ದಾವಣಗೆರೆ: ಕೋವಿಡ್ ವ್ಯಾಪಕ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸೋಂಕು ದೃಢಪಟ್ಟು ಗೃಹ ಪ್ರತ್ಯೇಕತೆಯಲ್ಲಿ (ಹೋಂ ಐಸೋಲೇಷನ್) ಇರುವವರ ಮನೆಗೆ “ಕೋವಿಡ್ ಹೋಂ ಐಸೋಲೇಷನ್’ ಎಂಬ ಬರಹವುಳ್ಳ ಸ್ಟಿಕ್ಕರ್ ಅಂಟಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಕಚೇರಿ ಸಭಾಂಗದಲ್ಲಿ ಮಂಗಳವಾರ ನಡೆದ ಜಿಲ್ಲೆಯ ವೈದ್ಯಕೀಯ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ದಾವಣಗೆರೆ ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟ 28 ಜನರು ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಇವರು ಹೊರಗಡೆ ಎಲ್ಲಿಯೂ ಓಡಾಡದೆ ಸಮರ್ಪಕವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ಇವರಿಂದ ಬೇರೆಯವರಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ರಾಘವನ್ ಮಾತನಾಡಿ, ಕಳೆದ ತಿಂಗಳು ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತಿದ್ದ ಕೋವಿಡ್ ಸೋಂಕು ಪ್ರಕರಣಗಳು ಮಾರ್ಚ್ ಮೂರನೆ ವಾರದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ. ಮಾರ್ಚ್ ಎರಡನೆ ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು 23 ವರದಿಯಾಗಿದ್ದು, ಪ್ರಮಾಣ ಶೇ. 0.19 ರಷ್ಟು ಇತ್ತು. ಇದೀಗ ಮಾರ್ಚ್ ಮೂರನೆ ವಾರದಲ್ಲಿ 40 ಪ್ರಕರಣಗಳು ವರದಿಯಾಗಿದ್ದು, ಪ್ರಮಾಣ 0.29ಕ್ಕೆ ಹೆಚ್ಚಳವಾಗಿರುವುದು ಆತಂಕಕಾರಿಯಾಗಿದೆ.
ಶಾಲಾ ಮಕ್ಕಳು ಮತ್ತು ಹಾಸ್ಟೆಲ್ ಮಕ್ಕಳಿಗೆ ನಿಯಮಿತವಾಗಿ ಕೋವಿಡ್ ಪರೀಕ್ಷೆ ನಡೆಸುವಂತೆ ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪರೀಕ್ಷೆಗೆ ಮಾದರಿಯನ್ನು ಸಮರ್ಪಕವಾಗಿ, ಕ್ರಮಬದ್ಧವಾಗಿ ಸಂಗ್ರಹಿಸುತ್ತಿಲ್ಲ ಎಂಬ ದೂರು ಇದೆ. ಹೀಗಾಗಿ ಮಾದರಿ ಸಂಗ್ರಹಿಸುವವರು, ಕ್ರಮಬದ್ಧವಾಗಿ ಪರೀಕ್ಷೆಗೆ ಮಾದರಿ ಸಂಗ್ರಹಿಸುವಂತೆ ಕ್ರಮ ಕೈಗೊಳ್ಳಬೇಕು. ಸೋಂಕಿತರ ಕನಿಷ್ಟ 15 ಜನ ಪ್ರಾಥಮಿಕ ಹಾಗೂ ಕನಿಷ್ಟ 40 ದ್ವಿತೀಯ ಸಂಪರ್ಕಿತರ ಪರೀಕ್ಷೆ ಮಾಡಬೇಕು. ಸೋಂಕಿತರ ಪ್ರಯಾಣ ವಿವರವನ್ನು ಸಂಗ್ರಹಿಸಬೇಕು.
ಒಂದು ವೇಳೆ ವಿವರ ನೀಡಲು ನಿರಾಕರಿಸಿದರೆ ಅಥವಾ ಅಸಹಾಕಾರ ತೋರಿದರೆ ಪೊಲೀಸ್ ನೆರವು ಪಡೆಯುವಂತೆ ಸೂಚಿಸಿದರು. ಕೋವಿಡ್ ಪ್ರಕರಣಗಳು ರಾಜ್ಯ ಹಾಗೂ ದೇಶದ ವಿವಿಧೆಡೆ ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ ಎಂತಹದೇ ಪರಿಸ್ಥಿತಿ ಬಂದರೂ, ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಬೇಕಿದೆ. ಕಳೆದ ವರ್ಷ ಹೆಚ್ಚು ಪ್ರಕರಣಗಳು ವರದಿಯಾಗುವ ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನೇ ಮತ್ತೆ ಕೈಗೊಳ್ಳಬೇಕಾಗಿ ಬರಬಹುದಾಗಿದ್ದು, ಎಲ್ಲ ಆಸ್ಪತ್ರೆಗಳು ತಮ್ಮ ಗರಿಷ್ಠ ಚಿಕಿತ್ಸಾ ಸಾಮರ್ಥ್ಯವನ್ನು ಸಿದ್ಧವಾಗಿರಿಸಿಕೊಳ್ಳಬೇಕು. ಜಿಲ್ಲಾ ಆಸ್ಪತ್ರೆಗೆ ಕಳೆದ ಬಾರಿ ಕೋಟಿ ಗಟ್ಟಲೆ ಹಣ ಖರ್ಚು ಮಾಡಿ ವಿವಿಧ ಉಪಕರಣಗಳನ್ನು ಪೂರೈಸಿದ್ದು, ಅವು ಎಲ್ಲವೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಪಂ ಸಿಇಒ ಡಾ| ವಿಜಯ ಮಹಾಂತೇಶ ದಾನಮ್ಮನವರ್, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್, ಅಪರ ಜಿಲ್ಲಾ ಧಿಕಾರಿ ಪೂಜಾರ್ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಆರ್‌ಸಿಎಚ್ ಅಧಿಕಾರಿ ಡಾ| ಮೀನಾಕ್ಷಿ, ಚಿಗಟೇರಿ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್, ತಜ್ಞ ವೈದ್ಯರಾದ ಡಾ| ಬಾಲು, ಡಾ| ಸುರೇಂದ್ರ, ಸೇರಿದಂತೆ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರು ಭಾಗವಹಿಸಿದ್ದರು.