹನ ಚಾಲಕ-ಮಾಲಕರ ಸಭೆಯಲ್ಲಿ ಅವರು ಖಡಕ್ ಸೂಚನೆ ನೀಡಿದರು.
ಠಾಣಾ ವ್ಯಾಪ್ತಿಯ ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪುಂಜಾಲಕಟ್ಟೆ-ಮಡಂತ್ಯಾರು ಆಟೋ ರಿಕ್ಷಾ ಚಾಲಕ-ಮಾಲಕರು, ಇತರ ಶಾಲಾ ವಾಹನಗಳ ಚಾಲಕ-ಮಾಲಕರು, ಠಾಣೆಯ ಸಿಬಂದಿ ಉಪಸ್ಥಿತರಿದ್ದರು.
ನಿಯಮ ಉಲ್ಲಂಘಿಸಿದರೆ ಕ್ರಮ
ವಾಹನ ಸ್ಥಿತಿಗತಿ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು. ವಾಹನಗಳನ್ನು ನಿಧಾನವಾಗಿ ಚಲಾಯಿಸಬೇಕು. ಸರಕು ಸಾಗಾಟ ವಾಹನದಲ್ಲಿ ಜನರನ್ನು ಸಾಗಿಸಬಾರದು. ಮಿತಿ ಮೀರಿ ಮಕ್ಕಳನ್ನು ತುಂಬಿಸಬಾರದು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಅಳವಡಿಸಬೇಕು.
ನಿಯಮ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪುಂಜಾಲಕಟ್ಟೆ ಠಾಣಾಧಿಕಾರಿ ಸೌಮ್ಯಾ ಜೆ. ಮಾಹಿತಿ ನೀಡಿದರು.